Friday, November 22, 2024
Homeರಾಜಕೀಯ | Politics10 ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ಫಿಕ್ಸ್, 12 ಸದಸ್ಯರಿಗೆ ಡೌಟ್

10 ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ಫಿಕ್ಸ್, 12 ಸದಸ್ಯರಿಗೆ ಡೌಟ್

ಬೆಂಗಳೂರು,ಮಾ.12- ಸಾಕಷ್ಟು ವಿರೋಧದ ನಡುವೆಯೂ ಬಿಜೆಪಿ ನಾಯಕರು ಕರ್ನಾಟಕ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಈ ಬಾರಿ ಕನಿಷ್ಠ ಪಕ್ಷ ಒಂದು ಡಜನ್ ಸಂಸದರಿಗೆ ಕೊಕ್ ಸಿಗುವ ಸಾಧ್ಯತೆ ಇದೆ. ಇಂದು ಅಥವಾ ನಾಳೆ ಕರ್ನಾಟಕದ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಲು ಮುಂದಾಗಿರುವ ಕೇಂದ್ರ ಬಿಜೆಪಿ ನಾಯಕರು ಘಟಾನುಘಟಿ ನಾಯಕರಿಗೆ ಗೇಟ್ಪಾಸ್ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.

ಆಡಳಿತ ವಿರೋಧ ಅಲೆ, ವಯಸ್ಸಿನ ಹಿನ್ನಲೆ. ಅನಾರೋಗ್ಯ, ಕಾರ್ಯಕರ್ತರ ಕಡೆಗಣನೆ, ವೈಯಕ್ತಿಕ ಕಾರಣಗಳಿಂದ ಈ ಬಾರಿ 10 ರಿಂದ 12 ಲೋಕಸಭಾ ಸದಸ್ಯರಿಗೆ ಟಿಕೆಟ್ ಕೈತಪ್ಪುವ ಸಂಭವವಿದ್ದು, ಈಗಾಗಲೇ ಬಿಜೆಪಿ ಕಣಕ್ಕಿಳಿಸುವ ಅಭ್ಯರ್ಥಿಗಳ ಬಗ್ಗೆ ಹೈಕಮಾಂಡ್ ನಾಯಕರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ.

ಬಿಜೆಪಿ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯು ಕರ್ನಾಟಕದ 22 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲಾಗಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ.

ಕೇಂದ್ರದ ಮಾಜಿ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ವಿ.ಸದಾನಂದಾಗೌಡ, ಸದಾ ವಿವಾದಗಳನ್ನೇ ಸೃಷ್ಟಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ, ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ, ದಕ್ಷಣ ಕನ್ನಡದ ನಳೀನ್ ಕುಮಾರ್ ಕಟೀಲು, ದಾವಣಗೆರೆಯ ಸಿದ್ದೇಶ್, ಕೊಪ್ಪಳದ ಕರಡಿ ಸಂಗಣ್ಣ, ರಾಯಚೂರಿನ ರಾಜ ಅಮರೇಶ್ ನಾಯಕ್, ಬಾಗಲಕೋಟೆಯ ಗದ್ದಿಗೌಡರ್ ಸೇರಿದಂತೆ ಮತ್ತಿತರಿಗೆ ಕೊಕ್ ನೀಡಲಾಗುತ್ತದೆ ಎನ್ನಲಾಗಿದೆ.

ಇನ್ನು ವಯಸ್ಸಿನ ಕಾರಣಕ್ಕಾಗಿ ಚಾಮರಾಜನಗರದ ವಿ.ಶ್ರೀನಿವಾಸ್ ಪ್ರಸಾದ್, ಚಿಕ್ಕಬಳ್ಳಾಪುರದ ಬಚ್ಚೇಗೌಡ, ತುಮಕೂರಿನ ಬಸವರಾಜ್, ಬಳ್ಳಾರಿಯ ದೇವೇಂದ್ರಪ್ಪ, ವೈಯಕ್ತಿಕ ಕಾರಣದಿಂದ ಬೆಳಗಾವಿಯ ಮಂಗಳ ಅಂಗಡಿ, ಕಡೆ ಕ್ಷಣದಲ್ಲಿ ಚಿಕ್ಕೋಡಿಯ ಅಣ್ಣಾ ಸಾಹೇಬ್ ಜೊಲ್ಲೆಗೂ ಟಿಕೆಟ್ ಕೈ ತಪ್ಪಿದರೂ ಅಚ್ಚರಿಯಿಲ್ಲ.

ಎಲ್ಲಾ ಅಭ್ಯರ್ಥಿಗಳ ಹೆಸರುಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ಎರಡು ಪಟ್ಟಿಗಳಲ್ಲಿ ಘೋಷಿಸುವ ನಿರೀಕ್ಷೆಯಿದೆ. ಬಿಜೆಪಿ ಮೂಲಗಳ ಪ್ರಕಾರ, ಬೆಳಗಾವಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉಡುಪಿ-ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ ಮತ್ತು ಶಿವಮೊಗ್ಗದಿಂದ ಬಿವೈ ರಾಘವೇಂದ್ರ ಸೇರಿದಂತೆ ಕೆಲವು ಹೆಸರುಗಳನ್ನು ಅನುಮೋದಿಸಲಾಗಿದೆ.

ಮೈಸೂರು-ಕೊಡಗು, ಉತ್ತರಕನ್ನಡ ಮತ್ತು ದಕ್ಷಿಣಕನ್ನಡ ಸೇರಿದಂತೆ ಕೆಲವು ಕ್ಷೇತ್ರಗಳನ್ನು ತಡೆಹಿಡಿಯಲಾಗಿದೆ. ಪಕ್ಷದ ನಾಯಕರು ಬುಧವಾರದೊಳಗೆ ಈ ಕ್ಷೇತ್ರಗಳ ಹೆಸರನ್ನು ತೆರವುಗೊಳಿಸುವ ನಿರೀಕ್ಷೆಯಿದೆ. ಚಿಕ್ಕೋಡಿಯಿಂದ ರಮೇಶ್ ಕತ್ತಿ, ಚಿಕ್ಕಬಳ್ಳಾಪುರದಿಂದ ಡಾ.ಸುಧಾಕರ್, ವಿಜಯಪುರದಿಂದ ಗೋವಿಂದ್ ಕಾರಜೋಳ, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ, ಬೆಂಗಳೂರು ಸೆಂಟ್ರಲ್ನಿಂದ ಪಿ.ಸಿ.ಮೋಹನ್, ಬೆಂಗಳೂರು ಗ್ರಾಮಾಂತರದಿಂದ ಡಾ.ಸಿ.ಎನ್.ಮಂಜುನಾಥ್, ತುಮಕೂರಿನಿಂದ ವಿ ಸೋಮಣ್ಣ, ಹಾವೇರಿಯ ಬಸವರಾಜ ಬೊಮ್ಮಾಯಿ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೈಸೂರು ಕ್ಷೇತ್ರದ ಸಂಸದ ಪ್ರತಾಪಸಿಂಹ ಅವರಿಗೆ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತವಾಗಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಹೆಸರುಗಳನ್ನು ಪಕ್ಷದ ಮುಖಂಡರು ಅನುಮೋದಿಸಿದ್ದು, ಅಂತಿಮ ಪಟ್ಟಿ ಪ್ರಕಟವಾದ ನಂತರವಷ್ಟೇ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.

ಬೆಂಗಳೂರು ದಕ್ಷಿಣದಿಂದ ಈ ಸಲನೂ ತೇಜಸ್ವಿ ಸೂರ್ಯ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಿ.ಸಿ.ಮೋಹನ್,ಬೀದರ್ನಿಂದ ಭಗವಂತ್ ಖೂಬಾ, ಕಲಬುರಗಿಯಿಂದ ಉಮೇಶ್ ಜಾಧವ್, ಬಾಗಲಕೋಟೆಯಿಂದ ಬಸನಗೌಡ ಪಾಟೀಲ್ ಯತ್ನಾಳ್, ಅಥವಾ ಮುರಿಗೇಶ್ ನಿರಾಣಿ, ರಾಯಚೂರಿನಿಂದ ಮಾಜಿ ಸಂಸದ ಬಿ.ವಿ.ನಾಯಕ್ಗೆ ಟಿಕೆಟ್ ಸಿಗಲಿದೆ ಎಂದು ಹೇಳಲಾಗಿದೆ. ದಕ್ಷಿಣಕನ್ನಡ ಸಂಸದ ನಳೀನ್ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದ್ದು, ಈ ಕ್ಷೇತ್ರದಿಂದ ಆರ್ಎಸ್ಎಸ್ನ ಬ್ರಿಜೇಶ್ ಚೌತಲಗೆ ಟಿಕೆಟ್ ಸಿಗಬಹುದು. ಚಿತ್ರದುರ್ಗದಿಂದ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ.

ಪ್ರಸ್ತುತ ಕರ್ನಾಟಕದ 28 ಸ್ಥಾನಗಳಲ್ಲಿ ಬಿಜೆಪಿ 25 ಸಂಸದರನ್ನು ಹೊಂದಿದೆ ಮತ್ತು ಒಬ್ಬ ಸ್ವತಂತ್ರ ಸಂಸದರ ಬೆಂಬಲವನ್ನು ಹೊಂದಿದೆ. ಈ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಅಷ್ಟೇ ಸೀಟುಗಳನ್ನು ಉಳಿಸಿಕೊಳ್ಳಲು ಹವಣಿಸುತ್ತಿದೆ. ಕನಿಷ್ಠ 10 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸಪ್ತಗಿರಿಗೌಡ, ನಂದೀಶ್ ರೆಡ್ಡಿ, ವಿವೇಕ್ ರೆಡ್ಡಿ ಅವರುಗಳ ಹೆಸರು ಚಾಲ್ತಿಯಲ್ಲಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಾ.ಸಿ.ಎನ್.ಮಂಜುನಾಥ್ ಹೆಸರು ಅಂತಿಮವಾಗಿದೆ. ಆದರೆ ಮಂಜುನಾಥ್ ಅವರು ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಸಿ.ಪಿ.ಯೋಗೀಶ್ವರ್ ಹೆಸರನ್ನೂ ಪಟ್ಟಿಯಲ್ಲಿ ಸೇರಿಸಿದೆ. ಬೆಳಗಾವಿ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ಗೆ ಮಣೆ ಹಾಕುವ ಸಂಭವವಿದೆ.

ದಕ್ಷಿಣಕನ್ನಡದಲ್ಲಿ ನಳೀನ್ಕುಮಾರ್ ಕಟೀಲ್ಗೆ ತೀವ್ರ ವಿರೋಧ ಎದುರಾಗಿರುವ ಕಾರಣ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸಿ ಕಮಲ ಕೋಟೆಯನ್ನು ಮತ್ತೆ ಭದ್ರ ಮಾಡಿಕೊಳ್ಳುವ ಪ್ಲಾನ್ ಕೂಡ ಇದೆ. ಉತ್ತರಕನ್ನಡದಿಂದ ಅನಂತ ಕುಮಾರ್ ಹೆಗಡೆಗೆ ಟಿಕೆಟ್ ಸಿಗುತ್ತಾ ಇಲ್ಲವೋ ಗೊತ್ತಿಲ್ಲ. ಆದರೆ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ಅಂತಿಮವಾದರೂ ಅಚ್ಚರಿಯಿಲ್ಲ.

ದಾವಣಗೆರೆಯಲ್ಲಿ ಈ ಬಾರಿ ಜಿ.ಎಂ.ಸಿದ್ದೇಶ್ವರ್ ಬದಲು ಸಿದ್ದೇಶ್ವರ್ ಮನೆಯವರಿಗೆ ಟಿಕೆಟ್ ಸಿಗಬಹುದು. ಆದರೆ ರೇಸ್ನಲ್ಲಿರುವ ಎಂ.ಪಿ.ರೇಣುಕಾಚಾರ್ಯರ ಪರ ಯಡಿಯೂರಪ್ಪ ಬ್ಯಾಟ್ ಬೀಸಿದ್ದಾರೆ. ಅದೃಷ್ಟ ಯಾರಿಗಿದ್ಯೋ ಗೊತ್ತಿಲ್ಲ.

ಕ್ಷೇತ್ರ ಸಂಭಾವ್ಯ ಅಭ್ಯರ್ಥಿಗಳು:
ಬೆಂಗಳೂರು ಗ್ರಾಮಾಂತರ ಡಾ.ಸಿ.ಎನ್.ಮಂಜುನಾಥ್
ಬೆಳಗಾವಿ ಜಗದೀಶ್ ಶೆಟ್ಟರ್
ಚಿಕ್ಕೋಡಿ ಅಣ್ಣಾ ಸಾಹೇಬ್ ಜೊಲ್ಲೆ ರಮೇಶ್ ಕತ್ತಿ
ವಿಜಯಪುರ ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ
ಕೊಪ್ಪಳಸಂಗಣ್ಣ ಕರಡಿ ಅಥವಾ ಡಾ.ಬಸವರಾಜ್ ಕ್ಯಾವಟರ್
ಹಾವೇರಿ ಬಸವರಾಜ ಬೊಮ್ಮಾಯಿ
ದಕ್ಷಿಣ ಕನ್ನಡ ಬ್ರಿಜೇಶ್ ಚೌತಲ
ಉತ್ತರಕನ್ನಡ ಗೋಪಾಲ್ ಹೆಗಡೆ/ಚಕ್ರವರ್ತಿ ಸೂಲಿಬೆಲೆ
ಚಿತ್ರದುರ್ಗ ಎ.ನಾರಾಯಣಸ್ವಾಮಿ
ದಾವಣಗೆರೆ ಜಿ.ಎಂ.ಸಿದ್ದೇಶ್ವರ್/ಎಂ.ಪಿ.ರೇಣುಕಾಚಾರ್ಯ
ತುಮಕೂರು ವಿ.ಸೋಮಣ್ಣ
ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್
ಮೈಸೂರು ಯದುವೀರ್ ಒಡೆಯರ್/ಮಂಜುನಾಥ್
ಬೆಂಗಳೂರು ಉತ್ತರ- ಸಪ್ತಗಿರಿಗೌಡ, ನಂದೀಶ್ ರೆಡ್ಡಿ, ವಿವೇಕ್ರೆಡ್ಡಿ
ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ
ಬೆಂಗಳೂರು ಸೆಂಟ್ರಲ್ ಪಿ.ಸಿ.ಮೋಹನ್
ಬೀದರ್ ಭಗವಂತ್ ಖೂಬಾ
ಕಲಬುರಗಿ ಉಮೇಶ್ ಜಾಧವ್
ಬಾಗಲಕೋಟೆ ಪಿ.ಸಿ.ಗದ್ದಿಗೌಡರ್/ಬಸವನಗೌಡ ಪಾಟೀಲ್ ಯತ್ನಾಳ್
ರಾಯಚೂರು ರಾಜಾ ಅಮರೇಶ್ವರ್ ನಾಯಕ/ ಬಿ.ವಿ.ನಾಯಕ್
ಹುಬ್ಬಳ್ಳಿ-ಧಾರವಾಡ ಪ್ರಹ್ಲಾದ್ ಜೋಶಿ
ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ
ಬಳ್ಳಾರಿ ಬಿ.ಶ್ರೀರಾಮುಲು
ಶಿವಮೊಗ್ಗ ಬಿ.ವೈ.ರಾಘವೇಂದ್ರ
ಚಾಮರಾಜನಗರ ಡಾ.ಮೋಹನ್ ಕುಮಾರ್/ಅನ್ನದಾನಿ

RELATED ARTICLES

Latest News