ಬೆಂಗಳೂರು, ಮಾ.13- ಸರ್ಕಾರದ ವತಿಯಿಂದ ಗಂಭೀರ ವಿಚಾರಗಳ ಕುರಿತು ಗೊಂದಲಕಾರಿ ಹೇಳಿಕೆಗಳು ಹೊರಬರುವುದನ್ನು ನಿಯಂತ್ರಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಐವರು ಸಚಿವರನ್ನು ವಕ್ತಾರರನ್ನಾಗಿ ನೇಮಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಬಿ.ಖಂಡ್ರೆ, ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಅವರನ್ನು ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ಐವರು ಸಚಿವರಿಗೆ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಸರ್ಕಾರದ ಸಾಧನೆಗಳು, ದಾಖಲೆಗಳು ಮತ್ತು ಮಾಹಿತಿಗಳನ್ನು ಕಾಲಕಾಲಕ್ಕೆ ಒದಗಿಸಬೇಕು ಎಂದು ಆದೇಶಿಸಿದ್ದಾರೆ.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಗೊಂದಲಕಾರಿ ಹೇಳಿಕೆಗಳು ನೀಡಬಾರದು ಎಂಬ ಉದ್ದೇಶಕ್ಕಾಗಿ ಸರ್ಕಾರಕ್ಕೆ ವಕ್ತಾರರನ್ನು ನೇಮಿಸಲಾಗಿದೆ.
ಈ ಐವರಲ್ಲಿ ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ ಅವರು ಈ ಹಿಂದೆ ಪಕ್ಷದ ವಕ್ತಾರರಾಗಿಯೂ ಕೆಲಸ ಮಾಡಿದ್ದರು. ಈ ಐದು ಮಂದಿಯೂ ಸೈದ್ಧಾಂತಿಕವಾಗಿ ಆಡಳಿತಾತ್ಮಕವಾಗಿ ಅನುಭವಿಗಳಾಗಿದ್ದು, ಬಿಜೆಪಿ ವಿರುದ್ಧ ಆಕ್ರಮಣಕಾರಿ ವಾಗ್ದಾಳಿಗೆ ಹೆಸರುವಾಸಿಯಾಗಿದ್ದಾರೆ.
ಕೆಲವು ಕ್ಲಿಷ್ಟ ಹಾಗೂ ಸಂಕೀರ್ಣ ಸಂದರ್ಭದಲ್ಲಿ ಸರ್ಕಾರದ ನಿಲುವುಗಳನ್ನು ಬಲವಾಗಿ ಸಮರ್ಥಿಸಿಕೊಂಡು ಎದುರಾಳಿಗಳಿಗೆ ತಿರುಗೇಟು ನೀಡುವಲ್ಲಿ ಹಲವು ಬಾರಿ ಯಶಸ್ವಿಯಾಗಿದ್ದಾರೆ.ಇತ್ತೀಚೆಗೆ ಸಂತೋಷ್ ಲಾಡ್ ಮತ್ತು ಕೃಷ್ಣ ಭೈರೇಗೌಡ ಅವರು ಕೇಂದ್ರ ಸರ್ಕಾರದ ವಿರುದ್ಧ ವಿಶ್ಲೇಷಣಾತ್ಮಕವಾಗಿ ಟೀಕೆ ಮಾಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಳೆದೂ, ತೂಗಿ ಸಂಪುಟದ ಯುವ ಸಚಿವರನ್ನು ವಕ್ತಾರರನ್ನಾಗಿ ನೇಮಿಸಿದ್ದಾರೆ.