Homeಅಂತಾರಾಷ್ಟ್ರೀಯತೀವ್ರಗೊಂಡ ಅಮೆರಿಕ–ಇರಾನ್ ಸಂಘರ್ಷ : 8 ತೈಲ ಟ್ಯಾಂಕರ್‌ಗಳು ಧ್ವಂಸ

ತೀವ್ರಗೊಂಡ ಅಮೆರಿಕ–ಇರಾನ್ ಸಂಘರ್ಷ : 8 ತೈಲ ಟ್ಯಾಂಕರ್‌ಗಳು ಧ್ವಂಸ

ಟೆಹ್ರಾನ್‌, ಸೆ.9- ಪರ್ಷಿಯನ್‌ ಕೊಲ್ಲಿ ಹಾಗೂ ಓಮನ್‌ ಕೊಲ್ಲಿ ಪ್ರದೇಶದಲ್ಲಿ ಅಮೆರಿಕ ಮತ್ತು ಇರಾನ್‌ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ.ಕಳೆದ ಎರಡು ದಿನಗಳಲ್ಲಿ ಅಮೆರಿಕದ ಯುದ್ಧನೌಕೆಯ ಮೇಲೆ ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ (ಐಆರ್‌ಜಿಸಿ) ಬ್ಯಾಲಿಸ್ಟಿಕ್‌ ಕ್ಷಿಪಣಿಗಳಿಂದ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕದ ಸೆಂಟ್ರಲ್‌ ಕಮಾಂಡ್‌ ಪಡೆಗಳು ಪ್ರತೀಕಾರದ ಕಾರ್ಯಾಚರಣೆ ನಡೆಸಿವೆ. ಖಾರ್ಗ್‌ ದ್ವೀಪ ಹಾಗೂ ಓಮನ್‌ ಕೊಲ್ಲಿ ಸಮೀಪ ಇರಾನ್‌ಗೆ ಸೇರಿದ ಐದು ಬೃಹತ್‌ ಕಚ್ಚಾ ತೈಲ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅಮೆರಿಕ ಹೇಳಿದೆ.

ಓಮನ್‌ ಕೊಲ್ಲಿಯಲ್ಲಿ ಇರಾನ್‌ನ ಐದು ಹಡಗುಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದ್ದು, ದಾಳಿ ಆರಂಭಿಸುವ ಮುನ್ನ ಎಲ್ಲಾ ಐದು ಹಡಗುಗಳಲ್ಲಿದ್ದ ಸಿಬ್ಬಂದಿಗೆ ಸುರಕ್ಷಿತವಾಗಿ ಹೊರಬರುವಂತೆ ನೇರ ಸೂಚನೆ ನೀಡಲಾಗಿತ್ತು ಎಂದು ಅಮೆರಿಕದ ಸೇನಾ ಕಮಾಂಡ್‌ ತಿಳಿಸಿದೆ.

ಈ ಟ್ಯಾಂಕರ್‌ಗಳನ್ನು ಐಆರ್‌ಜಿಸಿ ತನ್ನ ಪ್ರಾದೇಶಿಕ ಪ್ರಾಕ್ಸಿ ಸಶಸ್ತ್ರ ಗುಂಪುಗಳಿಗೆ ಹಣಕಾಸು ಒದಗಿಸಲು ಬಳಸುತ್ತಿದ್ದ ಬಹುಕೋಟಿ ಡಾಲರ್‌ ಮೌಲ್ಯದ ‘ಶಾಡೋ ಆಯಿಲ್‌ ನೆಟ್‌ವರ್ಕ್‌’ನ ಭಾಗವಾಗಿದ್ದವು ಎಂದು ಅಮೆರಿಕ ಆರೋಪಿಸಿದೆ.

ಕ್ಷಿಪಣಿ ದಾಳಿ ವಿಫಲ

ಇರಾನ್‌ ಹಾರಿಸಿದ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಅಮೆರಿಕದ ರಕ್ಷಣಾ ಪಡೆಗಳು ಯಶಸ್ವಿಯಾಗಿ ತಡೆದಿವೆ. ಅಮೆರಿಕದ ಯುದ್ಧನೌಕೆಗಳಿಗೆ ಯಾವುದೇ ಹಾನಿಯಾಗಿಲ್ಲ ಹಾಗೂ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಮೆರಿಕದ ಸೆಂಟ್ರಲ್‌ ಕಮಾಂಡ್‌ (ಸೆಂಟ್‌ಕಾಮ್‌) ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್‌ 5ರಂದು ಅಮೆರಿಕದ ವಿಮಾನವಾಹಕ ನೌಕೆಯ ಮೇಲೆ ಇರಾನ್‌ ದಾಳಿ ನಡೆಸಲು ಯತ್ನಿಸಿದ ಸಂದರ್ಭದಲ್ಲಿ ಈಗಾಗಲೇ ಮೂರು ತೈಲ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಲಾಗಿತ್ತು ಎಂದು ಹೇಳಲಾಗಿದೆ. ಇದೀಗ ಮತ್ತಷ್ಟು ಐದು ಟ್ಯಾಂಕರ್‌ಗಳನ್ನು ಗುರಿಯಾಗಿಸಿರುವುದರಿಂದ ಕೇವಲ ಮೂರು ದಿನಗಳಲ್ಲಿ ಇರಾನ್‌ನ ಒಟ್ಟು ಎಂಟು ತೈಲ ಟ್ಯಾಂಕರ್‌ಗಳು ಧ್ವಂಸಗೊಂಡಂತಾಗಿದೆ.

ಇರಾನ್‌ನಿಂದ ಪ್ರತೀಕಾರದ ಕಾರ್ಯಾಚರಣೆ

ತನ್ನ ತೈಲ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಇರಾನ್‌ ‘ಯಾ ಹೈದರ್‌ ಕರ್ರಾರ್‌’ ಹೆಸರಿನಲ್ಲಿ ಪ್ರತೀಕಾರದ ಮಿಲಿಟರಿ ಕಾರ್ಯಾಚರಣೆ ಘೋಷಿಸಿದೆ. ಜೋರ್ಡಾನ್‌ನಲ್ಲಿರುವ ಅಮೆರಿಕದ ಅಲ್‌-ಅಜ್ರಾಕ್‌ ವಾಯುನೆಲೆಯನ್ನು ಗುರಿಯಾಗಿಸಿಕೊಂಡು, ಎಫ್‌-35, ಎಫ್‌-16 ಹಾಗೂ ಎಫ್‌-15 ಯುದ್ಧವಿಮಾನಗಳು ನಿಲ್ಲಿಸಲಾಗಿದ್ದ ಹ್ಯಾಂಗರ್‌ಗಳ ಮೇಲೆ ಘನ ಹಾಗೂ ದ್ರವ ಇಂಧನ ಬ್ಯಾಲಿಸ್ಟಿಕ್‌ ಕ್ಷಿಪಣಿಗಳಿಂದ ದಾಳಿ ನಡೆಸಿರುವುದಾಗಿ ಐಆರ್‌ಜಿಸಿ ಹೇಳಿಕೊಂಡಿದೆ.

ತೈಲ ಪೂರೈಕೆಗೆ ಆತಂಕ

ವಿಶ್ವದ ಶೇ.20ಕ್ಕೂ ಹೆಚ್ಚು ಕಚ್ಚಾ ತೈಲ ಸಾಗಣೆಯಾಗುವ ಪ್ರಮುಖ ಜಲಮಾರ್ಗವಾದ ಹಾರ್ಮುಜ್‌ ಜಲಸಂಧಿ ಹಾಗೂ ಖಾರ್ಗ್‌ ದ್ವೀಪದ ಸಮೀಪದಲ್ಲೇ ಸಂಘರ್ಷ ತೀವ್ರಗೊಂಡಿರುವುದು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಕದನ ಮತ್ತಷ್ಟು ವಿಸ್ತರಿಸಿದರೆ ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದ್ದು, ಇದರ ಪರಿಣಾಮವಾಗಿ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗುವ ಭೀತಿ ಎದುರಾಗಿದೆ.

RELATED ARTICLES
spot_img

Latest News