ಮಾಸ್ಕೋ, ಸೆ.9- ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.
ಪುಟಿನ್ ಅವರ ಭಾರತ ಭೇಟಿಗೂ ಮುನ್ನ ಭಾರತೀಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪೆಸ್ಕೋವ್, ಉಕ್ರೇನ್ ಸಂಘರ್ಷದ ಪ್ರಸ್ತುತ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಅವರಿಗೆ ರಷ್ಯಾ ಅಧ್ಯಕ್ಷರು ಮಾಹಿತಿ ನೀಡಲಿದ್ದಾರೆ. ಇದೇ ವೇಳೆ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳು ಹಾಗೂ ಜಾಗತಿಕ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ಹೇಳಿದರು.
ಸ್ಪುಟ್ನಿಕ್ ಇಂಡಿಯಾ ಆಯೋಜಿಸಿದ್ದ ವರ್ಚುವಲ್ ಬ್ರೀಫಿಂಗ್‌ನಲ್ಲಿ ಮಾಸ್ಕೋದಿಂದ ಮಾತನಾಡಿದ ಪೆಸ್ಕೋವ್, ಭಾರತ ಮತ್ತು ರಷ್ಯಾ ನಡುವಿನ ನಿಕಟ ಸಂಬಂಧವನ್ನು ಪ್ರಸ್ತಾಪಿಸಿದರು. ಪುಟಿನ್ ಮತ್ತು ಮೋದಿ ಅವರ ನಡುವಿನ ವೈಯಕ್ತಿಕ ಬಾಂಧವ್ಯ ಅತ್ಯಂತ ನಿಕಟವಾಗಿದ್ದು, ಇಬ್ಬರೂ ನಾಯಕರು ಜಾಗತಿಕ ಹಾಗೂ ದ್ವಿಪಕ್ಷೀಯ ವಿಚಾರಗಳನ್ನು ಮುಕ್ತ ಮತ್ತು ರಚನಾತ್ಮಕ ರೀತಿಯಲ್ಲಿ ಚರ್ಚಿಸುತ್ತಾರೆ ಎಂದು ತಿಳಿಸಿದರು.
“ನಮ್ಮ ಅಧ್ಯಕ್ಷರು ಇನ್ನೆರಡು ದಿನಗಳಲ್ಲಿ ನವದೆಹಲಿಗೆ ಭೇಟಿ ನೀಡಲಿದ್ದಾರೆ. ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ವಿವಿಧ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಗಳಿಗೂ ಹೆಚ್ಚಿನ ಮಹತ್ವವಿದೆ. ಇಬ್ಬರೂ ನಾಯಕರು ಅತ್ಯಂತ ನಿಕಟ ವೈಯಕ್ತಿಕ ಸಂಪರ್ಕ ಹೊಂದಿದ್ದು, ಜಾಗತಿಕ ಕಾರ್ಯಸೂಚಿ ಹಾಗೂ ದ್ವಿಪಕ್ಷೀಯ ಸಂಬಂಧಗಳ ಸೂಕ್ಷ್ಮ ವಿಷಯಗಳ ಬಗ್ಗೆಯೂ ಮುಕ್ತವಾಗಿ ಮತ್ತು ರಚನಾತ್ಮಕವಾಗಿ ಚರ್ಚಿಸಲು ಸಾಧ್ಯವಾಗುವಷ್ಟು ಪ್ರಾಮಾಣಿಕ ಸಂಬಂಧ ಹೊಂದಿದ್ದಾರೆ. ಇದು ಉಭಯ ದೇಶಗಳ ನಡುವಿನ ಸಹಕಾರಕ್ಕೆ ಹೊಸ ಅವಕಾಶಗಳನ್ನು ತೆರೆದಿಡಲಿದೆ” ಎಂದು ಪೆಸ್ಕೋವ್ ಹೇಳಿದರು.
ಸೆ.12-13ರಂದು ಬ್ರಿಕ್ಸ್ ಶೃಂಗಸಭೆ
2026ರ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಭಾರತವು ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಲಿದೆ. ಶೃಂಗಸಭೆಯಲ್ಲಿ ಬ್ರಿಕ್ಸ್ ಸದಸ್ಯ ಹಾಗೂ ಪಾಲುದಾರ ರಾಷ್ಟ್ರಗಳ ನಾಯಕರು ಮತ್ತು ಆಹ್ವಾನಿತ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಶೃಂಗಸಭೆಯಲ್ಲಿ ಸಾಮಾನ್ಯ ಆದ್ಯತೆಗಳ ಕುರಿತು ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ಪರಸ್ಪರ ಪ್ರಾಮುಖ್ಯತೆ ಹೊಂದಿರುವ ಜಾಗತಿಕ ಹಾಗೂ ಪ್ರಾದೇಶಿಕ ವಿಷಯಗಳ ಬಗ್ಗೆಯೂ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
