Homeರಾಷ್ಟ್ರೀಯಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಮತ್ತೆ ಜೀವ ಬೆದರಿಕೆ..!

ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಮತ್ತೆ ಜೀವ ಬೆದರಿಕೆ..!

ಶ್ರೀನಗರ, ಸೆ.9- ಜಮ್ಮು-ಕಾಶ್ಮೀರದಲ್ಲಿ ಮತ್ತೆ ಕಾಶ್ಮೀರಿ ಪಂಡಿತರಿಗೆ ಜೀವ ಬೆದರಿಕೆ ಕರೆಗಳು ಹಾಗೂ ಸಂದೇಶಗಳು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಣಿವೆಯಲ್ಲಿ ನೆಲೆಸಿರುವ ಸುಮಾರು 7,000 ಕಾಶ್ಮೀರಿ ಪಂಡಿತರಿಗೆ ಬೆದರಿಕೆಗಳು ಬಂದಿರುವ ಮಾಹಿತಿ ಹೊರಬಿದ್ದಿದೆ. ಕಾಶ್ಮೀರಿ ಪಂಡಿತ ಸರ್ಕಾರಿ ನೌಕರರು ಉದ್ಯೋಗ ತ್ಯಜಿಸಬೇಕು. ಇಲ್ಲದಿದ್ದರೆ ಮಾರಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುವ ಬೆದರಿಕೆಗಳು ಕಳೆದ ಒಂದು ತಿಂಗಳಲ್ಲಿ ಕನಿಷ್ಠ ಐದು ಬಾರಿ ಬಂದಿವೆ ಎಂದು ತಿಳಿದುಬಂದಿದೆ.

ಕಣಿವೆಯಲ್ಲಿರುವ ಕಾಶ್ಮೀರಿ ಪಂಡಿತ ಸಮುದಾಯದ ಸದಸ್ಯರು ಇತ್ತೀಚಿನ ದಿನಗಳಲ್ಲಿ ಇಂತಹ ಬೆದರಿಕೆಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ. “ನನ್ನ ಕುಟುಂಬ ಸರ್ಕಾರಿ ನೌಕರರ ಕುಟುಂಬವಲ್ಲ. ನಾವು ವ್ಯಾಪಾರ ಮಾಡುತ್ತೇವೆ. ಈ ಬಾರಿ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಲಾಗುತ್ತಿದೆ. ಆದರೆ ಕಾಶ್ಮೀರದಲ್ಲಿರುವ ಕಾಶ್ಮೀರಿ ಪಂಡಿತರಿಗೆ ಸುರಕ್ಷತೆ ಇಲ್ಲ ಎಂಬ ಆತಂಕವನ್ನು ಇದು ಕಡಿಮೆ ಮಾಡುವುದಿಲ್ಲ. ಇಂತಹ ಬೆದರಿಕೆಗಳು ಕಣಿವೆಯಲ್ಲಿ ಸಾಮಾನ್ಯವಾಗುತ್ತಿವೆ” ಎಂದು ಜಮ್ಮುವಿನಲ್ಲಿ ಕುಟುಂಬ ಹೊಂದಿರುವ ಹಾಗೂ ದೆಹಲಿಯಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತ ವಕೀಲರೊಬ್ಬರು ತಿಳಿಸಿದ್ದಾರೆ.

ವೈಯಕ್ತಿಕ ಮಾಹಿತಿ ಸೋರಿಕೆ ಆರೋಪ

ಪಂಡಿತ ಸಮುದಾಯದ ಧ್ವನಿ ಎಂದು ಗುರುತಿಸಿಕೊಂಡಿರುವ ಸಬಾ ಕೌಲ್‌ ಅವರು ಈ ಬೆಳವಣಿಗೆಯನ್ನು ಗಂಭೀರ ಹಾಗೂ ಆತಂಕಕಾರಿ ಭದ್ರತಾ ಬಿಕ್ಕಟ್ಟು ಎಂದು ಬಣ್ಣಿಸಿದ್ದಾರೆ.

ಕಾಶ್ಮೀರಿ ಪಂಡಿತ್‌ ಪ್ಯಾಕೇಜ್‌ ಅಡಿಯಲ್ಲಿ ಉದ್ಯೋಗ ಪಡೆದಿರುವ ನೌಕರರಿಗೆ ನೇರವಾಗಿ ಬೆದರಿಕೆ ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪರಿಶೀಲಿತ ಫೋನ್‌ ಸಂಖ್ಯೆಗೆ ಸಂಪರ್ಕ ಹೊಂದಿರುವ ಮತ್ತು 10 ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯವಾಗಿರುವ ತಮ್ಮ ಖಾತೆಯಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ಕೌಲ್‌, ನೌಕರರ ಖಾಸಗಿ ಫೋನ್‌ ಸಂಖ್ಯೆಗಳು, ಮನೆ ವಿಳಾಸಗಳು ಹಾಗೂ ವಾಹನ ನೋಂದಣಿ ವಿವರಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ನೌಕರರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮಾರಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಘಟನೆಯನ್ನು ದತ್ತಾಂಶ ಉಲ್ಲಂಘನೆ ಎಂದು ಕರೆದಿರುವ ಕೌಲ್‌, ಕೇಂದ್ರ ಗೃಹ ಸಚಿವಾಲಯ ಹಾಗೂ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿ ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ಕಣಿವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಡಾರ್ಕ್‌ವೆಬ್‌ನಲ್ಲಿ ಮಾಹಿತಿ ಸೋರಿಕೆ?

ಶ್ರೀನಗರದಲ್ಲಿ ನೆಲೆಸಿರುವ ಹಿರಿಯ ಪತ್ರಕರ್ತರೊಬ್ಬರ ಪ್ರಕಾರ, ಬೆದರಿಕೆ ಸಂಬಂಧಿತ ದಾಖಲೆಗಳನ್ನು ವಾಟ್ಸಾಪ್‌ ಮತ್ತು ಟೆಲಿಗ್ರಾಮ್‌ ಮೂಲಕ ಹರಡುವುದಕ್ಕೂ ಮುನ್ನ ಡಾರ್ಕ್‌ವೆಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಕಾರ್ಯಕರ್ತ ಹ್ಯಾಂಡೂ ಅವರ ಪ್ರಕಾರ, ಸುಮಾರು 6,000 ಕಾಶ್ಮೀರಿ ಪಂಡಿತ್‌ ಪ್ಯಾಕೇಜ್‌ ನೌಕರರು ಕಳೆದ 15 ವರ್ಷಗಳಿಂದ ಕಾಶ್ಮೀರ ಕಣಿವೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಲ್ಲಿ ಅನೇಕರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ಶ್ರೀನಗರದ ಜೆವಾನ್‌, ಅನಂತ್‌ನಾಗ್‌ನ ಮಟ್ಟನ್‌ ಹಾಗೂ ವೀರಿನಾಗ್‌ನಲ್ಲಿ ಒಟ್ಟು 6,042 ವಸತಿ ಘಟಕಗಳನ್ನು ನಿರ್ಮಿಸಲಾಗಿದ್ದರೂ, ಕಳೆದ ಮೂರು ವರ್ಷಗಳಲ್ಲಿ ಸುಮಾರು 800 ಮಂದಿಗೆ ಮಾತ್ರ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪಂಡಿತ್‌ ನೌಕರರ ಸಾರಿಗೆ ವ್ಯವಸ್ಥೆ, ವಸತಿ ಪ್ರದೇಶಗಳು ಹಾಗೂ ಬಾಡಿಗೆ ಮನೆಗಳ ತಕ್ಷಣದ ಭದ್ರತಾ ಪರಿಶೀಲನೆ ನಡೆಸಬೇಕು. ಬೆದರಿಕೆಗಳ ಮೂಲದ ಬಗ್ಗೆ ತನಿಖೆ ನಡೆಸುವುದರ ಜತೆಗೆ ಉದ್ಯೋಗ ಭದ್ರತೆ, ಭೂ ಹಕ್ಕುಗಳು ಮತ್ತು ಸುರಕ್ಷಿತ ಪುನರ್ವಸತಿಗೆ ಖಾತರಿ ನೀಡುವ ನೀತಿಯನ್ನು ಜಾರಿಗೆ ತರಬೇಕು ಎಂದು ಹ್ಯಾಂಡೂ ಒತ್ತಾಯಿಸಿದ್ದಾರೆ.

RELATED ARTICLES
spot_img

Latest News