Homeಬೆಂಗಳೂರುಬೆಂಗಳೂರಿಗೆ ಕಾದಿದೆ ಜಲ ಸಂಕಷ್ಟ..!

ಬೆಂಗಳೂರಿಗೆ ಕಾದಿದೆ ಜಲ ಸಂಕಷ್ಟ..!

ಬೆಂಗಳೂರು, ಸೆ.9- ಮುಂಗಾರು ಮಾದರಿಯಲ್ಲೇ ಹಿಂಗಾರು ಮಳೆ ಕೂಡ ಕೈಕೊಡುವ ಸಾಧ್ಯತೆ ಇರುವುದರಿಂದ ನಗರದ ಜನರಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈ ಬಾರಿ ಮಳೆಯನ್ನೇ ನಂಬಿಕೊಂಡಿದ್ದ ರೈತರಿಗೆ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಕೈಹಿಡಿಯಲಿಲ್ಲ. ಹಲವೆಡೆ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಹೊಡೆತ ಬಿದ್ದಿದೆ. ಜಲಾಶಯಗಳಿಗೆ ಹರಿದುಬರುವ ಒಳಹರಿವು ಕಡಿಮೆಯಾಗಿರುವುದರ ಜೊತೆಗೆ ಅಂತರ್ಜಲ ಮರುಪೂರಣ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರಿದೆ.

ಮುಂಗಾರು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ರೈತರ ನಿರೀಕ್ಷೆ ಈಗ ಹಿಂಗಾರು ಮಳೆಯತ್ತ ನೆಟ್ಟಿತ್ತು. ಆದರೆ ಹಿಂಗಾರು ಮಳೆಯ ವಿಚಾರದಲ್ಲೂ ಹವಾಮಾನ ಇಲಾಖೆಯಿಂದ ಬಂದಿರುವ ಮುನ್ಸೂಚನೆ ಅನ್ನದಾತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಅಕ್ಟೋಬರ್‌ 16ರ ಬಳಿಕ ಹಿಂಗಾರು ಮಳೆ ಆರಂಭವಾಗಿ ಡಿಸೆಂಬರ್‌ ಮೊದಲ ವಾರದವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಆದರೆ ಈ ಅವಧಿಯಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಈ ಕುರಿತು ಹವಾಮಾನ ತಜ್ಞ ಸಿ.ಎಸ್‌‍. ಪಾಟೀಲ್‌ ಮಾಹಿತಿ ನೀಡಿ, ಮುಂಗಾರು ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ ಈಗಾಗಲೇ ಜಲಸಂಪನ್ಮೂಲಗಳ ಮೇಲೆ ಪರಿಣಾಮ ಕಂಡುಬಂದಿದೆ. ಹಿಂಗಾರು ಅವಧಿಯಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ವಿಶೇಷವಾಗಿ ದಕ್ಷಿಣ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಹಿಂಗಾರು ಅವಧಿಯಲ್ಲಿ ಉತ್ತಮ ಮಳೆಯ ನಿರೀಕ್ಷೆ ಇತ್ತು. ಆದರೆ ಮುಂಗಾರು ಕೊರತೆಯ ಬೆನ್ನಲ್ಲೇ ಹಿಂಗಾರು ಮಳೆಯ ಪ್ರಮಾಣವೂ ಕಡಿಮೆಯಾಗುವ ಮುನ್ಸೂಚನೆ ಸಿಕ್ಕಿರುವುದು ಆತಂಕಕ್ಕೆ ಕಾರಣವಾಗಿದೆ.

ಕೆಲ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.ಮುಂಗಾರು ಕೊರತೆಯಿಂದ ಈಗಾಗಲೇ ಹಲವು ಜಲಾಶಯಗಳ ನೀರಿನ ಮಟ್ಟದ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಹಿಂಗಾರು ಮಳೆಯೂ ಕೈಕೊಟ್ಟರೆ ಜಲಾಶಯಗಳ ಸಂಗ್ರಹ, ಅಂತರ್ಜಲ ಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ.

ವಿಶೇಷವಾಗಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳು ನೀರಿನ ಮೂಲಗಳಿಗಾಗಿ ಜಲಾಶಯಗಳು ಹಾಗೂ ಅಂತರ್ಜಲವನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಿವೆ. ಹೀಗಾಗಿ ಮುಂಗಾರು ಮತ್ತು ಹಿಂಗಾರು ಎರಡೂ ಅವಧಿಯಲ್ಲಿ ಮಳೆ ಕೊರತೆಯಾದರೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೂ ಜಲ ಸಂಕಷ್ಟ ಎದುರಾಗುವ ಆತಂಕ ಎದುರಾಗಿದೆ.

ಒಟ್ಟಿನಲ್ಲಿ, ಮುಂಗಾರು ನಿರೀಕ್ಷೆ ಹುಸಿಯಾದ ಬೆನ್ನಲ್ಲೇ ಹಿಂಗಾರು ಕೂಡ ಕೈಕೊಡುವ ಸೂಚನೆ ಅನ್ನದಾತನನ್ನು ಚಿಂತೆಗೀಡು ಮಾಡಿದೆ. ರೈತರ ಬೆಳೆ ಭವಿಷ್ಯ ಮಾತ್ರವಲ್ಲದೆ, ರಾಜ್ಯದ ನೀರಿನ ಭದ್ರತೆಯ ಮೇಲೂ ಇದೀಗ ಎಲ್ಲರ ಚಿತ್ತ ನೆಟ್ಟಿದೆ.

RELATED ARTICLES
spot_img

Latest News