ಬೆಂಗಳೂರು, ಸೆ.9- ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ, ಕಚೇರಿ ಹಾಗೂ ಸಂಬಂಧಿಕರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಇಂದು ಬೆಳಗ್ಗೆಯಿಂದ ದಾಳಿ ಆರಂಭಿಸಿದ್ದು, ತೀವ್ರ ಶೋಧ ಕಾರ್ಯಚರಣೆ ಕೈಗೊಂಡಿದೆ. ಲೋಕೋಪಯೋಗಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ವ್ಯಕ್ತಿ. ಅಹಿಂದ ವರ್ಗದ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು. ಮೂಲತಃ ಉದ್ಯಮಿ ಕೂಡ ಆಗಿದ್ದಾರೆ.
ಇಲ್ಲಿಯವರೆಗೂ ಸತೀಶ್ ಜಾರಕಿಹೊಳಿ ಅವರ ಸಂಬಂಧಿಕರು, ಆಪ್ತರ ವಿರುದ್ಧ ಇಡಿ ದಾಳಿಗಳು ಹಾಗೂ ತನಿಖೆಗಳು ನಡೆದಿದ್ದವು. ಇದೇ ಮೊದಲ ಬಾರಿಗೆ ಜಾರಿ ನಿರ್ದೇಶನಾಲಯ ನೇರವಾಗಿ ಸತೀಶ್ ಜಾರಕಿಹೊಳಿಯವರಿಗೆ ಸೇರಿದ್ದ ಸ್ಥಳಗಳ ಮೇಲೆ ಮುಗಿಬಿದ್ದಿದೆ.
ಇಂದು ಬೆಳಗ್ಗೆ 7 ಗಂಟೆಯಿಂದಲೇ ಜಾರಿ ನಿರ್ದೇಶನಾಲಯದ ದಾಳಿ ಆರಂಭವಾಯಿತು. ಬೆಂಗಳೂರು, ಬೆಳಗಾವಿ, ಗೋಕಾಕ್ ಮತ್ತು ಗೋವಾ ಸೇರಿದಂತೆ 18ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಸುಮಾರು 25ಕ್ಕೂ ಹೆಚ್ಚು ತಂಡಗಳಲ್ಲಿ ಅಧಿಕಾರಿಗಳು ಇಂದು ಮುಂಜಾನೆಯಿಂದಲೇ ಸಜ್ಜುಗೊಂಡು ಎಲ್ಲಾ ಸ್ಥಳಗಳಲ್ಲಿ ಏಕಾಏಕಿ ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿಯವರ ಸರ್ಕಾರಿ ಬಂಗಲೆ, ಡಾಲರ್ಸ್ ಕಾಲೋನಿ ನಿವಾಸ ಹಾಗೂ ಉದ್ಯಮದ ಕಚೇರಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ.ಇಂದು ಸಚಿವ ಸಂಪುಟಸಭೆ ನಿಗದಿಯಾಗಿತ್ತು. ಸಂಪುಟದಲ್ಲಿ ಭಾಗವಹಿಸುವ ಸಲುವಾಗಿ ಸತೀಶ್ಜಾರಕಿಹೊಳಿ ಬೆಂಗಳೂರಿನಲ್ಲಿದ್ದರು. ಸರ್ಕಾರಿ ನಿವಾಸದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದರು. ಈ ವೇಳೆ ಆಗಮಿಸಿದ್ದ ಇಡಿ ಅಧಿಕಾರಿಗಳು ಸಚಿವರ ಸಹಕಾರ ಕೋರಿ ತಪಾಸಣೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 7 ಕಡೆ ದಾಳಿಯಾಗಿದೆ ಎಂದು ಹೇಳಲಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ನ ಹಿಲ್ ಗಾರ್ಡನ್ನಲ್ಲಿರುವ ಸತೀಶ್ ಜಾರಕಿಹೊಳಿಯವರ ಖಾಸಗಿ ನಿವಾಸದ ಮೇಲೆ ದಾಳಿಯಾಗಿದೆ. ಬೆಳಗಾವಿ ನಗರದಲ್ಲಿ ಡಾ.ಗಿರೀಶ್ ಸೋನ್ವಾಲ್ಕರ್, ರಾಜು ಧರಗಶೆಟ್ಟಿ, ವಿಠಲ್ ಪರಸನ್ನನವರ ಮನೆ ಹಾಗೂ ಕಚೇರಿ ಸೇರಿ 5 ಕಡೆಗಳಲ್ಲಿ ಶೋಧ ನಡೆದಿದೆ. ಅದೇ ರೀತಿ ಸತೀಶ್ ಜಾರಕಿಹೊಳಿಯವರ ಭಾವ ಮೈದುನ ಆಗಿರುವ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ವೈ.ಮಂಜುನಾಥ್ ಅವರ ಮನೆಯ ಮೇಲೆ ಎರಡನೇ ಬಾರಿ ದಾಳಿಯಾಗಿದೆ.
ಕಳೆದ ಜೂನ್ 21ರಂದು ವೈ.ಮಂಜುನಾಥ್ ಅವರ ಮನೆ, ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ 176 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಆಸ್ತಿ ಪತ್ತೆಯಾಗಿದ್ದಾಗಿ ಹೇಳಲಾಗಿತ್ತು. ನಗದು, ಚಿನ್ನಾಭರಣಗಳ ಜೊತೆಗೆ ಕೆಲವು ದಾಖಲೆಗಳು ಪತ್ತೆಯಾಗಿದ್ದವು. ಅವುಗಳ ಮೂಲಕ ಮಂಜುನಾಥ್ ತಮ ಪತ್ನಿಯ ಹೆಸರಿನಲ್ಲಿ ಆಫ್ರಿಕಾದ ರುವಾಂಡದಲ್ಲಿನ ಚಿನ್ನದ ಗಣಿಗಾರಿಕೆಯಲ್ಲಿ ಹೂಡಿಕೆ ಮಾಡಿರುವುದು ತಿಳಿದು ಬಂದಿತ್ತು. ಮಂಜುನಾಥ್ ಅವರ ಪತ್ನಿಯ ಜೊತೆಗೆ ಸತೀಶ್ಜಾರಕಿ ಹೊಳಿಯವರ ಪುತ್ರ ರಾಹುಲ್ ಕೂಡ ವಿದೇಶಿ ಹೂಡಿಕೆಯಲ್ಲಿ ಪಾಲುದಾರನಾಗಿರುವುದು ಪತ್ತೆಯಾಗಿತ್ತು. 3.5 ಲಕ್ಷ ರೂ.ಗೂ ಅಧಿಕ ಮೊತ್ತದ ವಿದೇಶಿ ಕರೆನ್ಸಿಗಳು ದೊರೆತಿದ್ದವು.
ಮಂಜುನಾಥ್ ಅವರು ಬಾರ್ ಲೈಸೆನ್ಸ್ ನೀಡುವ ವಿಷಯದಲ್ಲಿ ಹಗರಣ ಮಾಡಿದ್ದಾರೆ ಎಂಬ ಆರೋಪಕ್ಕಾಗಿ ನಡೆದ ಲೋಕಾಯುಕ್ತ ತನಿಖೆ ವರದಿ ಆಧರಿಸಿ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಅದು ಸಚಿವ ಸತೀಶ್ ಜಾರಕಿಹೊಳಿಯವರಿಗೂ ಸುತ್ತಿಕೊಂಡಂತಾಗಿದೆ. ಮಂಜುನಾಥ್ ಅವರ ಪತ್ನಿ ಸತೀಶ್ ಜಾರಕಿಹೊಳಿ ಅವರ ಸಹೋದರಿಯಾಗಿದ್ದರಿಂದ ಆರಂಭಿಕ ದಾಳಿಯಲ್ಲೇ ಸತೀಶ್ ಅವರ ಹೆಸರು ಕೇಳಿಬಂದಿತ್ತು. ಆದರೆ ರಾಜಕೀಯ ಹಿನ್ನೆಲೆ ಪಡೆದುಕೊಳ್ಳಬಹುದು ಎಂಬ ಕಾರಣಕ್ಕಾಗಿ ಇಡಿ ಅಧಿಕಾರಿಗಳು ತಾಳೆ ವಹಿಸಿದಂತೆ ಕಂಡು ಬಂದಿದೆ.
ಇದೀಗ ನೇರವಾಗಿ ದಾಳಿಯಾಗಿದ್ದು, ಸಂಸದೆಯಾಗಿರುವ ಪ್ರಿಯಾಂಕ ಅವರಿಗೆ ಸೇರಿದ ಕಚೇರಿ ಮತ್ತು ನಿವಾಸದ ಮೇಲೆಯೂ ದಾಳಿಯಾಗಿದೆ. ಗೋವಾದಲ್ಲಿರುವ ಸತೀಶ್ ಜಾರಕಿಹೊಳಿಯವರ ಸಂಬಂಧಿಕರಿಗೆ ಸೇರಿದ ಸ್ಥಳಗಳಲ್ಲೂ ಇಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
