ಬೆಂಗಳೂರು,ಮಾ.14- ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಆರ್‍ಎಸ್‍ಎಸ್ ಹಿನ್ನೆಲೆಯ ಹಾಗೂ ಯುವಮುಖಂಡ ವಸಂತಗೌಡ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.ಈ ಕ್ಷೇತ್ರದಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಪ್ರಬಲ ಆಕಾಂಕ್ಷಿಗಳಾಗಿದ್ದರು.
ಇಬ್ಬರಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಹಿನ್ನೆಲೆಯಲ್ಲಿ ಇದೀಗ ಒಕ್ಕಲಿಗ ಸಮುದಾಯದ ವಸಂತಗೌಡ ಅವರಿಗೆ ಟಿಕೆಟ್ ನೀಡುವ ಸಂಭವವಿದೆ ಎಂದು ತಿಳಿದುಬಂದಿದೆ.ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ವಸಂತಗೌಡ ಅವರು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಸೇರಿದಂತೆ ವಿವಿಧ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಆದರೂ ಬಂಡಾಯ ಸಾರದೆ ಪಕ್ಷನಿಷ್ಠೆಗೆ ಬದ್ಧರಾಗಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ೀರಜ್ ಮುನಿರಾಜುಗೌಡ ಅವರ ಗೆಲುವಿಗೆ ಶ್ರಮಿಸಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕೇಂದ್ರಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಅಲ್ಲದೆ, ಹಲವಾರು ಸಮಾಜ ಸೇವೆಗಳನ್ನು ಮಾಡಿಕೊಂಡು ಬರುತ್ತಿರುವ ಅವರಿಗೆ ಟಿಕೆಟ್ ನೀಡಬೇಕೆಂದು ವರಿಷ್ಠರಿಗೆ ಜಿಲ್ಲಾ ಘಟಕ ಶಿಫಾರಸ್ಸು ಮಾಡಿದೆ.
ಸುಧಾಕರ್ ಹಾಗೂ ವಿಶ್ವನಾಥ್ ನಡುವಿನ ಜಿದ್ದಾಜಿದ್ದಿಯಲ್ಲಿ ವಸಂತಗೌಡಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಬಿಜೆಪಿಯ ಮೂರನೇ ಪಟ್ಟಿಯಲ್ಲಿ ಅಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡುವ ಸಂಭವವಿದೆ.