Homeರಾಜ್ಯಗೈಡ್ ಇಲ್ಲ, ದಾರಿ ಗೊತ್ತಿಲ್ಲ : ಎತ್ತಿನ ಭುಜ ಚಾರಣಿಗರ ಪರದಾಟ

ಗೈಡ್ ಇಲ್ಲ, ದಾರಿ ಗೊತ್ತಿಲ್ಲ : ಎತ್ತಿನ ಭುಜ ಚಾರಣಿಗರ ಪರದಾಟ

ಚಿಕ್ಕಮಗಳೂರು, ಆ.24- ಮೂಡಿಗೆರೆ ತಾಲೂಕಿನ ಪ್ರಸಿದ್ಧ ಎತ್ತಿನ ಭುಜಕ್ಕೆ ಚಾರಣಕ್ಕೆ ಆಗಮಿಸಿದ್ದ ಪ್ರವಾಸಿಗರು ಮಾರ್ಗದರ್ಶಕರಿಲ್ಲದೆ ದಾರಿ ತಪ್ಪಿ ಅರ್ಧ ಹಾದಿಯಿಂದಲೇ ವಾಪಸ್‌ ಬಂದ ಘಟನೆ ನಡೆದಿದೆ.ವಾರಾಂತ್ಯದ ಹಿನ್ನೆಲೆಯಲ್ಲಿ ನೂರಾರು ಪ್ರವಾಸಿಗರು ಎತ್ತಿನ ಭುಜ ಚಾರಣಕ್ಕೆ ಆಗಮಿಸಿದ್ದರು. ಆನ್‌ಲೈನ್‌ನಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಂಡು ಬಂದಿದ್ದ ಪ್ರವಾಸಿಗರಿಗೆ ಸ್ಥಳದಲ್ಲಿ ಗೈಡ್‌ಗಳ ವ್ಯವಸ್ಥೆ ಇಲ್ಲದಿರುವುದು ಹಾಗೂ ಚಾರಣ ಮಾರ್ಗದಲ್ಲಿ ಬೃಹತ್ ಮರಗಳು ಬಿದ್ದಿರುವುದು ತೊಂದರೆ ಉಂಟುಮಾಡಿತು.

ಹಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಚಾರಣವನ್ನು ಅರಣ್ಯ ಇಲಾಖೆ ಯಾವುದೇ ಪೂರ್ವಸಿದ್ಧತೆ ಇಲ್ಲದೆ ಪುನರಾರಂಭಿಸಿದೆ ಎಂಬ ಆರೋಪ ಕೇಳಿಬಂದಿದೆ. 5 ಕಿ.ಮೀ. ಚಾರಣಕ್ಕೆ 300 ರೂ. ಪ್ರವೇಶ ಶುಲ್ಕ ಹಾಗೂ ಗೈಡ್‌ಗೆ 75 ರೂ. ಶುಲ್ಕ ಪಡೆಯುತ್ತಿದ್ದರೂ, ಗೈಡ್‌ಗಳ ವ್ಯವಸ್ಥೆ ಮಾಡದಿರುವುದಕ್ಕೆ ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಿಂದ ಬಂದ ರಾಜೇಶ್ ಹಾಗೂ ಅವರ ತಂಡ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಚಾರಣಕ್ಕೆ ತೆರಳಿತ್ತು. ದಟ್ಟ ಕಾಡಿನ ನಡುವೆ ದಾರಿ ತಪ್ಪಿದ ಹಿನ್ನೆಲೆಯಲ್ಲಿ ಅರ್ಧ ಹಾದಿಯಿಂದಲೇ ವಾಪಸ್‌ ಬಂದಿದ್ದಾರೆ. ಚಾರಣ ಮಾರ್ಗದಲ್ಲಿ ಮರಗಳು ಬಿದ್ದಿದ್ದರಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಮಸ್ಯೆ ಪರಿಹರಿಸಲಾಗಿದೆ: ಅರಣ್ಯ ಇಲಾಖೆ

ಈ ಕುರಿತು ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಮಾತನಾಡಿ, ಆನ್‌ಲೈನ್ ಬುಕ್ಕಿಂಗ್ ಆರಂಭಿಸಿದ ಬಳಿಕ ಮೊದಲ ಬ್ಯಾಚ್‌ನಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಿತ್ತು. ತಕ್ಷಣ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗಿದೆ. ಕೆಲವು ಕಡೆ ಮರಗಳು ಬಿದ್ದಿದ್ದು, ಅವುಗಳ ಪಕ್ಕದಲ್ಲೇ ಪರ್ಯಾಯ ಮಾರ್ಗ ನಿರ್ಮಿಸಲಾಗಿದೆ. ಶನಿವಾರ ಒಂದೇ ದಿನ 100ಕ್ಕೂ ಹೆಚ್ಚು ಪ್ರವಾಸಿಗರು ಯಾವುದೇ ಸಮಸ್ಯೆಯಿಲ್ಲದೆ ಚಾರಣ ಮುಗಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ, ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಚಾರಣಕ್ಕೆ ಬರುವವರೊಂದಿಗೆ ಕಡ್ಡಾಯವಾಗಿ ಗೈಡ್‌ಗಳನ್ನು ಕಳುಹಿಸುವುದು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.

RELATED ARTICLES
spot_img

Latest News