ಬೆಂಗಳೂರು, ಮಾ.14-ಮೈಸೂರಿನಲ್ಲಿ ರಾಜಮನೆತನದವರಿಗೆ ಟಿಕೆಟ್ ನೀಡಿರುವುದುನ್ನು ನೋಡಿದರೆ ಬಿಜೆಪಿ ದಿವಳಿಯಾಗಿದೆ ಎಂಬುದು ಗೋತ್ತಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ 20-30 ವರ್ಷಗಳ ಕಾಲ ಕೆಲಸ ಮಾಡಿದ ಹಲವು ನಾಯಕರು ಇದ್ದರೂ ಅವರನ್ನು ಕಡೆಗಣಿಸಿ ರಾಜಮನೆತನದವರಿಗೆ ಕರೆದು ಟಿಕೆಟ್ ನೀಡಿದ್ಧಾರೆ ಎಂದರು.
ಸಂಸದ ಪ್ರತಾಪ ಸಿಂಹ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಮೊದಲೇ ಗೊತ್ತಿತ್ತು. ಸಂಸತ್ತಿಗೆ ಗ್ಯಾಸ್ ಬಾಂಬ್ ಹಾಕಿದವರಿಗೆ ಸಿಂಹ ಅವರೇ ಪಾಸ್ ಕೊಡಿಸಿದ್ದರು. ನಮ್ಮ ಸರ್ಕಾರದ ವಿರುದ್ಧ ಮಾತನಾಡಬೇಕು ಎಂಬ ಕಾರಣಕ್ಕೆ ಅವರು ಮಾತನಾಡುತ್ತಿದ್ದರು. ತಾಲಿಬಾನ್ ಸರ್ಕಾರವೆಂದು ಟೀಕಿಸುತ್ತಿದ್ದರು. ಅವರನ್ನು ಯಾರು ಸಹ ಒಪ್ಪಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ದುಃಖವಾಗುತ್ತದೆ:
ಪ್ರತಾಪ ಸಿಂಹ ಅವರು ನನ್ನ ಸ್ನೇಹಿತರಾಗಿದ್ದು, ಅವರಿಗೆ ಲೋಕಸಭೆ ಟಿಕೆಟ್ ಸಿಗದಿರುವುದು ಬೇಸರವಾಗಿದೆ. ಅವರ ವಿಚಾರದಲ್ಲಿ ದುಃಖವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿದರೆ ಶಹಬಾಸ್ ಗಿರಿ ಸಿಗುತ್ತದೆ ಅಂದುಕೊಂಡಿದ್ದರೋ ಎನೋ ಎಂದು ಟೀಕಿಸಿದರು.ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾತನಾಡಿ, ಪ್ರತಾಪ ಸಿಂಹ ಅವರಿಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು. ಚಾಮುಂಡೇಶ್ವರಿ ತಾಯಿ ಇನ್ನುಮುಂದೆ ಸದ್ಬುದ್ಧಿ ನೀಡಲಿ ಎಂದರು.
ಸಿದ್ದರಾಮಯ್ಯ ಅವರಿಗೆ ಕ್ಷೇತ್ರವಿಲ್ಲವೆಂದು ಟೀಕಿಸುತ್ತಿದ್ದರು. ಈಗ ಪ್ರತಾಪ ಸಿಂಹ ಅವರ ಸ್ಥಿತಿ ನೋಡಿದರೆ ಅಯ್ಯೋ ಅನ್ನಿಸುತ್ತದೆ. ಹೀಗಾಗಬಾರದಿತ್ತು ಎಂದು ವ್ಯಂಗ್ಯವಾಡಿದರು. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಯಾವತ್ತೂ ಸಮುದಾಯದ ಫೈರ್ ಬ್ರಾಂಡ್ ಆಗಿರಲಿಲ್ಲ. ಜಾತಿ ಜಾತಿಗಳ ನಡುವೆ ಸಂಘರ್ಷ ಹಚ್ಚುವ ಕೆಲಸ ಮಾಡುತ್ತಿದ್ದರು ಎಂದು ಅವರು ಆರೋಪಿಸಿದರು.