ಬೆಂಗಳೂರು,ಮಾ.14- ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿರುವ ಕುರಿತಂತೆ ಬಿಜೆಪಿಯವರು ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಹರ್ಷದ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಸ್ಪೋಟಿಸಿದವರಿಗೆ ಪಾಸ್ ನೀಡಿದ್ದಕ್ಕಾಗಿ ಟಿಕೆಟ್ ತಪ್ಪಿದೆಯೇ? ಅಥವಾ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಕಾರಿಡಾರ್ ಯೋಜನೆಯಲ್ಲಿ ಭಾರಿ ಪ್ರಮಾಣದ ಕಿಕ್‍ಬ್ಯಾಕ್ ಪಡೆಯಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಕಾರಣಕ್ಕೆ ಟಿಕೆಟ್ ತಪ್ಪಿದೆಯೇ ? ಯಾವ ಕಾರಣ ಎಂಬುದನ್ನು ಬಿಜೆಪಿಯವರು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
ರಾಜಕಾರಣ ಎಂದರೆ ಸಮಾಜದಲ್ಲಿ ಒಡಕು ಸೃಷ್ಟಿಸುವುದು ಎಂದು ಪ್ರತಾಪ್ ಸಿಂಹ ಅಂದುಕೊಂಡಿದ್ದರು. ಜಾತಿ, ಧರ್ಮಗಳನ್ನು ವಿಭಜಿಸುವುದರಿಂದಾಗಲಿ ಅಥವಾ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಟೀಕೆ ಮಾಡುವುದರಿಂದಾಗಲಿ ಟಿಕೆಟ್ ಗಿಟ್ಟಿಸಬಹುದು ಎಂಬ ಭ್ರಮೆ ಪ್ರತಾಪ್ ಸಿಂಹ ಅವರಲ್ಲಿ ಕರಗಿ ಹೋಗಿದೆ ಎಂದು ಲೇವಡಿ ಮಾಡಿದರು.
ರಾಜ್ಯಸರ್ಕಾರವನ್ನು ತಾಲಿಬಾನ್ ಸರ್ಕಾರ, ಭಯೋತ್ಪಾದಕರ ಸರ್ಕಾರ ಎಂದೆಲ್ಲಾ ಟೀಕೆ ಮಾಡಿದ್ದರು. ಆದರೆ ಅವರು ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆಯೇ ಮಾಡುತ್ತಿರಲಿಲ್ಲ ಎಂದು ಆರೋಪಿಸಿದರು.