Sunday, April 28, 2024
Homeರಾಜಕೀಯಕಾಂಗ್ರೆಸ್ ಸಂಪರ್ಕದಲ್ಲಿದ್ದಾರಾ ಬಿಜೆಪಿ ಟಿಕೆಟ್ ವಂಚಿತರು..? ಡಿಕೆಶಿ ಹೇಳಿದ್ದೇನು ..?

ಕಾಂಗ್ರೆಸ್ ಸಂಪರ್ಕದಲ್ಲಿದ್ದಾರಾ ಬಿಜೆಪಿ ಟಿಕೆಟ್ ವಂಚಿತರು..? ಡಿಕೆಶಿ ಹೇಳಿದ್ದೇನು ..?

ಬೆಂಗಳೂರು,ಮಾ.14- ಬಿಜೆಪಿಯಲ್ಲಿ ಟಿಕೆಟ್ ವಂಚಿತರು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಸದ್ಯಕ್ಕೆ ತಾವು ಯಾವುದೇ ಹೇಳಿಕೆ ನೀಡುವುದಿಲ್ಲ. ಆ ಪಕ್ಷದ ಬೆಳವಣಿಗೆಗಳನ್ನು ಕಾದು ನೋಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 10 ಮಂದಿ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಲಿದೆ ಎಂದು ನಾನು ಹೇಳಿದ್ದೆ. ಅದಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದರು.

ಬಿಜೆಪಿಯ ಟಿಕೆಟ್ ವಂಚಿತರು ಕಾಂಗ್ರೆಸ್‍ನತ್ತ ಮುಖ ಮಾಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಟಿಕೆಟ್ ವಂಚಿತರ ಬೆಂಬಲ ದೊರೆಯುವುದರ ಬಗ್ಗೆಯೂ ನಾನು ಪ್ರಸ್ತಾಪಿಸುವುದಿಲ್ಲ ಎಂದು ಮುಗುಮ್ಮಾಗಿ ಹೇಳಿದ್ದಲ್ಲದೆ, ನಾನು ಅವರ ಜೊತೆ ಯಾರಿಗೆ, ಏನು ಬೇಕು ಎಂಬ ವಿಚಾರದ ಚರ್ಚೆಯಲ್ಲಿದ್ದೇನೆ , ಎಲ್ಲವನ್ನೂ ಈ ಹಂತದಲ್ಲಿ ಬಿಡಿಸಿ ಹೇಳುವುದಿಲ್ಲ ಎಂದು ತಿಳಿಸಿದರು.

ಕಾವೇರಿ ನೀರು ಬಿಟ್ಟಿಲ್ಲ :
ತಮಿಳುನಾಡಿಗೆ ಕಾವೇರಿ ನೀರು ಹರಿಯಬಿಡಲಾಗುತ್ತಿದೆ ಎಂದು ಬಿಜೆಪಿಯವರ ಸಾಮಾಜಿಕ ಜಾಲತಾಣದ ಪೋಸ್ಟ್ ಶುದ್ಧ ಸುಳ್ಳಾಗಿದೆ. ತಮಿಳುನಾಡಿನವರು ನೀರು ಕೇಳುತ್ತಿಲ್ಲ. ನಾವೂ ನೀರು ಬಿಟ್ಟಿಲ್ಲ. ಅಷ್ಟೇ ಅಲ್ಲ ನಮ್ಮ ರೈತರು ಕೂಡ ಕಾವೇರಿ ನೀರು ಕೇಳುತ್ತಿಲ್ಲ. ಅವರಿಗೂ ಪರಿಸ್ಥಿತಿಯ ಮನವರಿಕೆಯಾಗಿದೆ ಎಂದರು.

ತಮಿಳುನಾಡಿಗೆ ನೀರು ಬಿಡಲು ನಮಗೆ ತಲೆಕೆಟ್ಟಿಲ್ಲ. ಬಿಜೆಪಿಯವರಿಗೆ ಸರ್ಕಾರದ ಯಶಸ್ಸನ್ನು ಸಹಿಸಲಾಗುತ್ತಿಲ್ಲ. ಅದಕ್ಕಾಗಿ ಹೊಟ್ಟೆ ಉರಿಯಿಂದ ದಿನ ಬೆಳಗಾದರೆ ಅಪಪ್ರಚಾರ ಮಾಡುತ್ತಿದ್ದಾರೆ. ಕೋರ್ಟ್ ಆದೇಶ ಇದ್ದಾಗಿಯೂ ಕಾವೇರಿ ನೀರನ್ನು ಹರಿಸುವ ವಿಚಾರದಲ್ಲಿ ಪರಿಸ್ಥಿತಿಯನ್ನು ಸರ್ಕಾರ ನಿಭಾಯಿಸಿದೆ. ಕುಡಿಯುವ ನೀರನ್ನು ತೊಂದರೆಯಾಗದಂತೆ ಹಾಗೂ ಬರದ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ ಎಂಬುದರಿಂದಾಗಿ ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದರು.

ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನಮ್ಮ ಆದ್ಯತೆ. 7 ಸಾವಿರಕ್ಕೂ ಹೆಚ್ಚು ಬೋರ್‍ವೆಲ್‍ಗಳು ಬತ್ತಿ ಹೋಗಿದ್ದಾಗಿಯೂ ನಾವು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಟ್ಯಾಂಕರ್‍ಗಳನ್ನು ವಶಪಡಿಸಿಕೊಳ್ಳುವುದು, ಖಾಸಗಿ ಬೋರ್‍ವೆಲ್‍ಗಳ ಮೂಲಕ ನೀರು ಪೂರೈಕೆ ಸೇರಿದಂತೆ ಹಲವು ಮುಂಜಾಗ್ರತೆಗಳಿಂದ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ. ನಮ್ಮ ಅಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಿದ್ದಾರೆ. ವೇಗವಾಗಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ನಾನು ಕೈಜೋಡಿಸುತ್ತೇನೆ ಎಂದರು.

ಬಿಜೆಪಿಯವರು ಬರೀ ರಾಜಕಾರಣ ಮಾಡುತ್ತಿದ್ದಾರೆ. ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಗತ್ಯವಿರುವ ಕಡೆ ಆ್ಯಪ್ ಮೂಲಕ ಅನುಮತಿ ಪಡೆದು, ಹೊಸ ಬೋರ್‍ವೆಲ್ ಕೊರೆಯುವುದು, 24 ಗಂಟೆಯೊಳಗೆ ವಿದ್ಯುತ್ ಸಂಪರ್ಕ ಪಡೆಯುವುದು, ಅಗತ್ಯವಿದ್ದಷ್ಟು ನೀರನ್ನು ತಾವು ಬಳಸಿಕೊಂಡು ಉಳಿದಿದ್ದನ್ನು ಸಾರ್ವಜನಿಕರ ಉದ್ದೇಶಕ್ಕೆ ನೀಡಲು ಸೂಚಿಸಲಾಗಿದೆ ಎಂದರು. ಕುಡಿಯುವ ನೀರಿನ ಹೊರತುಪಡಿಸಿ ಕೈಗಾರಿಕೆ, ಪರಿಸರ ರಕ್ಷಣೆ ಸೇರಿದಂತೆ ಇತರ ಅಗತ್ಯಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

RELATED ARTICLES

Latest News