ಬೆಂಗಳೂರು,ಆ.27- ನಗರದ ಬಸವನಗುಡಿಯ ಕೆಆರ್ ರಸ್ತೆಯಲ್ಲಿ ಈದ್-ಮಿಲಾದ್ ಮೆರವಣಿಗೆ ವೇಳೆ ಉಂಟಾದ ಘಟನೆಯಲ್ಲಿ ಹಿಂದೂ ಯುವಕನ ಮೇಲೆ ಆಯುಧದಿಂದ ಹಲ್ಲೆ ಮಾಡಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಮುರಳಿ ಎಂಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ನಿನ್ನೆ ಬಸವನಗುಡಿಯ ಕೆಆರ್ ರಸ್ತೆಯ ಗರಡಿ ಅಪಾರ್ಟ್ ಮೆಂಟ್ ಬಳಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಮೂರು ಎಫ್ಐಆರ್ ದಾಖಲಾಗಿದ್ದು, ಒಟ್ಟು
ಆರು ಮಂದಿಯನ್ನು ಬಂಧಿಸಲಾಗಿದೆ.
ಘಟನೆ ವಿವರ:ಈದ್-ಮಿಲಾದ್ ಮೆರವಣಿಗೆಯೂ ತಿಲಕ್ನಗರದಿಂದ ಪ್ರಾರಂಭವಾಗಿದ್ದು, ಮಧ್ಯಾಹ್ನ ಈ ಮೆರವಣಿಗೆ ಬನಶಂಕರಿ ಠಾಣಾ ವ್ಯಾಪ್ತಿಯನ್ನು ದಾಟಿ ಬಸವನಗುಡಿ ಕೆ.ಆರ್ ರಸ್ತೆಯ ಗರಡಿ ಅಪಾರ್ಟ್ಮೆಂಟ್ ಮುಂದೆ ಸಾಗುತ್ತಿದ್ದಾಗ ಮುಸ್ಲೀಂ ಸಮುದಾಯದವರು ಘೋಷಣೆಯನ್ನು ಕೂಗಿಕೊಂಡು ಬರುತ್ತಿದ್ದರು.
ಆ ಸಂದರ್ಭದಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಹಾಗೂ ಇನ್ನಿತರರು ಕೇಸರಿ ಧ್ವಜ ಹಿಡಿದು ನಿನ್ನೆ ಮಧ್ಯಾಹ್ನ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದಾಗ ಮುಸ್ಲೀಂ ಸಮುದಾಯದವರು ಘೋಷಣೆಗಳನ್ನು ಕೂಗದಂತೆ ಅಡ್ಡಿಪಡಿಸಿದ್ದಾರೆ.
ಇದನ್ನು ಗಮನಿಸಿದ ಸ್ಥಳದಲ್ಲಿದ್ದ ಪೊಲೀಸರು ಪುನೀತ್ಕೆರೆಹಳ್ಳಿ ಅವರನ್ನು ತಡೆದು ಪರಿಸ್ಥಿತಿಯನ್ನು ತಿಳಿಗೊಳಿಸುತ್ತಿದ್ದ ಸಮಯದಲ್ಲಿ ಅನ್ಯ ಸಮುದಾಯದ ಹುಡುಗರು ಯಾವುದೋ ಆಯುಧದಿಂದ ಹಿಂದೂ ಯುವಕ ಮುರುಳಿ ಮೇಲೆ ಹಲ್ಲೆ ನಡೆಸಿದ್ದಾರೆ.ತಕ್ಷಣ ಪುನೀತ್ಕೆರೆಹಳ್ಳಿ ಹಾಗೂ ಆತನ ಸಹಚರರು ಗಾಯಾಳು ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯದೇ ರಸ್ತೆ ಮಧ್ಯದಲ್ಲೇ ಕುಳಿತು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಗೆ ಅಡ್ಡಿ ಪಡಿಸಿದ್ದಾರೆ.
ಈ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಜೆಪಿ ನಗರ ಠಾಣೆ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಮನವೊಲಿಸಿದರೂ ಪುನೀತ್ಕೆರೆಹಳ್ಳಿ ಬಿಡದೆ ಪ್ರತಿಭಟನೆ ನಡೆಸುತ್ತಿದ್ದರು. ಆಗ ಗಾಯಗೊಂಡಿದ್ದ ಮುರಳಿಯನ್ನು ಕರೆದೊಯ್ದು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ್ದರಿಂದ ಮುಂಜಾಗೃತ ಕ್ರಮವಾಗಿ ಪುನೀತ್ಕೆರೆಹಳ್ಳಿಯನ್ನು ಕರೆದೊಯ್ಯಲಾಯಿತು.ಈ ಘಟನೆಗೆ ಸಂಬಂಧಿಸಿದಂತೆ ಮಿನ್ನಾಜ್ ನಗರದ ಅಬ್ದುಲ್ ರಜಾಕ್ ಖಾನ್ ಎಂಬುವವರು ನೀಡಿದ ದೂರಿನ ಮೇರೆಗೆ ಪುನೀತ್ಕೆರೆಹಳ್ಳಿ (35), ಗೋಪಿಗೌಡ (26) ಮತ್ತು ವಿನೋದ್ನಾಯಕ್ (24) ಎಂಬುವವರನ್ನು ಬಂಧಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಪುನೀತ್ಕೆರೆಹಳ್ಳಿ ನೀಡಿದ ದೂರಿನನ್ವಯ ಅಕಲ್ ಪಾಷಾ (18), ಅಬೂಬಕರ್ ಸಿದ್ಧಿಕ್ (24) ಮತ್ತು ಸೈಯ್ಯದ್ ಅನಸ್ (22) ಎಂಬುವವರನ್ನು ಬಂಧಿಸಲಾಗಿದೆ.
ಬಸವನಗುಡಿ ಸಂಚಾರಿ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಮಂಜುನಾಥ್ ಅವರು ನೀಡಿದ ದೂರಿನ ಮೇರೆಗೆ ಪುನೀತ್ಕೆರೆಹಳ್ಳಿ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ.
ವಂಶಿಕೃಷ್ಣ ಮನವಿ:
ಈದ್-ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಗುಂಪುಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪೊಲೀಸ್ ಸಿಬ್ಬಂದಿ ತಕ್ಷಣ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ದಕ್ಷಿಣ ವಿಭಾಗದ ಡಿಸಿಪಿ ವಂಶಿಕೃಷ್ಣ ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕೈಗೊಂಡಿದ್ದು, ಸಾರ್ವಜನಿಕರು ಯಾವುದೇ ಪ್ರಚೋದನಕಾರಿ ಚಟುವಟಿಕೆಗಳಿಗೆ ಒಳಗಾಗದೇ ಶಾಂತಿ ಮತ್ತು ಸೌಹಾರ್ಧತೆ ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ. ಯಾವುದೇ ವದಂತಿಗಳಿಗೆ ಕಿವಿಗೊಡದೇ,ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
