ವಿ. ರಾಮಸ್ವಾಮಿ ಕಣ್ವ
ಬೆಂಗಳೂರು ನಗರದಲ್ಲಿ ಮಕ್ಕಳಿಗೆ ಉತ್ತಮ ಹಾಲು ಸಿಗುತ್ತಿದೆಯೋ ಗೊತ್ತಿಲ್ಲ; ಆದರೆ ಆಲ್ಕೊಹಾಲ್ ಹಾಗೂ ಡ್ರಗ್ಸ್ ಸರಳವಾಗಿ, ಹೇರಳವಾಗಿ ಸಿಗುತ್ತವೆ. ರಾಜಧಾನಿ ಬೆಂಗಳೂರಿನ ಬೀದಿ, ಗಲ್ಲಿಗಳಲ್ಲಿ ನಾಯಿಕೊಡೆಗಳಂತೆ ವೈನ್ ಸ್ಟೋರ್, ಬಾರ್ ಅಂಡ್ ರೆಸ್ಟೋರೆಂಟ್ಗಳು ತಲೆ ಎತ್ತಿ ನಿಂತಿವೆ. ನಾವು ಮುಂಜಾನೆ ಎದ್ದು ಚಹಾ ಕುಡಿದಂತೆ ಮದ್ಯಪ್ರಿಯರು ಸೂರ್ಯೋದಯಕ್ಕೂ ಮೊದಲೇ ನಶೆ ಏರಿಸಿಕೊಳ್ಳುತ್ತಾರೆ. ಈ ನಶೆಗಿಂತ ಅತ್ಯಂತ ಗಂಭೀರವಾದ ನಶೆ ಎಂದರೆ ಡ್ರಗ್ಸ್ ಸೇವನೆ. ಇದು ಇಂದಿನ ಯುವಜನರಲ್ಲಿ ಒಂದು ಫ್ಯಾಷನ್ ಆಗಿ ಹೋಗಿದೆ.
ಬೆಂಗಳೂರು ನಗರದಲ್ಲಿ ಈ ವರ್ಷದ ಏಳು ತಿಂಗಳಲ್ಲಿ 43 ವಿದೇಶಿಯರು ಸೇರಿದಂತೆ 4,267 ಮಂದಿ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿ, ಒಟ್ಟು 238.46 ಕೋಟಿ ರೂ. ಮೌಲ್ಯದ 1,623 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 9 ಕೋಟಿ ರೂ. ಮೌಲ್ಯದ 1,408 ಕೆಜಿ ಗಾಂಜಾ ಹಾಗೂ 229 ಕೋಟಿ ರೂ. ಮೌಲ್ಯದ 215 ಕೆಜಿ ಸಿಂಥೆಟಿಕ್ ಮಾದಕವಸ್ತುಗಳು ಸೇರಿವೆ. ಸಿಸಿಬಿ ಪೊಲೀಸರು ದಾಖಲೆ ಪ್ರಮಾಣದಲ್ಲಿ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರು ನಗರ ಪೊಲೀಸರು ಕಳೆದ ಏಳು ತಿಂಗಳಲ್ಲಿ ವಶಪಡಿಸಿಕೊಂಡಿರುವ ಡ್ರಗ್ಸ್ ಪ್ರಮಾಣ ನೋಡಿದರೆ ಎದೆ ಝಲ್ಲೆನಿಸುತ್ತದೆ, ಭಯ ಹುಟ್ಟಿಸುತ್ತದೆ.ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಸೀಮಂತ್ ಕುಮಾರ್ ಅವರು ಕಳೆದ ವರ್ಷದ ಜೂನ್ 5ರಂದು ಅಧಿಕಾರ ವಹಿಸಿಕೊಂಡರು. ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ನಗರ ಪೊಲೀಸರು ಕಳೆದ 13 ತಿಂಗಳಲ್ಲಿ 450 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದುವರೆಗೆ ಪೊಲೀಸರಿಗೆ ಸಿಕ್ಕಿದ್ದು ಇಷ್ಟು ಮಾತ್ರ. ಸಿಗದೇ ಇರುವ ಡ್ರಗ್ಸ್ ಇನ್ನೆಷ್ಟೋ… ನೀವೇ ಊಹಿಸಿಕೊಳ್ಳಿ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಪಣ ತೊಟ್ಟಿದೆ. ಸರ್ಕಾರದ ಈ ಆದೇಶದಂತೆ ಪೊಲೀಸ್ ಇಲಾಖೆಯೂ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅದರಲ್ಲೂ ಬೆಂಗಳೂರು ನಗರದ ಪೊಲೀಸರು ಹಗಲು-ರಾತ್ರಿ ಎನ್ನದೆ ಡ್ರಗ್ಸ್ ಪೆಡ್ಲರ್ಗಳಿಗಾಗಿ ಶೋಧ ನಡೆಸುತ್ತಾ ಅಪಾರ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ.ಮಾದಕವಸ್ತು ಮಾರಾಟಗಾರರು ವಿದ್ಯಾರ್ಥಿಗಳು ಹಾಗೂ ಯುವ ವೃತ್ತಿಪರರನ್ನು ಗುರಿಯಾಗಿಸಿಕೊಂಡು, ಒತ್ತಡ, ಸ್ನೇಹಿತರ ಪ್ರಭಾವ ಹಾಗೂ ಇತರ ದುರ್ಬಲತೆಗಳನ್ನು ಬಳಸಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮತ್ತು ಯುವಜನರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಸಮಾಜದ ಮಹಾಪಿಡುಗಾಗಿರುವ ಡ್ರಗ್ಸ್ ಅನ್ನು ನಿರ್ಮೂಲನೆ ಮಾಡಲು ಕರ್ನಾಟಕ ಸರ್ಕಾರ ‘ಬೇಡ ಬ್ರೋ’ ಮತ್ತು ‘ರೈಸ್ (RISE)’ ಉಪಕ್ರಮಗಳನ್ನು ಜಾರಿಗೆ ತಂದಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ‘ಬೇಡ ಬ್ರೋ’ ಮತ್ತು ‘ರೈಸ್’ ಉಪಕ್ರಮಗಳನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಹಾಗೂ ಯುವಜನರ ಸಹಕಾರ ಕೋರಿದ್ದಾರೆ.
ಬೇಡ ಬ್ರೋ
‘ಬೇಡ ಬ್ರೋ’ ಅಭಿಯಾನವು ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ಮತ್ತು ಸಮುದಾಯದ ಸಹಭಾಗಿತ್ವದ ಮೂಲಕ ಮಾದಕವ್ಯಸನವನ್ನು ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ವಿಶೇಷ ಜಾಗೃತಿ ಕಾರ್ಯಕ್ರಮವಾಗಿದೆ.ಸ್ನೇಹಿತರ ಒತ್ತಡಕ್ಕೆ ಮಣಿಯದೆ ದೃಢವಾಗಿ ನಿರಾಕರಿಸುವ ಮನೋಭಾವವನ್ನು ಬೆಳೆಸಲು ಈ ಅಭಿಯಾನ ಪ್ರೇರೇಪಿಸುತ್ತದೆ.
ರೈಸ್ (RISE)
‘ರೈಸ್’ ಎಂಬುದು R – Refuse (ನಿರಾಕರಣೆ), I – Inform (ಮಾಹಿತಿ ನೀಡುವಿಕೆ), S – Support (ಬೆಂಬಲ ನೀಡುವಿಕೆ), E – Empower (ಸಬಲೀಕರಣ) ಎಂಬ ತತ್ವಗಳ ಆಧಾರದ ಮೇಲೆ ರೂಪಿಸಲಾದ ವಿಶೇಷ ಉಪಕ್ರಮವಾಗಿದೆ.
ಈ ಉಪಕ್ರಮದಲ್ಲಿ ಪೊಲೀಸ್, ಕಂದಾಯ, ಸಾರಿಗೆ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಆರೋಗ್ಯ ಹಾಗೂ ಔಷಧ ನಿಯಂತ್ರಣ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಬಹು-ಪಾಲುದಾರಿಕೆ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.
ನಿರಾಕರಿಸಿ
ಮಾದಕವಸ್ತುಗಳಿಗೆ ‘ನೋ’ ಎಂದು ಹೇಳಿ ನಿರಾಕರಿಸಿ ಮತ್ತು ಎಲ್ಲಾ ಹಾನಿಕಾರಕ ವಸ್ತುಗಳಿಂದ ದೂರವಿರಿ. ನಿಮ್ಮ ಜೀವನ ಮತ್ತು ಭವಿಷ್ಯಕ್ಕಾಗಿ ಸರಿಯಾದ ಆಯ್ಕೆಯನ್ನು ಮಾಡಿಕೊಳ್ಳಿ.
ಮಾಹಿತಿ ನೀಡಿ
ಮಾದಕವಸ್ತುಗಳಿಗೆ ಸಂಬಂಧಿಸಿದ ಅಥವಾ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡಿ. ನಿಮ್ಮ ಒಂದು ಮಾಹಿತಿ ಹಲವಾರು ಜೀವಗಳನ್ನು ಉಳಿಸಬಹುದು. ಮಾಹಿತಿ ನೀಡುವವರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. ಯಾವುದೇ ಭಯ ಬೇಡ.
ಬೆಂಬಲಿಸಿ
ನಿಮ್ಮ ಸ್ನೇಹಿತರು ಅಥವಾ ಅವರ ಕುಟುಂಬದವರು ಮಾದಕವಸ್ತುಗಳಿಂದ ದೂರವಿದ್ದು ಸಕಾರಾತ್ಮಕ ಜೀವನ ನಡೆಸುವಂತೆ ಪ್ರೋತ್ಸಾಹಿಸಿ. ಶೈಕ್ಷಣಿಕ ಸಂಸ್ಥೆಗಳು, ಪೋಷಕರು ಹಾಗೂ ಸ್ಥಳೀಯ ಸಮುದಾಯಗಳು ಪರಸ್ಪರ ಸಹಕಾರದೊಂದಿಗೆ ಈ ವ್ಯಸನ ತಡೆಯುವಲ್ಲಿ ಪೂರಕವಾದ ಸುರಕ್ಷತೆ ಮತ್ತು ಬೆಂಬಲವನ್ನು ನೀಡಬೇಕಾಗಿದೆ.
ಸಬಲೀಕರಣ
ಜ್ಞಾನ, ಜಾಗೃತಿ ಮತ್ತು ಕೌಶಲ್ಯಗಳ ಮೂಲಕ ಇತರರನ್ನು ಹಾಗೂ ಯುವಜನರನ್ನು ಮಾದಕವ್ಯಸನದ ವಿರೋಧಿ ರಾಯಭಾರಿಗಳನ್ನಾಗಿ ಸಬಲೀಕರಿಸಿ.ಮಾದಕವಸ್ತು ವ್ಯಸನ ಕೇವಲ ಕಾನೂನು ಜಾರಿಗೆ ಸಂಬಂಧಿಸಿದ ಸಮಸ್ಯೆಯಲ್ಲ; ಇದು ಸಾಮಾಜಿಕ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿದೆ.
ಈ ಮಹಾಪಿಡುಗಿನ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಪ್ರತಿಯೊಬ್ಬ ನಾಗರಿಕನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಾದಕವಸ್ತುಗಳ ಸಾಗಾಟ, ಮಾರಾಟ ಮತ್ತು ಸೇವನೆ ಕಂಡುಬಂದರೆ ತಕ್ಷಣ 1922 ಅಥವಾ 112 ಸಹಾಯವಾಣಿಗೆ ಕರೆ ಮಾಡಿ ಅಥವಾ ಕೆಎಸ್ಪಿ ಆ್ಯಪ್ ಮೂಲಕ ಮಾಹಿತಿ ನೀಡಿ.
ನಮ್ಮ ಯುವಜನಾಂಗದ ರಕ್ಷಣೆಗಾಗಿ ಪೋಷಕರು, ಶಿಕ್ಷಣ ಸಂಸ್ಥೆಗಳು, ಉದ್ಯೋಗದಾತರು ಮಾತ್ರವಲ್ಲದೆ ನಾಗರಿಕ ಸಮಾಜದ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಇಲ್ಲದಿದ್ದರೆ ಈ ಮಾದಕವಸ್ತುಗಳ ಮಹಾಪಿಡುಗಿನಿಂದ ನಮ್ಮ ಯುವಕರು ಸರ್ವನಾಶವಾಗಲಿದ್ದಾರೆ.
ಎಚ್ಚರ! ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಅವರನ್ನು ರಕ್ಷಿಸಿ, ಬಲಿಷ್ಠ ಮತ್ತು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿ.
