ಬೆಂಗಳೂರು, ಆ.27- ನಗರದ ಕೂಡ್ಲು ಸಮೀಪ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 18 ಅಂತಸ್ತಿನ ಬಹುಮಹಡಿ ಕಟ್ಟಡದಲ್ಲಿ ಗಂಭೀರ ರಚನಾತ್ಮಕ ಸಮಸ್ಯೆ ಪತ್ತೆಯಾಗಿದ್ದು, ಕಟ್ಟಡವನ್ನು ನೆಲಸಮಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎಸ್‌ಎನ್‌ಎಸ್ ಎಸ್ಟೇಟ್ ಒಡೆತನದ ಎಸ್‌ಎನ್‌ಎಸ್ ಇ3 ಎಥೀನಿಯಾ ಕಟ್ಟಡ ಕಳೆದ ಒಂದು ತಿಂಗಳಿಂದ ತಾಂತ್ರಿಕ ದೋಷದಿಂದ ಒಂದು ಬದಿಗೆ ವಾಲಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು.
ಭವಿಷ್ಯದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡವನ್ನು ತೆರವುಗೊಳಿಸಲು ಮಾಲೀಕರು ಸ್ವತಃ ಜಿಬಿಎಗೆ ಪತ್ರ ಬರೆದು ಮನವಿ ಮಾಡಿದ್ದರು. ಬಳಿಕ ಜಿಬಿಎ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಟ್ಟಡವನ್ನು ನೆಲಸಮಗೊಳಿಸುವ ಕುರಿತು ವರದಿ ನೀಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಬಿಎ ಮುಖ್ಯ ಆಯುಕ್ತರು ಹಾಗೂ ಎಸ್ಟೇಟ್ ಮಾಲೀಕರ ನಡುವೆ ಸಭೆ ನಡೆದಿದ್ದು, ಕಟ್ಟಡವನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ. ಜಿಬಿಎ ಸೂಚನೆಯನ್ನು ಒಪ್ಪಿಕೊಂಡಿರುವ ಮಾಲೀಕರು, ಇಂದಿನಿಂದಲೇ ಕಟ್ಟಡವನ್ನು ಹಂತ ಹಂತವಾಗಿ ನೆಲಸಮಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕಟ್ಟಡವನ್ನು ಏಕಾಏಕಿ ನೆಲಸಮಗೊಳಿಸದೆ, ಎಂಜಿನಿಯರ್‌ಗಳ ಸಲಹೆಯಂತೆ ಮೇಲಿನ ಮಹಡಿಯಿಂದ ಹಂತ ಹಂತವಾಗಿ ಕೆಳಗಿನ ಮಹಡಿಗಳವರೆಗೆ ತೆರವು ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದೆ. ಡೆಮಾಲಿಷನ್ ವೇಳೆ ಯಾವುದೇ ಅಪಘಾತ ಸಂಭವಿಸದಂತೆ ಜಿಬಿಎ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದೆ.
ಒಸಿಯೇ ನೀಡಲಾಗಿತ್ತು
ಗಮನಾರ್ಹ ಸಂಗತಿಯೆಂದರೆ, ಇದೇ ಕಟ್ಟಡಕ್ಕೆ ಈ ಹಿಂದೆ ಜಿಬಿಎ ವತಿಯಿಂದ ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ) ನೀಡಲಾಗಿತ್ತು. ಆದರೆ, ಇದೀಗ ಕಟ್ಟಡದಲ್ಲಿ ಗಂಭೀರ ರಚನಾತ್ಮಕ ಸಮಸ್ಯೆಗಳು ಪತ್ತೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಕಟ್ಟಡ ನಿರ್ಮಾಣಕ್ಕೂ ಮುನ್ನ ಮಣ್ಣಿನ ಸ್ಥಿರತೆ ಪರೀಕ್ಷೆ ಸಮರ್ಪಕವಾಗಿ ನಡೆದಿತ್ತೇ? ಒಸಿ ನೀಡುವ ಸಂದರ್ಭದಲ್ಲಿ ಕಟ್ಟಡದ ತಾಂತ್ರಿಕ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲಾಗಿತ್ತೇ? ಎಂಬ ಪ್ರಶ್ನೆಗಳು ಇದೀಗ ಕೇಳಿಬರುತ್ತಿವೆ.
ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಹುಮಹಡಿ ಕಟ್ಟಡವನ್ನೇ ನೆಲಸಮಗೊಳಿಸುವ ಪರಿಸ್ಥಿತಿ ಎದುರಾಗಿರುವುದು, ಬೆಂಗಳೂರಿನ ಎತ್ತರದ ಕಟ್ಟಡಗಳ ಸುರಕ್ಷತೆ, ನಿರ್ಮಾಣ ಗುಣಮಟ್ಟ ಹಾಗೂ ತಾಂತ್ರಿಕ ಮೇಲ್ವಿಚಾರಣೆ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ.
