Homeರಾಷ್ಟ್ರೀಯದೇಶಾದ್ಯಂತ 41 ಅಗತ್ಯ ವಸ್ತುಗಳ ಬೆಲೆ ಸ್ಥಿರತೆಗೆ ಮುಂದಾದ ಕೇಂದ್ರ

ದೇಶಾದ್ಯಂತ 41 ಅಗತ್ಯ ವಸ್ತುಗಳ ಬೆಲೆ ಸ್ಥಿರತೆಗೆ ಮುಂದಾದ ಕೇಂದ್ರ

ನವದೆಹಲಿ, ಆ.27- ಶ್ರಾವಣ ಬಂತೆಂದರೆ ಹಬ್ಬ-ಹರಿದಿನ, ಧಾರ್ಮಿಕ ಮಹೋತ್ಸವ ಹಾಗೂ ವಿವಾಹ ಸಮಾರಂಭಗಳ ಸಂಭ್ರಮ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಆದರೆ, ಈ ಬಾರಿ ಹಬ್ಬಗಳ ಋತುವಿನ ಆರಂಭದಿಂದಲೇ ಬೆಲೆ ಸ್ಥಿರತೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ.

ನಾಗರ ಪಂಚಮಿ, ವರಮಹಾಲಕ್ಷ್ಮಿ, ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲಿ ಹಾಲು, ಬೇಳೆಕಾಳು, ತರಕಾರಿ ಸೇರಿದಂತೆ 41 ಬಗೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

NCCF, NAFED, ಕೇಂದ್ರೀಯ ಭಂಡಾರ್‌ ಹಾಗೂ ಇತರ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಅಗತ್ಯ ವಸ್ತುಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ನಾಸಿಕ್‌ನಿಂದ ದೇಶದ ಐದು ಪ್ರಮುಖ ನಗರಗಳಿಗೆ ಕಾಂದಾ ಎಕ್ಸ್‌ಪ್ರೆಸ್‌ ರೈಲು ಮೂಲಕ ಈರುಳ್ಳಿ ಪೂರೈಕೆಗೆ ಚಾಲನೆ ನೀಡಿದೆ.

₹35ಕ್ಕೆ ಈರುಳ್ಳಿ ಲಭ್ಯ

ಈಗಾಗಲೇ ದೆಹಲಿಯ ಮಾರುಕಟ್ಟೆಗಳಲ್ಲಿ ಕೆಜಿಗೆ ₹35ರ ದರದಲ್ಲಿ ಈರುಳ್ಳಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಮೊಬೈಲ್‌ ವಾಹನಗಳು, NCCF, NAFEDನ ಚಿಲ್ಲರೆ ಮಾರಾಟ ಮಳಿಗೆಗಳು, ಸಫಲ್‌ ಹಾಗೂ ಕೇಂದ್ರೀಯ ಭಂಡಾರ್‌ ಮಳಿಗೆಗಳ ಮೂಲಕವೂ ಇದೇ ದರದಲ್ಲಿ ಈರುಳ್ಳಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಸಾಕಷ್ಟು ಲಭ್ಯತೆ ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಬಫರ್‌ ಸ್ಟಾಕ್‌ನಿಂದ ಈರುಳ್ಳಿ ಪೂರೈಸುತ್ತಿದೆ.

2026-27ನೇ ಸಾಲಿನ ಬೆಲೆ ಸ್ಥಿರೀಕರಣ ನಿಧಿ (PSF) ಬಫರ್‌ಗಾಗಿ 2 ಲಕ್ಷ ಮೆಟ್ರಿಕ್‌ ಟನ್‌ ರಬಿ ಈರುಳ್ಳಿ ಖರೀದಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಪೈಕಿ NAFED ಮತ್ತು NCCF ಮೂಲಕ ಮೇ 15ರಿಂದ ಬಫರ್‌ಗಾಗಿ ಸುಮಾರು 1.21 ಲಕ್ಷ ಮೆಟ್ರಿಕ್‌ ಟನ್‌ ಈರುಳ್ಳಿ ಖರೀದಿಸಲಾಗಿದೆ. ಕೇಂದ್ರೀಯ ಗೋದಾಮು ನಿಗಮ (CWC) 2026-27ನೇ ಸಾಲಿನಲ್ಲಿ PSF ಈರುಳ್ಳಿ ಬಫರ್‌ಗಾಗಿ ಇದೇ ಮೊದಲ ಬಾರಿಗೆ ಶೇಖರಣಾ ಸಂಸ್ಥೆಯಾಗಿ ತೊಡಗಿಸಿಕೊಂಡಿದೆ.

ಎಲ್ಲಾ ರಾಜ್ಯಗಳಲ್ಲೂ ಬೆಲೆ ಏರಿಕೆ ಮೇಲೆ ನಿಗಾ

ಎಲ್ಲ ರಾಜ್ಯಗಳಲ್ಲೂ ಈರುಳ್ಳಿ ಬೆಲೆ, ಬೇಡಿಕೆ ಹಾಗೂ ಲಭ್ಯತೆಯನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಾಕಷ್ಟು ಸರಬರಾಜು ಮಾಡುವ ಜತೆಗೆ ಅನಗತ್ಯ ಬೆಲೆ ಏರಿಕೆಯನ್ನು ತಡೆಯಲು ಮಧ್ಯಸ್ಥಿಕೆ ವಹಿಸಿ ಗ್ರಾಹಕರ ಹಿತಾಸಕ್ತಿ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಓಣಂ, ಗಣೇಶ ಚತುರ್ಥಿ, ದುರ್ಗಾ ಪೂಜೆ, ದಸರಾ, ದೀಪಾವಳಿ ಹಾಗೂ ವಿವಾಹ ಋತು ಸೇರಿದಂತೆ ಹಬ್ಬದ ಅವಧಿಯಲ್ಲಿ ಅನಗತ್ಯ ಬೆಲೆ ಏರಿಳಿತ ತಡೆಯಲು ಬಫರ್‌ ಸ್ಟಾಕ್‌ನಿಂದ ಈರುಳ್ಳಿ ಪೂರೈಸಲಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಸಿಕ್‌ನಿಂದ ನವದೆಹಲಿಗೆ ಕಾಂದಾ ಎಕ್ಸ್‌ಪ್ರೆಸ್‌ ರೈಲು ಮೂಲಕ ಈರುಳ್ಳಿ ಸಾಗಣೆ ಆರಂಭಿಸಲಾಗಿದೆ.

ಮೊಬೈಲ್‌ ವ್ಯಾನ್‌, ಮಳಿಗೆಗಳಲ್ಲಿ ಚಿಲ್ಲರೆ ಮಾರಾಟ

ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬಫರ್‌ ಈರುಳ್ಳಿಯನ್ನು ಗ್ರಾಹಕ ಕೇಂದ್ರಗಳಿಗೆ ಸಕಾಲಿಕವಾಗಿ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. NCCF, NAFED ಹಾಗೂ ಕೇಂದ್ರೀಯ ಭಂಡಾರ್‌ ಮೂಲಕ ಒಟ್ಟು 122 ಮಳಿಗೆಗಳು ಮತ್ತು 90 ಮೊಬೈಲ್‌ ವ್ಯಾನ್‌ಗಳಲ್ಲಿ ಈರುಳ್ಳಿ ಚಿಲ್ಲರೆ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕಾಂದಾ ಎಕ್ಸ್‌ಪ್ರೆಸ್‌ ಈಗಾಗಲೇ ನಾಸಿಕ್‌ನಿಂದ ದೆಹಲಿ ತಲುಪಿದ್ದು, ಚೆನ್ನೈ, ಕೋಲ್ಕತ್ತಾ, ಎರ್ನಾಕುಲಂ, ಗುವಾಹಟಿ, ವಾರಣಾಸಿ, ಲಕ್ನೋ, ಪಾಟ್ನಾ, ಚಂಡೀಗಢ, ಜಮ್ಮು ಮತ್ತು ಅಮೃತಸರಕ್ಕೆ ರಸ್ತೆ ಸಾರಿಗೆ ಮೂಲಕ ಈರುಳ್ಳಿ ಸಾಗಿಸಲಾಗುತ್ತಿದೆ.

579 ಕೇಂದ್ರಗಳಲ್ಲಿ ದೈನಂದಿನ ಮೇಲ್ವಿಚಾರಣೆ

ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ, ಬೇಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರುಮುಖವಾದ ಸಂದರ್ಭದಲ್ಲಿ ನಿರಂತರ ಮೇಲ್ವಿಚಾರಣೆ ನಡೆಸುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ನಿರ್ದೇಶನ ನೀಡಿದ್ದಾರೆ.

ಅದರಂತೆ ದೇಶಾದ್ಯಂತ 579 ಕೇಂದ್ರಗಳಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಒಟ್ಟು 41 ಬಗೆಯ ಅಗತ್ಯ ವಸ್ತುಗಳ ಪೂರೈಕೆ, ಬೇಡಿಕೆ, ಸರಬರಾಜು ಹಾಗೂ ಬೆಲೆಗಳ ಮೇಲೆ ನಿಗಾ ವಹಿಸಿದೆ. ನಿರಂತರ ಮೇಲ್ವಿಚಾರಣೆ ನಡೆಸುವ ಮೂಲಕ ಬೆಲೆ ಸ್ಥಿರತೆಗೆ ಆದ್ಯತೆ ನೀಡಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಮೆಟೊ, ಆಲೂಗಡ್ಡೆ ಹಾಗೂ ಕಡಲೆಬೇಳೆಯ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ತೊಗರಿ, ಕಡಲೆ, ಮಸೂರ್‌, ಉದ್ದು ಹಾಗೂ ಹೆಸರುಕಾಳು ಸೇರಿದಂತೆ ಪ್ರಮುಖ ದ್ವಿದಳ ಧಾನ್ಯಗಳು ಮತ್ತು ಟೊಮೆಟೊ, ಆಲೂಗಡ್ಡೆಯಂತಹ ಅಗತ್ಯ ತರಕಾರಿಗಳ ಬೆಲೆಗಳೂ ಸ್ಥಿರವಾಗಿವೆ.

ಗಣೇಶ ಚತುರ್ಥಿ ಸಂದರ್ಭದಲ್ಲಿ ಸರಾಸರಿ ಬೆಲೆ

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪ್ರಸ್ತುತ ಅಖಿಲ ಭಾರತ ಮಟ್ಟದಲ್ಲಿ ಅಗತ್ಯ ವಸ್ತುಗಳ ಸರಾಸರಿ ಚಿಲ್ಲರೆ ಬೆಲೆ ಹೀಗಿದೆ:

  • ಟೊಮೆಟೊ: ₹38.33 ಕೆಜಿ
  • ಆಲೂಗಡ್ಡೆ: ₹22.63 ಕೆಜಿ
  • ಕಡಲೆಬೇಳೆ: ₹86.71 ಕೆಜಿ
  • ಅಟ್ಟಾ: ₹40.48 ಕೆಜಿ
  • ತೊಗರಿಬೇಳೆ: ₹123.30 ಕೆಜಿ
  • ಈರುಳ್ಳಿ: ₹37.87 ಕೆಜಿ
  • ಹಾಲು: ₹60.82 ಲೀಟರ್
RELATED ARTICLES
spot_img

Latest News