Homeರಾಷ್ಟ್ರೀಯರಾಜೀವ್‌ಗಾಂಧಿ ಕುಟುಂಬದ ಅಶ್ಲೀಲ ಡೀಪ್‌ಫೇಕ್‌ ವಿಡಿಯೋ; ಇಬ್ಬರ ವಿರುದ್ಧ ಪ್ರಕರಣ

ರಾಜೀವ್‌ಗಾಂಧಿ ಕುಟುಂಬದ ಅಶ್ಲೀಲ ಡೀಪ್‌ಫೇಕ್‌ ವಿಡಿಯೋ; ಇಬ್ಬರ ವಿರುದ್ಧ ಪ್ರಕರಣ

Two people booked for posting obscene deepfake videos targeting Gandhi family

ಹೈದರಾಬಾದ್‌, ಆ.28 (ಪಿಟಿಐ)- ದಿವಂಗತ ಮಾಜಿ ಪ್ರಧಾನಿ ರಾಜೀವ್‌ಗಾಂಧಿ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಸಂಸದರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಅಶ್ಲೀಲ ಡೀಪ್‌ಫೇಕ್‌ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಆರೋಪದ ಮೇಲೆ ಇಬ್ಬರು ಎಕ್ಸ್‌ ಖಾತೆದಾರರ ವಿರುದ್ಧ ಸೈಬರ್‌ ಕ್ರೈಮ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತೆಲಂಗಾಣ ಕಾಂಗ್ರೆಸ್‌ ಎಂಎಲ್‌ಸಿ ವೆಂಕಟ್‌ ಬಲೂರ್‌ ಅವರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಕೆಲವು ಪೋಸ್ಟ್‌ಗಳಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಜೀವ್‌ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಅಶ್ಲೀಲ ಡೀಪ್‌ಫೇಕ್‌ ವಿಡಿಯೋಗಳನ್ನು ಪ್ರಸಾರ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

‘ಭಾರತ್‌ ಮ್ಯಾಟ್ರಿಕ್ಸ್‌’ ಮತ್ತು ‘ಭಾಸ್ಕರ್‌ ಶಾಸ್ತ್ರಿ’ ಎಂಬ ಹೆಸರಿನ ಎಕ್ಸ್‌ ಖಾತೆಗಳಿಂದ ಈ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಖಾತೆಗಳ ಮೂಲಕ ತಪ್ಪು ಮಾಹಿತಿ ಹಾಗೂ ಪ್ರಚೋದನಕಾರಿ ವಿಷಯಗಳನ್ನು ಹರಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಡೀಪ್‌ಫೇಕ್‌ ವಿಡಿಯೋಗಳ ಮೂಲ, ಅವುಗಳಲ್ಲಿನ ವಿಷಯ ಹಾಗೂ ಪ್ರಸರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ದೂರಿನ ಆಧಾರದ ಮೇಲೆ ಆ.27ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳಾ ನಾಯಕರು ಹಾಗೂ ಹುತಾತ್ಮರ ಕುಟುಂಬವನ್ನು ಗುರಿಯಾಗಿಸಿಕೊಂಡು ಇಂತಹ ಕೃತ್ಯ ಎಸಗಿರುವುದು ರಾಜಕೀಯದ ಕೆಳಮಟ್ಟವನ್ನು ತೋರಿಸುತ್ತದೆ ಎಂದು ಭಾರತೀಯ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಉದಯ್‌ ಭಾನು ಚಿಬ್‌ ಹೇಳಿದ್ದಾರೆ.

ಹಾಲಿ ಸಂಸದರು, ಹಿರಿಯ ನಾಯಕರು ಹಾಗೂ ಸೋನಿಯಾ ಗಾಂಧಿ ಅವರನ್ನು ಗುರಿಯಾಗಿಸಿಕೊಂಡಿರುವ ಅಶ್ಲೀಲ ಡೀಪ್‌ಫೇಕ್‌ ವಿಡಿಯೋಗಳನ್ನು ಸಹಿಸಲು ಸಾಧ್ಯವಿಲ್ಲ. ನಕಲಿ ಖಾತೆಗಳ ಹಿಂದೆ ಇರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

RELATED ARTICLES
spot_img

Latest News