ಚಿಕ್ಕಮಗಳೂರು, ಮಾ.17- ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಕೊನೆಯಾಗಬೇಕು. ಪ್ರಶ್ನೆ ಕೇಳಿದ ಮತದಾರರಿಗೆ ಉತ್ತರ ನೀಡುವ ವ್ಯವಸ್ಥೆ ಆಗಬೇಕು ಎಂದು ಬಹುಭಾಷಾ ನಟ ಹಾಗೂ ಚಿಂತಕ ಪ್ರಕಾಶ್‍ರಾಜ್ ಪ್ರತಿಪಾದಿಸಿದರು.
ಚಿಕ್ಕಮಗಳೂರು ಪ್ರಸ್‍ಕ್ಲಬ್ ವತಿಯಿಂದ ಏರ್ಪಡಿಸಿದ್ದ ತಿಂಗಳ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳ್ವಿಕೆ ಮಾಡುವವರಿಗಿಂತ ಆಯ್ಕೆ ಮಾಡಿದವರ ಅಧಿಕಾರ ಮೇಲಿರಬೇಕು, ಅದು ಆಗದಿರುವುದೇ ಬೇಸರದ ಸಂಗತಿ. ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಅದೇ ಪಕ್ಷ ಅದೇ ಕುಟುಂಬ ಅದೇ ಪರಿವಾರದವರು. ಕ್ರಿಕೆಟ್ ಮ್ಯಾಚ್ ನಂತಹ ವ್ಯವಸ್ಥೆಯಾಗಿದೆ. ಹೊಸ ನಾಯಕರು ಬರುತ್ತಿಲ್ಲ ಎಂದು ವಿಶ್ಲೇಷಿಸಿದರು.
ಲಕ್ಷಾಂತರ ಮತ ಪಡೆದವರು ಒಂದು ಮತಕ್ಕೆ ತಮ್ಮನ್ನು ತಾವೇ ಮಾರಿಕೊಳ್ಳುತ್ತಿದ್ದಾರೆ. ಇದೆಲ್ಲ ಬದಲಾವಣೆ ಆಗಬೇಕಾದರೆ ಜನರು ಬದಲಾವಣೆ ಆಗಬೇಕೆಂದು ಅಭಿಪ್ರಾಯಿಸಿ, ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಹಿಂದೆ ಇಂದಿರಾಗಾಂಧಿಯವರ ಆಡಳಿತದಲ್ಲಿ ಘೋಷಿತ ಸರ್ವಾಧಿಕಾರಿ ಆಡಳಿತವಿತ್ತು. ಈಗ ಅಘೋಷಿತ ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ ಎಂದು ಹೇಳಿದರು.
ಆಡಳಿತ ನಡೆಸುತ್ತಿರುವ ಮಹಾಪ್ರಭುಗಳು ಜನರ ಪ್ರಶ್ನೆಗೆ ಉತ್ತರಿಸುತ್ತಿಲ್ಲ, ಪತ್ರಿಕಾಗೋಷ್ಠಿ ನಡೆಸುತ್ತಿಲ್ಲ, ಅವರು ಹೇಳಿದ್ದೆ ನಡೆಯಬೇಕೆಂದಿದ್ದಾರೆ. ಗಾಳಿ, ನೀರು ಯಾವ ಧರ್ಮಕ್ಕೂ ಸೇರಿದವಲ್ಲ. ಆದರೆ ದೇಶದಲ್ಲಿ ಒಂದೇ ಭಾಷೆ, ಒಂದೇ ಧರ್ಮ ಇರಬೇಕೆನ್ನುತ್ತಿದ್ದಾರೆ. ಪ್ರಶ್ನೆ ಮಾಧ್ಯಮಗಳೂ ಮಾರಿಕೊಂಡಂತಾಗಿದೆ ಇವೆಲ್ಲಾ ಸರ್ವಾಧಿಕಾರಿ ಆಡಳಿತವೇ ಆಗಿದೆ. ಜನ ಸಿಡಿದಿದ್ದಾಗ ಕೊನೆಗಾಣುತ್ತವೆ ಇಂದಲ್ಲ ನಾಳೆ ಆ ಕೆಲಸ ಆಗುತ್ತದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಚುನಾವಣಾ ಬಾಂಡ್ ಬಗ್ಗೆ ಪ್ರಸ್ತಾಪಿಸಿದ ಅವರು ಎಲ್ಲಾ ಪಕ್ಷಗಳು ಚುನಾವಣಾ ಬಾಂಡ್ ಹೊಂದಿರುವುದು ಸುಪ್ರೀಂಕೋರ್ಟ್ ಆದೇಶದಿಂದ ಬಹಿರಂಗವಾಗಿದೆ. ಆಡಳಿತ ಪಕ್ಷದವರ ಷೇರು ಹೆಚ್ಚಾಗಿರುವುದು ಬಯಲಾಗಿದೆ. ಆಡಳಿತ ನಡೆಸುವವರು ಚುನಾವಣಾ ಬಗ್ಗೆ ಪಾರದರ್ಶಕವಾಗಿ ಜನರ ಮುಂದಿಡಬೇಕೆಂದು ಅಭಿಪ್ರಾಯಸಿದರು.
ಆಡಳಿತ ಪಕ್ಷದೊಂದಿಗೆ ನೇರ ಸಂಬಂಧ ಇಟ್ಟುಕೊಂಡಿರುವ ಕೆಲವು ಕಂಪನಿಗಳ ಹೆಸರಿನಲ್ಲಿ ದೊಡ್ಡ ಪ್ರಮಾಣದ ಚುನಾವಣಾ ಬಾಂಡ್‍ಗಳು ಇರುವುದು ಬಹಿರಂಗವಾಗಿದೆ, ಆ ಸಂಸ್ಥೆಗಳ ಮೇಲೆ ಐಟಿ ರೈಡ್ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ದೊಡ್ಡ ಪ್ರಮಾಣದ ಚುನಾವಣಾ ಬಾಂಡ್‍ಗಳನ್ನು ಹೊಂದಿರುವ ಆಡಳಿತ ಪಕ್ಷ ಅದೇ ಬಂಡವಾಳದಿಂದ ಸಣ್ಣ ಸಣ್ಣ ರಾಜಕೀಯ ಪಕ್ಷಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳುತ್ತಿದೆ, ಶಾಸಕರನ್ನು ಖರೀದಿಸುತ್ತಿದೆ. ಬೇರೆ ಪಕ್ಷದಲ್ಲಿದ್ದು ಭ್ರಷ್ಟಾಚಾರದ ತಪ್ಪು ಮಾಡಿ ಆಡಳಿತ ಪಕ್ಷಕ್ಕೆ ಸೇರಿದಾಕ್ಷಣ ಕ್ಲೀನ್‍ಚಿಟ್ ನೀಡಲಾಗುತ್ತಿದೆ. ಇದಕ್ಕೆಲ್ಲ ಮಹಾಪ್ರಭುಗಳು ಉತ್ತರ ನೀಡುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ತಾವು ರಾಜಕೀಯ ಪಕ್ಷ ಸ್ಥಾಪಿಸುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ತಾವು ಯಾವುದೇ ರಾಜಕೀಯ ಪಕ್ಷ ಸ್ಥಾಪಿಸುವುದು ಇಲ್ಲ, ಯಾವ ಪಕ್ಷಕ್ಕೂ ಸೇರುವುದಿಲ್ಲ. ತಮ್ಮದೇ ಆದ ಅನೇಕ ಕ್ಷೇತ್ರಗಳಲ್ಲಿ ಜನರ ಮಧ್ಯೆ ಇದ್ದು ಜನರ ಪರವಾಗಿ ಕೆಲಸ ಮಾಡುತ್ತೇನೆಂದು ಸ್ಪಷ್ಟಪಡಿಸಿದರು. ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪ್ರಸ್‍ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆರ್.ತಾರಾನಾಥ್ ಉಪಸ್ಥಿತರಿದ್ದರು.