Monday, June 17, 2024
Homeರಾಜಕೀಯಪತ್ನಿ-ಪುತ್ರ-ಪುತ್ರಿಯರಿಗೆ ಟಿಕೆಟ್..? ಕುಟುಂಬ ರಾಜಕಾರಣದ ಮೊರೆಹೋಗಲಿದೆಯಾ ಕಾಂಗ್ರೆಸ್‌..?

ಪತ್ನಿ-ಪುತ್ರ-ಪುತ್ರಿಯರಿಗೆ ಟಿಕೆಟ್..? ಕುಟುಂಬ ರಾಜಕಾರಣದ ಮೊರೆಹೋಗಲಿದೆಯಾ ಕಾಂಗ್ರೆಸ್‌..?

ಬೆಂಗಳೂರು,ಮಾ.17- ಬಂಡಾಯದ ಬಿಸಿಯನ್ನು ತಣಿಸುವ ಸಲುವಾಗಿ ಕಾಂಗ್ರೆಸ್ ಹೈಕಮಾಂಡ್ ಹಲವಾರು ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಿದ್ದಾರೆ.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಅವರಿಗೆ ಮಣೆ ಹಾಕುತ್ತಿದ್ದರೆ ಅತ್ತ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಚಿವರ ಪುತ್ರರಿಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.

ಈ ಮೊದಲು ಚಿಕ್ಕೋಡಿಯಿಂದ ಹಿಂದುಳಿದ ವರ್ಗಗಳ ಅಭ್ಯರ್ಥಿಗೆ ಹಾಗೂ ಬೆಳಗಾವಿ ಕ್ಷೇತ್ರದಿಂದ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡುವುದಾಗಿ ಹೇಳಲಾಗುತ್ತಿತ್ತು. ಅದಕ್ಕೆ ಪೂರಕವಾಗಿ ಪಕ್ಷದ ನಿಷ್ಠಾವಂತ ಮುಖಂಡರ ಹೆಸರುಗಳನ್ನು ತೇಲಿಬಿಡಲಾಗಿತ್ತು. ಆದರೆ ಬೆಳಗಾವಿಯಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭ್ಯರ್ಥಿಯಾಗುವುದರಿಂದಾಗಿ ಪ್ರಬಲ ಪ್ರತಿಸ್ರ್ಪಧಿಯನ್ನು ಕಣಕ್ಕಿಳಿಸಬೇಕು ಎಂಬ ಕಾರಣಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ರ ಪುತ್ರ ಮೃನಾಳ್‍ಗೆ ಅವಕಾಶ ನೀಡಲು ವರಿಷ್ಠರು ಚರ್ಚೆ ನಡೆಸುತ್ತಿದ್ದಾರೆ.

ಸಹಜವಾಗಿಯೇ ಲಕ್ಷ್ಮೀಹೆಬ್ಬಾಳ್ಕರ್ ಪುತ್ರನಿಗೆ ಅವಕಾಶ ನೀಡಿದ್ದೇಯಾದರೆ ಅತ್ತ ಚಿಕ್ಕೋಡಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್‍ಜಾರಕಿಹೊಳಿಯವರ ಪುತ್ರಿ ಪ್ರಿಯಾಂಕ ಅವರಿಗೆ ಮಣೆ ಹಾಕಬೇಕಾಗುತ್ತದೆ. ಇಲ್ಲವಾದರೆ ಲಕ್ಷ್ಮೀ ಹೆಬ್ಬಾಳ್ಕರ್‍ರವರ ಕೈ ಮೇಲಾಗಲಿದ್ದು, ಜಾರಕಿಹೊಳಿ ಕುಟುಂಬ ಜಿಲ್ಲಾ ರಾಜಕಾರಣದಲ್ಲಿ ಹಿನ್ನಡೆ ಅನುಭವಿಸಿದಂತಾಗುತ್ತದೆ. ಈ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಶರಣಾಗುತ್ತಿದೆ.ಟಿಕೆಟ್ ಆಕಾಂಕ್ಷಿಗಳು ಎಂದು ಹೇಳಲಾಗುತ್ತಿದ್ದ ನಾಯಕರುಗಳಿಗೆ ನಿಗಮಮಂಡಳಿಗಳು, ಪ್ರಾಧಿಕಾರಗಳಲ್ಲಿ ಸ್ಥಳಾವಕಾಶ ಗುರುತಿಸಿ ಸಮಾಧಾನಪಡಿಸಲಾಗಿದೆ.

ಇನ್ನು ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಸಮಾಧಾನಪಡಿಸಲು ಕುಟುಂಬಕ್ಕೆ ಟಿಕೆಟ್ ನೀಡುವ ಸಾಧ್ಯತೆಯಿದೆ. ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪತ್ನಿ ಹಾಗೂ ಶ್ಯಾಮನೂರು ಶಿವಶಂಕರಪ್ಪ ಅವರ ಸೊಸೆ ಪ್ರಭಾ ಅವರಿಗೆ ಟಿಕೆಟ್ ನೀಡಲು ಚಿಂತನೆ ಇದೆ.ಇತ್ತ ಬಳ್ಳಾರಿಯಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿ ಅಸಮಾಧಾನಿತರಾಗಿಯೇ ಉಳಿದಿರುವ ಇ.ತುಕಾರಾಂ ಅವರ ಪುತ್ರಿ ಚೈತನ್ಯ ಸೌಪರ್ಣಿಕ ಅವರ ಹೆಸರು ಕೇಳಿಬಂದಿದೆ.

ಬಾಗಲಕೋಟೆಯಿಂದ ಶಾಸಕ ನಿತ್ಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಹೆಸರು ಚಾಲ್ತಿಯಲ್ಲಿದ್ದರೆ, ಮೈಸೂರಿನಿಂದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಟಿಕೆಟ್‍ಗಾಗಿ ಲಾಬಿ ನಡೆಸುತ್ತಿದ್ದಾರೆ.ಕೋಲಾರದಿಂದ ಕೆ.ಎಚ್.ಮುನಿಯಪ್ಪ ತಮಗೆ ಅಥವಾ ತಮ್ಮ ಪುತ್ರರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೆ ಟಾಂಗ್ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಂ.ಆರ್.ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡುವ ಚರ್ಚೆಗಳಾಗುತ್ತಿವೆ.

ಈಗಾಗಲೇ ಘೋಷಿತ 7 ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರಕ್ಕೆ ಹಾಲಿ ಸಂಸದ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ರವರ ಸಹೋದರ ಡಿ.ಕೆ.ಸುರೇಶ್ ಅವರಿಗೆ ಟಿಕೆಟ್ ಘೋಷಣೆ ಮಾಡಿದರೆ, ಶಿವಮೊಗ್ಗಕ್ಕೆ ಸಚಿವ ಮಧುಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜ್‍ಕುಮಾರ್ ಅವರಿಗೆ ಮಣೆ ಹಾಕಲಾಗಿದೆ.

ಕಲಬುರಗಿ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ರ್ಪಸದೇ ಇದ್ದರೆ ಅವರ ಅಳಿಯ ರಾಧಾಕೃಷ್ಣ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‍ನಿಂದ ಪ್ರಬಲ ಹಾಗೂ ನಿಷ್ಟಾವಂತ ಕಾಂಗ್ರೆಸ್ ಅಭ್ಯರ್ಥಿಗಳಿದ್ದಾಗಿಯೂ ಅವರನ್ನು ಕಡೆಗಣಿಸಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವ ಮೂಲಕ ಕಾಂಗ್ರೆಸ್ ತನ್ನ ಎಂದಿನ ಸೋಗನ್ನು ಮುಂದುವರೆಸಿದೆ.

RELATED ARTICLES

Latest News