ಕ್ಯಾಲಿಫೋರ್ನಿಯಾ,ಸೆ.1- ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಒಟ್ಟಾಗಿ ನೆಲೆಸಿದ್ದ ಕೇರಳ ಮೂಲದ ಮೂವರು ಆತ್ಮೀಯ ಸ್ನೇಹಿತೆಯರಲ್ಲಿ ಇಬ್ಬರನ್ನು ಇನ್ನೊಬ್ಬ ಸ್ನೇಹಿತೆ ಕ್ರೂರವಾಗಿ ಕೊ*ಲೆ ಮಾಡಿರುವ ಘಟನೆ ನಡೆದಿದೆ. ಕೇವಲ ಎರಡು ದಿನಗಳ ಹಿಂದೆ ಮೂವರು ಒಟ್ಟಾಗಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು ಇದೀಗ ಇಬ್ಬರು ಮಹಿಳೆಯರು ಕೊ*ಲೆಯಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.
ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್ನಲ್ಲಿರುವ ಮಿಲ್ ಕ್ರೀಕ್ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಕೆಲ ದಿನಗಳ ಹಿಂದೆ ಈ ಕೃತ್ಯ ನಡೆದಿದೆ. ಕೊ*ಲೆಯಾದವರನ್ನು ತ್ರಿಶೂರ್ನ ಅಂಜನಾ ಹರಿ (35) ಮತ್ತು ತಿರುವನಂತಪುರದ ಆನ್ ಮ್ಯಾಥ್ಯೂ (40) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಹ*ತ್ಯೆಗಳ ಆರೋಪದ ಮೇಲೆ ಅವರ ಸ್ನೇಹಿತೆ, ಕೊಟ್ಟಾಯಂ ಮೂಲದ ಅನಿಲಾ (32) ಎಂಬಾಕೆಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಅನಿಲಾ ಮೊದಲು ಅಪಾರ್ಟ್ಮೆಂಟ್ನ ಒಳಗೆ ಆನ್ ಮ್ಯಾಥ್ಯೂ ಅವರಿಗೆ ಚಾಕುವಿನಿಂದ ಇರಿದು ಹ*ತ್ಯೆ ಮಾಡಿದ್ದಾಳೆ. ಬಳಿಕ ಪಾರ್ಕಿಂಗ್ ಪ್ರದೇಶದಲ್ಲಿದ್ದ ಅಂಜನಾ ಹರಿ ಅವರ ಮೇಲೆ ನೀಲಿ ಬಣ್ಣದ ಎಸ್ಯುವಿ ಕಾರನ್ನು ವೇಗವಾಗಿ ಚಲಾಯಿಸಿ ಡಿಕ್ಕಿ ಹೊಡೆದು ಕೊ*ಲೆ ಮಾಡಿದ್ದಾಳೆ. ಅಪಾರ್ಟ್ಮೆಂಟ್ ಬಳಿಯ ಡಿಕ್ಸನ್ ಲ್ಯಾಂಡಿಂಗ್ ರಸ್ತೆಯಲ್ಲಿ ಹಿಟ್ ಅಂಡ್ ರನ್ ನಡೆದ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಮಿಲ್ಪಿಟಾಸ್ ಪೊಲೀಸರು, ಹತ್ತಿರದ ಪ್ರದೇಶದಲ್ಲಿ ಪತ್ತೆಯಾದ ನೀಲಿ ಎಸ್ಯುವಿ ಕಾರು ಹಾಗೂ ಚಾಲಕಿ ಅನಿಲಾಳನ್ನು ವಶಕ್ಕೆ ಪಡೆದಿದ್ದಾರೆ.
2021ರಲ್ಲಿ ಅಮೆರಿಕಕ್ಕೆ ತೆರಳಿದ್ದ ಅಂಜನಾ ಸ್ಥಳೀಯ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಅವರಿಗೆ ಸಾಫ್್ಟವೇರ್ ಎಂಜಿನಿಯರ್ ಪತಿ ವಿಜೀಶ್ ಹಾಗೂ 6 ವರ್ಷದ ಪುತ್ರಿ ಇದ್ದಾರೆ. ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆನ್ ಮ್ಯಾಥ್ಯೂಗೆ ಪತಿ ಜಾಕೋಬ್ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಅತ್ಯಂತ ಆತ್ಮೀಯರಾಗಿದ್ದ ಸ್ನೇಹಿತೆಯರ ನಡುವೆ ಇದ್ದಕ್ಕಿದ್ದಂತೆ ಇಂತಹ ಭೀಕರ ಕೃತ್ಯ ನಡೆಯಲು ಕಾರಣವೇನು ಎಂಬುದು ತನಿಖೆಯ ಹಂತದಲ್ಲಿದ್ದು, ಪೊಲೀಸರು ಉದ್ದೇಶವನ್ನು ಇನ್ನೂ ಬಹಿರಂಗಪಡಿಸಿಲ್ಲ.
ಕೇಂದ್ರ ಸಚಿವ ಸುರೇಶ್ ಗೋಪಿ ಈ ದುರಂತವನ್ನು ಖಚಿತಪಡಿಸಿದ್ದು, ಮೃತದೇಹಗಳನ್ನು ಭಾರತಕ್ಕೆ ತರಲು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದ ಕಾನ್ಸುಲ್ ಜನರಲ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ದೂತಾವಾಸದ ಸಮನ್ವಯ: ಮಿಲ್ಪಿಟಾಸ್ ಪೊಲೀಸ್ ಇಲಾಖೆ ನಡೆಸುತ್ತಿರುವ ತನಿಖೆಯನ್ನು ಭಾರತೀಯ ರಾಯಭಾರ ಕಚೇರಿ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಸಂತ್ರಸ್ತ ಕುಟುಂಬಗಳಿಗೆ ಕಾನೂನು ಮತ್ತು ಮಾನವೀಯ ನೆರವು ನೀಡಲಾಗುತ್ತಿದೆ.
