ಹೈದರಾಬಾದ್/ನಲ್ಗೊಂಡ,ಸೆ.1- ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್.ರಾಮಚಂದರ್ ರಾವ್ ಅವರನ್ನು ಮಂಗಳವಾರ ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ. ನಲ್ಗೊಂಡ ಜಿಲ್ಲಾಧ್ಯಕ್ಷ ನಾಗಂ ವರ್ಷಿತ್ ರೆಡ್ಡಿ ಅವರ ನಿವಾಸದ ಮೇಲೆ ನಡೆದ ದಾಳಿಯ ನಂತರ, ಅವರನ್ನು ಹಾಗೂ ಅವರ ಗಾಯಗೊಂಡ ತಾಯಿಯನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಈ ಕ್ರಮ ಕೈಗೊಳ್ಳಲಾಗಿದೆ.
ಒಂದು ವಾರದ ಅವಧಿಯಲ್ಲಿ ರಾವ್ ಅವರನ್ನು ಗೃಹಬಂಧನದಲ್ಲಿ ಇರಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. (ಮೊದಲ ಬಾರಿಗೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿಯಾಗದಂತೆ ತಡೆಯಲಾಗಿತ್ತು).
ತೆಲಂಗಾಣದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದ್ದು, ವಿರೋಧ ಪಕ್ಷದ ನಾಯಕರಿಗೆ ನಿರ್ಬಂಧ ವಿಧಿಸಲು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪೊಲೀಸ್ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ರಾವ್ ಆರೋಪಿಸಿದ್ದಾರೆ.
ನಲ್ಗೊಂಡದಲ್ಲಿರುವ ಬಿಜೆಪಿ ಜಿಲ್ಲಾಧ್ಯಕ್ಷರ ಮನೆ ಮೇಲಿನ ದಾಳಿ ಮತ್ತು ವಿಧ್ವಂಸಕ ಕೃತ್ಯಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಗಂಭೀರವಾಗಿ ದೂರಿದೆ. ಸರ್ಕಾರದ ಇಂತಹ ದಮನಕಾರಿ ನೀತಿಗಳು ಮುಂದುವರಿದರೆ ಪಕ್ಷದ ವತಿಯಿಂದ ತಕ್ಕ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಬಿಜೆಪಿ ಪ್ರಕಾರ, ವರ್ಷಿತ್ ರೆಡ್ಡಿ ಅವರ ನಿವಾಸದಲ್ಲಿ ಪೀಠೋಪಕರಣ ಸೇರಿದಂತೆ ಆಸ್ತಿಪಾಸ್ತಿಗೆ ಹಾನಿಯಾಗಿದೆ ಮತ್ತು ಅವರ ತಾಯಿ ಸೇರಿದಂತೆ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆದಿದೆ. ಈ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಆದರೆ ಈ ಆರೋಪಗಳ ಕುರಿತು ತನಿಖೆ ಮತ್ತು ಎರಡೂ ಪಕ್ಷಗಳ ಅಧಿಕೃತ ದೂರುಗಳ ಸ್ಥಿತಿ ಇನ್ನೂ ಸ್ಪಷ್ಟವಾಗಬೇಕಿದೆ. ಕೆಲವು ವರದಿಗಳ ಪ್ರಕಾರ, ಘಟನೆಗಳ ಕುರಿತು ಎರಡೂ ಕಡೆಯಿಂದಲೂ ಪೊಲೀಸರು ಇನ್ನೂ ಔಪಚಾರಿಕ ದೂರುಗಳನ್ನು ಸ್ವೀಕರಿಸಿಲ್ಲ.
ಸಂಘರ್ಷಕ್ಕೆ ಕಾರಣವೇನು? :
ಪ್ರಸ್ತುತ ವಿವಾದವು ಸೋಮವಾರ ನಡೆದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಘರ್ಷಣೆಯ ಮುಂದುವರಿದ ಭಾಗವಾಗಿದೆ. ಹೈದರಾಬಾದ್‌ನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಬಳಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಚೇರಿ ಗೇಟ್‌ಗೆ ಕಪ್ಪು ಬಣ್ಣ ಹಚ್ಚಿದ ಘಟನೆ ನಡೆದಿತ್ತು ಎಂದು ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ನಲ್ಗೊಂಡದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ಮತ್ತು ಕಟ್ಟಡಗಳ ಖಾತೆ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರ ಕ್ಯಾಂಪ್ ಕಚೇರಿಯತ್ತ ಪ್ರತಿಭಟನೆ ನಡೆಸಿದರು.
ಅಲ್ಲಿ ಸಚಿವರ ಪ್ರತಿಕೃತಿಗೆ ಬೆಂಕಿ ಹಚ್ಚುವುದು, ಬ್ಯಾನರ್‌ಗಳನ್ನು ಹರಿದುಹಾಕುವುದು ಹಾಗೂ ಕಚೇರಿ ಮೇಲೆ ಮೊಟ್ಟೆ, ಟೊವ್ಯಾಟೋ ಎಸೆಯುವ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ.
ಈ ಘಟನೆಯ ನಂತರ ಕಾಂಗ್ರೆಸ್ ಕಾರ್ಯಕರ್ತರು ನಲ್ಗೊಂಡ ಬಿಜೆಪಿ ಕಚೇರಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವರ್ಷಿತ್ ರೆಡ್ಡಿ ಅವರ ನಿವಾಸವನ್ನು ಗುರಿಯಾಗಿಸಿಕೊಂಡರು ಎಂಬ ಆರೋಪಗಳು ಕೇಳಿಬಂದಿವೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ನಲ್ಗೊಂಡದ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲ್ಪಡಲಾಗಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ವಿರೋಧ ಪಕ್ಷದ ಧ್ವನಿಯನ್ನು ಅಡಗಿಸಲು ಸರ್ಕಾರದ ಕಡೆಯಿಂದ ಯತ್ನಗಳು ನಡೆಯುತ್ತಿವೆ ಎಂದು ಬಿಜೆಪಿ ರಾಷ್ಟ್ರಮಟ್ಟದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದೆ.
