ಬೆಂಗಳೂರು, ಸೆ.1: ನಗರದ ಪ್ರಮುಖ ಸಂಚಾರ ದಟ್ಟಣೆ ಕೇಂದ್ರವಾಗಿರುವ ಹೆಬ್ಬಾಳ ಜಂಕ್ಷನ್ನ ಟ್ರಾಫಿಕ್ ಸಮಸ್ಯೆಗೆ ಹೆಬ್ಬಾಳದಿಂದ ಮೇಖ್ರಿ ಸರ್ಕಲ್ವರೆಗೆ ನಿರ್ಮಿಸಲು ಉದ್ದೇಶಿಸಿರುವ 2.228 ಕಿ.ಮೀ. ಉದ್ದದ ಶಾರ್ಟ್ ಟನಲ್ ಯೋಜನೆ ಶಾಶ್ವತ ಪರಿಹಾರವಾಗಲಾರದು ಎಂದು ಭಾರತೀಯ ವಿಜ್ಞಾನ ಸಂಸ್ಥೆ ಅಭಿಪ್ರಾಯಪಟ್ಟಿದೆ. ಸುರಂಗ ನಿರ್ಮಾಣದಿಂದ ಹೆಬ್ಬಾಳ ಜಂಕ್ಷನ್ನಲ್ಲಿನ ಸಂಚಾರಕ್ಕೆ ಸ್ಥಳೀಯವಾಗಿ ಕೆಲಮಟ್ಟಿನ ಪರಿಹಾರ ದೊರೆಯಬಹುದಾದರೂ, ಸುರಂಗದ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಮತ್ತೆ ವಾಹನಗಳ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.
ಇದರಿಂದ ಹೊಸ ಟ್ರಾಫಿಕ್ ಬಾಟಲ್ನೆಕ್ಗಳು ಸೃಷ್ಟಿಯಾಗುವ ಆತಂಕವನ್ನೂ ವ್ಯಕ್ತಪಡಿಸಲಾಗಿದೆ.ವಿಶೇಷವಾಗಿ ವೆಟರಿನರಿ ಆಸ್ಪತ್ರೆ ಹಾಗೂ ಎಸ್ಟೀಮ್ ಮಾಲ್ ಸಮೀಪದ ಪ್ರದೇಶಗಳು ಚೋಕ್ಪಾಯಿಂಟ್ಗಳಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಸುರಂಗದೊಳಗೇ ವಾಹನಗಳ ಸರತಿ ಉಂಟಾಗುವ ಸಾಧ್ಯತೆಯೂ ಇದೆ ಎಂದು ಐಐಎಸ್ಸಿ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಹೆಬ್ಬಾಳದಿಂದ ಮೇಖ್ರಿ ಸರ್ಕಲ್ವರೆಗಿನ ಒಟ್ಟಾರೆ ಕಾರಿಡಾರ್ನಲ್ಲಿ ಸಂಚಾರದ ಒತ್ತಡ ಮುಂದುವರಿಯಬಹುದು ಎಂದು ವರದಿ ಸೂಚಿಸಿದೆ.
ಲೆಕ್ಕಾಚಾರಗಳ ಬಗ್ಗೆಯೂ ಪ್ರಶ್ನೆ:ಟನಲ್ ಯೋಜನೆಯ ವಿವರವಾದ ಯೋಜನಾ ವರದಿಯಲ್ಲಿರುವ ಕೆಲವು ಟ್ರಾಫಿಕ್ ಲೆಕ್ಕಾಚಾರಗಳ ಬಗ್ಗೆಯೂ ಐಐಎಸ್ಸಿ ಪ್ರಶ್ನೆಗಳನ್ನು ಎತ್ತಿದೆ. ರಸ್ತೆ ಸಾಮರ್ಥ್ಯವನ್ನು ್ಲ ಕಡಿಮೆ ಅಂದಾಜಿಸಿರುವ ಸಾಧ್ಯತೆ ಇದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಟನಲ್ ನಿರ್ಮಾಣದ ಬಳಿಕ 50ರಿಂದ 80ರಷ್ಟು ಸಂಚಾರವನ್ನು ಬೇರೆಡೆಗೆ ಡೈವರ್ಷನ್ ಮಾಡಬಹುದು ಎಂಬ ಅಂದಾಜು ವೈಜ್ಞಾನಿಕವಾಗಿ ಸಮರ್ಪಕವಾಗಿಲ್ಲ ಎಂಬ ಅಭಿಪ್ರಾಯವೂ ವರದಿಯಲ್ಲಿದೆ.ಇನ್ನು ಎಸ್ಟೀಮ್ ಮಾಲ್ ಬಳಿ ಇರುವ ಸುಮಾರು 60 ಮೀಟರ್ ತಿರುವು ರಸ್ತೆಯ ಸಂಚಾರ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸುವ ಸಾಧ್ಯತೆಯಿದೆ. ಹೀಗಾಗಿ ಸುರಂಗದಿಂದ ಸಂಚಾರ ಸುಗಮಗೊಳಿಸುವ ಉದ್ದೇಶವಿದ್ದರೂ, ಅದರ ಎಂಟ್ರಿ-ಎಕ್ಸಿಟ್ ಪಾಯಿಂಟ್ಗಳ ವಿನ್ಯಾಸ ಹಾಗೂ ಸುತ್ತಮುತ್ತಲಿನ ರಸ್ತೆ ಜಾಲದ ಸಾಮರ್ಥ್ಯವನ್ನು ಸಮಗ್ರವಾಗಿ ಪರಿಗಣಿಸಬೇಕಿದೆ ಎಂದು ಅಧ್ಯಯನ ಸೂಚಿಸಿದೆ.
ಪ್ರವಾಹ, ಫ್ಲೈ ಓವರ್ಗಳಿಗೂ ಆತಂಕ:ಹೆಬ್ಬಾಳ ಕೆರೆಯ ಕ್ಯಾಚ್ಮೆಂಟ್ ಪ್ರದೇಶದಲ್ಲಿ ಸುರಂಗ ನಿರ್ಮಾಣವಾಗಲಿರುವ ಹಿನ್ನೆಲೆಯಲ್ಲಿ ಮಳೆ ನೀರು ಮತ್ತು ಪ್ರವಾಹದ ಅಪಾಯದ ಬಗ್ಗೆಯೂ ಐಐಎಸ್ಸಿ ಎಚ್ಚರಿಕೆ ನೀಡಿದೆ.ಇದಲ್ಲದೆ, ಸುರಂಗ ಕಾಮಗಾರಿ ವೇಳೆ ಈಗಿರುವ ಫ್ಲೈಓವರ್ಗಳ ಪಿಲ್ಲರ್ಗಳ ಅಡಿಪಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನೂ ಅಧ್ಯಯನದಲ್ಲಿ ಪರಿಗಣಿಸಲಾಗಿದೆ. ಹೀಗಾಗಿ ಕೇವಲ ಸಂಚಾರದ ದೃಷ್ಟಿಯಿಂದ ಮಾತ್ರವಲ್ಲದೆ, ರಚನಾತ್ಮಕ ಸುರಕ್ಷತೆ ಹಾಗೂ ಮಳೆನೀರು ನಿರ್ವಹಣೆಯ ದೃಷ್ಟಿಯಿಂದಲೂ ಯೋಜನೆಯನ್ನು ಪರಿಶೀಲಿಸಬೇಕಾದ ಅಗತ್ಯವಿದೆ.
2040ರಲ್ಲೂ ಟ್ರಾಫಿಕ್ ಒತ್ತಡ?ಟನಲ್ ಕಾಮಗಾರಿ ಪೂರ್ಣಗೊಂಡ ಬಳಿಕವೂ ದೀರ್ಘಾವಧಿಯಲ್ಲಿ ಸಂಚಾರ ದಟ್ಟಣೆ ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ ಎಂಬುದು ಅಧ್ಯಯನದ ಪ್ರಮುಖ ಸೂಚನೆ. 2040ರ ವೇಳೆಗೆ ಟನಲ್ ಯೋಜನೆ ಪೂರ್ಣಗೊಂಡಿದ್ದರೂ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯ ಹಿನ್ನೆಲೆಯಲ್ಲಿ ಟ್ರಾಫಿಕ್ ಒತ್ತಡ ಮುಂದುವರಿಯುವ ಸಾಧ್ಯತೆ ಇದೆ ಎಂದು ವರದಿ ಸೂಚಿಸಿದೆ.ಹೀಗಾಗಿ ರಸ್ತೆ ಮತ್ತು ಸುರಂಗಗಳಂತಹ ಮೂಲಸೌಕರ್ಯಗಳ ವಿಸ್ತರಣೆಯೊಂದನ್ನೇ ಅವಲಂಬಿಸುವ ಬದಲು ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವುದು ಅಗತ್ಯ ಎಂದು ಐಐಎಸ್ಸಿ ಶಿಫಾರಸು ಮಾಡಿದೆ.
ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಮೆಟ್ರೋ ವ್ಯವಸ್ಥೆಯನ್ನು ಬಲಪಡಿಸುವುದರಿಂದ ಹೆಬ್ಬಾಳ ಸೇರಿದಂತೆ ನಗರದ ಪ್ರಮುಖ ಕಾರಿಡಾರ್ಗಳ ಮೇಲಿನ ವಾಹನ ಸಂಚಾರದ ಒತ್ತಡವನ್ನು ದೀರ್ಘಾವಧಿಯಲ್ಲಿ ಕಡಿಮೆ ಮಾಡಬಹುದು ಎಂಬುದು ಅಧ್ಯಯನದ ವರದಿಯಾಗಿದೆ. ಹೀಗಾಗಿ ಹೆಬ್ಬಾಳಮೇಖ್ರಿ ಸರ್ಕಲ್ ಶಾರ್ಟ್ ಟನಲ್ ಸ್ಥಳೀಯ ಸಂಚಾರಕ್ಕೆ ಪರಿಹಾರ ನೀಡಬಹುದಾದರೂ, ಇಡೀ ಹೆಬ್ಬಾಳ ಜಂಕ್ಷನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಟ್ರಾಫಿಕ್ ಸಮಸ್ಯೆಗೆ ಇದು ಒಂದೇ ಶಾಶ್ವತ ಪರಿಹಾರವಲ್ಲ ಎಂಬ ಪ್ರಶ್ನೆಯನ್ನು ಐಐಎಸ್ಸಿ ಅಧ್ಯಯನ ಎತ್ತಿದೆ.
