Homeರಾಷ್ಟ್ರೀಯಸಬ್ಸಿಡಿ ಅಕ್ಕಿ ಅಕ್ರಮ ವರ್ಗಾವಣೆ : ನೆರಾಮ್ಯಾಕ್‌ ವಿರುದ್ಧ ಎಫ್‌ಐಆರ್‌

ಸಬ್ಸಿಡಿ ಅಕ್ಕಿ ಅಕ್ರಮ ವರ್ಗಾವಣೆ : ನೆರಾಮ್ಯಾಕ್‌ ವಿರುದ್ಧ ಎಫ್‌ಐಆರ್‌

ನವದೆಹಲಿ,ಸೆ.1- ಬಡ ಕಾರ್ಮಿಕರಿಗೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ವ್ಯಾಪ್ತಿಗೆ ಬಾರದ ನಿರ್ಗತಿಕರಿಗೆ ನೀಡಬೇಕಿದ್ದ ಸಬ್ಸಿಡಿ ಅಕ್ಕಿಯನ್ನು ಖಾಸಗಿ ವ್ಯಾಪಾರಿಗಳಿಗೆ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೆಂಟ್ರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌ (ಸಿಬಿಐ) ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮತ್ತು ಈಶಾನ್ಯ ಪ್ರಾದೇಶಿಕ ಕೃಷಿ ಮಾರುಕಟ್ಟೆ ನಿಗಮದ (ನೆರಾವ್ಯಾಕ್‌) ಹಿರಿಯ ಅಧಿಕಾರಿಗಳ ವಿರುದ್ಧ ಅಧಿಕೃತವಾಗಿ ಎಫ್‌ಐಆರ್‌ ದಾಖಲಿಸಿದೆ.

ಈ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ನಿಯಮಗಳನ್ನು ಗಾಳಿಗೆ ತೂರಿ ನಡೆಸಿರುವ ಈ ವ್ಯವಹಾರದಿಂದ ಎಫ್‌ಸಿಐಗೆ 28 ಕೋಟಿ ರೂ.ಗಳಿಗೂ ಅಧಿಕ ಆರ್ಥಿಕ ನಷ್ಟ ಉಂಟಾಗಿದೆ ಎಂದು ತನಿಖಾ ಸಂಸ್ಥೆ ದೃಢಪಡಿಸಿದೆ. ದೆಹಲಿಯಲ್ಲಿ ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಕೈಗೆಟುಕುವ ದರದಲ್ಲಿ ಅಕ್ಕಿ ಒದಗಿಸುವ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ನೆರಾವ್ಯಾಕ್‌ ಸಂಸ್ಥೆಯು ಎಫ್‌ಸಿಐನಿಂದ ಅಕ್ಕಿಯನ್ನು ಪಡೆದಿತ್ತು. ಆದರೆ ಈ ಅಕ್ಕಿಯನ್ನು ನಿಗದಿತ ಫಲಾನುಭವಿಗಳಿಗೆ ತಲುಪಿಸದೆ, ಮೂರು ಖಾಸಗಿ ಸಂಸ್ಥೆಗಳ ಮೂಲಕ ಕಮಿಷನ್‌ ಆಧಾರದಲ್ಲಿ ಖಾಸಗಿ ವ್ಯಾಪಾರಿಗಳಿಗೆ ಮರುಮಾರಾಟ ಮಾಡಲಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ರಾಜ್ಯ ಸರ್ಕಾರಗಳು ಅಥವಾ ಅವುಗಳ ನಿಗಮಗಳು ಮಾತ್ರ ಇ-ಹರಾಜು ಇಲ್ಲದೆ ರಿಯಾಯಿತಿ ದರದಲ್ಲಿ ಅಕ್ಕಿ ಪಡೆಯಲು ಅರ್ಹವಾಗಿವೆ. ಆದರೆ ನೆರಾವ್ಯಾಕ್‌ ಸಂಸ್ಥೆ ಈ ನಿಯಮಕ್ಕೆ ವಿರುದ್ಧವಾಗಿ ಯಾವುದೇ ಇ-ಹರಾಜಿನಲ್ಲಿ ಭಾಗವಹಿಸದೆ ಅಕ್ಕಿಯನ್ನು ಪಡೆದಿದೆ. ಮಾರುಕಟ್ಟೆಯಲ್ಲಿ ಪ್ರತಿ ಮೆಟ್ರಿಕ್‌ ಟನ್‌ ಅಕ್ಕಿಯ ಮೀಸಲು ಬೆಲೆ 26,900 ರೂ. ಇದ್ದರೂ, ನೆರಾವ್ಯಾಕ್‌ಗೆ ಕೇವಲ 23,200 ರೂ.ಗಳ ರಿಯಾಯಿತಿ ದರದಲ್ಲಿ ಅಕ್ಕಿ ಪೂರೈಕೆ ಮಾಡಲಾಗಿದೆ. ಈ ಮೂಲಕ ಎಫ್‌ಸಿಐಗೆ ಸುಮಾರು 28.49 ಕೋಟಿ ರೂ.ಗಳ ನೇರ ನಷ್ಟ ಉಂಟಾಗಿದೆ.

ಅಕ್ಕಿಯು ನಿಗದಿತ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ನೇರವಾಗಿ ಸಾರ್ವಜನಿಕರಿಗೆ ತಲುಪಿದೆ ಎಂದು ಬಿಂಬಿಸಲು ಆರೋಪಿಗಳು ಸುಳ್ಳು ಮತ್ತು ನಕಲಿ ವಿತರಣಾ ದಾಖಲೆಗಳನ್ನು ಸೃಷ್ಟಿಸಿರುವುದು ತನಿಖೆಯಿಂದ ಬಯಲಾಗಿದೆ.

62,000 ಮೆಟ್ರಿಕ್‌ ಟನ್‌ ಅಕ್ಕಿ ಹಂಚಿಕೆ :
ಸಿಬಿಐ ತನಿಖೆಯ ಕೇಂದ್ರಬಿಂದು 2026ರ ಏಪ್ರಿಲ್‌ 13ರಿಂದ ಮೇ 15ರ ಅವಧಿಯಲ್ಲಿ FCI ದೆಹಲಿ ವಲಯವು NERAMACಗೆ ಹಂಚಿಕೆ ಮಾಡಿದ್ದ ಸುಮಾರು 62,000 ಮೆಟ್ರಿಕ್‌ ಟನ್‌ ಅಕ್ಕಿ. ಈ ಪೈಕಿ ಸುಮಾರು 50,645 ಮೆಟ್ರಿಕ್‌ ಟನ್‌ ಅಕ್ಕಿಯನ್ನು ವಾಸ್ತವವಾಗಿ ಬಿಡುಗಡೆ ಮಾಡಲಾಗಿದೆ ಎಂದು ಇಆಐ ಎಫ್‌ಐಆರ್‌ ಆಧರಿತ ವರದಿಗಳು ತಿಳಿಸಿವೆ. ಆರೋಪದ ಪ್ರಕಾರ, ಈ ಅಕ್ಕಿಯನ್ನು ದೆಹಲಿಯ ದಿನಗೂಲಿ ಕಾರ್ಮಿಕರು, ಬಡವರು, ವಲಸೆ ಕಾರ್ಮಿಕರು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ ವ್ಯಾಪ್ತಿಗೆ ಬರದ ಜನರಿಗೆ ಕಡಿಮೆ ದರದಲ್ಲಿ ತಲುಪಿಸಬೇಕಾಗಿತ್ತು. ಆದರೆ ಅದು ನೇರವಾಗಿ ಉದ್ದೇಶಿತ ಫಲಾನುಭವಿಗಳಿಗೆ ತಲುಪುವ ಬದಲು ಖಾಸಗಿ ವ್ಯಾಪಾರಿಗಳ ಜಾಲದ ಮೂಲಕ ಸಾಗಿಸಲಾಯಿತು ಎನ್ನುವುದು ತನಿಖಾ ಸಂಸ್ಥೆಯ ಆರೋಪವಾಗಿದೆ.

RELATED ARTICLES
spot_img

Latest News