ಬೆಂಗಳೂರು,ಮಾ.18- ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕದಲ್ಲಿ ಮತ್ತೆ ರಣಕಹಳೆ ಮೊಳಗಿಸುವ ಮೂಲಕ ಚುನಾವಣಾ ಕಾವು ರಂಗೇರುವಂತೆ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಕಲ್ಯಾಣ ಕರ್ನಾಟಕದ ಮುಖ್ಯ ಕೇಂದ್ರ ಕಲಬರುಗಿಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದ ಮೋದಿಯವರು ಇಂದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದರು.
ಶಿವಮೊಗ್ಗದ ಅಲ್ಲಮ್ಮಪ್ರಭು ಕ್ರೀಡಾಂಗಣದಲ್ಲಿ ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ ಮೋದಿ, ರಾಜ್ಯದಲ್ಲಿ ಈ ಬಾರಿ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲ ನೀಡಬೇಕೆಂದು ಕೋರಿದರು.
ಎಂದಿನಂತೆ ಕನ್ನಡದಲ್ಲೇ ತಮ್ಮ ಭಾಷಣವನ್ನು ಆರಂಭಿಸಿದ ಮೋದಿಯವರು ತಮ್ಮ ಅರ್ಧಗಂಟೆಗಳ ಭಾಷಣದಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟಗಳನ್ನು ತರಾಟೆಗೆ ತೆಗೆದುಕೊಂಡರು.
ಕರ್ನಾಟಕದಲ್ಲಿ ಇಲ್ಲಿನ ಜನತೆ ನನಗೆ ಒಂದು ಗ್ಯಾರಂಟಿಯನ್ನು ನೀಡಬೇಕು. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲಿಸಿ ಕಾಂಗ್ರೆಸ್‍ಗೆ ಒಂದೇ ಒಂದು ಕ್ಷೇತ್ರವನ್ನು ಸಹ ಬಿಟ್ಟು ಕೊಡುವುದಿಲ್ಲ ಎಂದು ವಾಗ್ದಾನ ಮಾಡಬೇಕು. ಕರುನಾಡಿನಲ್ಲಿ ಎಲ್ಲಾ ಕಡೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕೆಂದು ಮನವಿ ಮಾಡಿಕೊಂಡರು.
ಕಾಂಗ್ರೆಸ್ ಕರ್ನಾಟಕವನ್ನು ಗ್ಯಾರಂಟಿ ನೆಪದಲ್ಲಿ ಲೂಟಿ ಹೊಡೆಯುತ್ತಿದೆ. ಇಲ್ಲಿನ ಹಣವು ದೆಹಲಿ ಪಾಲಾಗುತ್ತದೆ. ಅಲ್ಲಿನ ನಾಯಕರು ಕರುನಾಡನ್ನು ಎಟಿಎಂ ಮಾಡಿಕೊಂಡಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ. ಎನ್‍ಡಿಎ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿ ಎಂದು ಹೇಳಿದರು.
ಹತ್ತು ವರ್ಷಗಳಲ್ಲಿ ನಾವು ಒಂದೇ ಒಂದು ಹಗರಣವಿಲ್ಲದೆ ಸರ್ಕಾರವನ್ನು ಮುನ್ನಡೆಸಿದ್ದೇವೆ. ಕೇಂದ್ರದಲ್ಲಿ ಮೂರನೇ ಬಾರಿಗೆ ನಾವು ಅಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಖಚಿತ. ಗ್ಯಾರಂಟಿಗಳನ್ನು ನಂಬಿ ಕಾಂಗ್ರೆಸ್‍ಗೆ ಮರಳಾಗಬೇಡಿ. ವಿಶ್ವದಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಬೇಕಾದರೆ ಬಿಜೆಪಿಯನ್ನು ಗೆಲ್ಲಿಸಿ ಎಂದು ವಿನಮ್ರವಾಗಿ ಕೋರಿದರು.
ರಾಜ್ಯದ ರೈತರಿಗೆ ಬಿಜೆಪಿ ಸಾಲು ಸಾಲು ಅನ್ಯಾಯ:ಸಿಎಂ ಟೀಕೆ
ಕರ್ನಾಟಕದಲ್ಲಿ ಎಟಿಎಂ ಸರ್ಕಾರವನ್ನು ಬುಡಸಮೇತವಾಗಿ ಕಿತ್ತೊಯ್ಯುವ ಸಂಕಲ್ಪವನ್ನು ಮತದಾರರು ಮಾಡಬೇಕು. ಕಳೆದ ಬಾರಿ 25 ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಟ್ಟಿದ್ದೀರಿ. ಈ ಬಾರಿ 28 ಕ್ಷೇತ್ರಗಳನ್ನು ಗೆಲ್ಲಿಸಿ ದಾಖಲೆ ಬರೆಯಬೇಕೆಂದು ಮನವಿ ಮಾಡಿದರು. ಇದಕ್ಕೂ ಮುನ್ನ ತೆಲಂಗಾಣದಿಂದ ವಿಶೇಷ ವಿಮಾನದಲ್ಲಿ ಸೋಗಾನೆ ಬಳಿ ಇರುವ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಿವಮೊಗ್ಗ ಜಿಲ್ಲಾ ಘಟಕ ಆತ್ಮೀಯವಾಗಿ ಬರಮಾಡಿಕೊಂಡರು.
ಅಲ್ಲಿಂದ ಅಲ್ಲಮ್ಮಪ್ರಭು ಕ್ರೀಡಾಂಗಣಕ್ಕೆ ಆಗಮಿಸಿದ ಮೋದಿ ಅವರು ನಂತರ ತೆರೆದ ಜೀಪ್‍ನಲ್ಲಿ ಕ್ರೀಡಾಂಗಣದ ಮಧ್ಯಭಾಗದಿಂದ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಮೋದಿಯವರಿಗೆ ನೆರೆದಿದ್ದ ಭಾರೀ ಕಾರ್ಯಕರ್ತರ ಹರ್ಷೋದ್ಘಾರ, ಜೈಕಾರ, ಜೈ ಮೋದಿ ಎಂಬ ಘೋಷಣೆಗಳು ಮಾರ್ಧನಿಸಿದವು.
ಹಾವೇರಿಯಿಂದ ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಈಶ್ವರಪ್ಪ ಗೈರುಹಾಜರು ಎದ್ದು ಕಾಣುತ್ತಿತ್ತು.