Tuesday, May 7, 2024
Homeರಾಜ್ಯಟಿಕೆಟ್‍ಗಾಗಿ ಸಿಎಂ ಮನೆಗೆ ವೀಣಾ ಬೆಂಬಲಿಗರ ಮುತ್ತಿಗೆ

ಟಿಕೆಟ್‍ಗಾಗಿ ಸಿಎಂ ಮನೆಗೆ ವೀಣಾ ಬೆಂಬಲಿಗರ ಮುತ್ತಿಗೆ

ಬೆಂಗಳೂರು, ಮಾ.18- ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಅವರ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ನುಗ್ಗುವ ಪ್ರಯತ್ನ ನಡೆಸಿದರು. ಬಾಗಲಕೋಟೆಯಿಂದ ಆಗಮಿಸಿದ ಮಹಿಳೆಯರ ತಂಡ ಇಂದು ಬೆಂಗಳೂರಿನಲ್ಲಿ ಹಿರಿಯ ನಾಯಕರನ್ನು ಭೇಟಿ ಮಾಡಲು ಯತ್ನಿಸಿತ್ತು.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯ ಬಳಿ ಬಿಗಿ ಕಾವಲು ಆಯೋಜಿಸಲಾಗಿದ್ದು, ಸಾಮಾನ್ಯ ಕಾರ್ಯಕರ್ತರನ್ನು ಒಳಗೆ ಬಿಡಲು ಪೊಲೀಸರು ಹಿಂದೆಮುಂದೆ ನೋಡುತ್ತಾರೆ. ಈ ಹಂತದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲೇಬೇಕು ಎಂದು ಹಠಕ್ಕೆ ಬಿದ್ದ ಮಹಿಳೆಯರು ಒಳ ಹೋಗಲು ಯತ್ನಿಸಿದರು. ಪೊಲೀಸರು ಅವರ ಮನವೋಲಿಸಿ ವಾಪಾಸ್ ಕಳುಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು, ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾಗಿನಿಂದಲೂ ವೀಣಾ ಕಾಶಪ್ಪನವರು ಜನಸಾಮಾನ್ಯರ ಹಾಗೂ ಮಹಿಳೆಯರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಟಿಕೆಟ್ ನೀಡುವ ಬದಲು ಮುಖ ಪರಿಚಯ ಇಲ್ಲದವರನ್ನು ಕಣಕ್ಕಿಳಿಸಿದರೆ ನಾವು ಮತದಾನ ಮಾಡದೇ ಚುನಾವಣೆಗೆ ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಸಿದರು.

ಕೋವಿಡ್ ಸಂದರ್ಭದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ, ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಬೇರೆ ಯಾರಿಗೂ ಟಿಕೆಟ್ ನೀಡುವುದನ್ನು ಸಹಿಸುವುದಿಲ್ಲ, ವೀಣಾ ಕಾಶಪ್ಪನವರಿಗೆ ಟಿಕೆಟ್ ನೀಡಬೇಕು. ಈ ನಿಟ್ಟಿನಲ್ಲಿ ಹೈಕಮಾಂಡ್ ಗಮನಕ್ಕೆ ತನ್ನಿ ಎಂದು ಮಾಧ್ಯಮದವರ ಕಾಲಿಗೆ ಬೀಳುವ ಮೂಲಕ ಮಹಿಳೆಯರು ಮನವಿ ಮಾಡಿಕೊಂಡರು.

ವೀಣ ಕಾಶಪ್ಪನವರಿಗೆ ಟಿಕೆಟ್ ಕೊಡದಿದ್ದರೆ ನಾವು ಮನೆ ಮನೆಗೆ ಹೋಗಿ ಮತದಾನ ಮಾಡದಂತೆ ಪ್ರಚಾರ ಮಾಡುತ್ತೇವೆ. ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು. ಕಳೆದ ಐದು ವರ್ಷಗಳಿಂದಲೂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾಗಲೇ ನಿಮಗೆ ಟಿಕೆಟ್ ನೀಡುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಬೇಕಿತ್ತು. ಇಷ್ಟು ವರ್ಷ ಕೆಲಸ ಮಾಡಿದ ಅವರಿಗೆ ಕೊನೆ ಕ್ಷಣದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತ ಪಡಿಸಿದರು.

RELATED ARTICLES

Latest News