ವಿಲ್ಲುಪುರಂ ,ಮಾ. 19 (ಪಿಟಿಐ) : ಬರುವ ಏಪ್ರಿಲ್ 19 ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ತಮಿಳುನಾಡಿನ ಡಾ ಎಸ್ ರಾಮದಾಸ್ ನೇತೃತ್ವದ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಪ್ರಾದೇಶಿಕ ಪಕ್ಷಗಳಿಗೆ 10 ಸ್ಥಾನ ಬಿಟ್ಟುಕೊಡುವ ಒಪ್ಪಂದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮತ್ತು ಪಿಎಂಕೆ ಸಂಸ್ಥಾಪಕ ರಾಮದಾಸ್ ಅವರು ಇಲ್ಲಿನ ತೈಲಾಪುರಂ ನಿವಾಸದಲ್ಲಿ ಸಹಿ ಹಾಕಿದರು.
ಪಿಎಂಕೆ ವನ್ನಿಯಾರ್ ಸಮುದಾಯದ ಪ್ರಾಬಲ್ಯದ ಪಕ್ಷವಾಗಿದೆ ಮತ್ತು ರಾಜ್ಯದ ಉತ್ತರದ ಕೆಲವು ಜಿಲ್ಲೆಗಳಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದೆ. ಪಿಎಂಕೆ ಎನ್ಡಿಎಯಲ್ಲಿ ತಮಿಳುನಾಡಿನ 10 ಸ್ಥಾನಗಳಿಂದ ಸ್ಪರ್ಧಿಸಲಿದೆ ಎಂದು ಅಣ್ಣಾಮಲೈ ಮತ್ತು ಪಿಎಂಕೆ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಡಾ ಅನ್ಬುಮಣಿ ರಾಮದಾಸ್ ಅವರುಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಿಎಂಕೆ ಕಳೆದ 10 ವರ್ಷಗಳಿಂದ ಎನ್ಡಿಎಯಲ್ಲಿದೆ, 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಬಣದ ಒಂದು ಘಟಕವಾಗಿ ಹೋರಾಡುತ್ತಿದೆ ಎಂದು ಇಬ್ಬರೂ ನಾಯಕರು ಹೇಳಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ಮಾಡುತ್ತಿರುವ ಸಮಾಜದ ಹಿತದೃಷ್ಟಿಯಿಂದ ಕ್ರಾಂತಿಕಾರಿ ಆಲೋಚನೆಗಳನ್ನು ಜಾರಿಗೆ ತರಲು ಅವರು ಬಯಸಿದ್ದಾರೆ ಎಂದು ಅಣ್ಣಾಮಲೈ ರಾಮದಾಸ್ ಅವರನ್ನು ಶ್ಲಾಸಿದರು.
ಉಭಯ ಪಕ್ಷಗಳ ಪ್ರಮುಖರ ನಡುವೆ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಎಲ.ಮುರುಗನ್ ಉಪಸ್ಥಿತರಿದ್ದರು. ಸೇಲಂ ಜಿಲ್ಲೆಯಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ರಾಮದಾಸ್ ಅವರು ಪ್ರಧಾನಿಯವರೊಂದಿಗೆ ಪಾಲ್ಗೊಳ್ಳುವ ನಿರೀಕ್ಷೆಯಿದೆ.