Saturday, April 27, 2024
Homeರಾಜಕೀಯಇಂದು ಸಂಜೆ ಅಥವಾ ನಾಳೆ ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ

ಇಂದು ಸಂಜೆ ಅಥವಾ ನಾಳೆ ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ

ಬೆಂಗಳೂರು, ಮಾ.19- ರಾಜ್ಯದ ಬಾಕಿ ಇರುವ 21 ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ದೆಹಲಿಯಲ್ಲಿ ಮಹತ್ವದ ಚರ್ಚೆ ನಡೆಯುತ್ತಿದ್ದು, ಸಂಜೆ ಅಥವಾ ನಾಳೆ ಎರಡನೆ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದು, ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇತ್ಯರ್ಥ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಮಾರ್ಚ್ 8ರಂದು ಏಳು ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ.

ತುಮಕೂರಿಗೆ ಎಸ್.ಪಿ.ಮುದ್ದೇಹನುಮೇಗೌಡ, ಮಂಡ್ಯಕ್ಕೆ ವೆಂಕಟರಾಮೇಗೌಡ (ಸ್ಟಾರ್ ಚಂದ್ರು), ಬಿಜಾಪುರ ರಾಜು ಅಲಗೂರು, ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ.ಸುರೇಶ್, ಹಾವೇರಿಗೆ ಆನಂದಸ್ವಾಮಿ ಗಡ್ಡದೇವರಮಠ, ಹಾಸನಕ್ಕೆ ಎಂ.ಶ್ರೇಯಸ್ಸ ಪಟೇಲ್, ಶಿವಮೊಗ್ಗಕ್ಕೆ ಗೀತಾ ಶಿವರಾಜ್ ಕುಮಾರ್ ಹುರಿಯಾಳುಗಳಾಗಿದ್ದಾರೆ.

ಬಾಕಿ ಇರುವ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಕೆಲವು ಕ್ಷೇತ್ರಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತಗಾದೆ ತೆಗೆದಿದ್ದರು. ಆಗಾಗಿ ಇಂದು ಕೊನೆಯ ಸುತ್ತಿನ ಚರ್ಚೆ ನಡೆಯುತ್ತಿದೆ. ಇಂದಿನ ಸಭೆಯಲ್ಲಿ 15 ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯಾಗುವ ಸಾಧ್ಯತೆಗಳಿವೆ. ದಾವಣಗೆರೆಗೆ ಪ್ರಭಾ ಮಲ್ಲಿಕಾರ್ಜುನ್, ಬೀದರ್‍ಗೆ ರಾಜಶೇಖರ್ ಪಾಟೀಲ್ ಹೆಸರುಗಳಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ ಹಂಚಿಕೆ ರಾಜಕಾರಣಕ್ಕೆ ಮಣೆ ಹಾಕಲಾಗಿದೆ. ಬೆಳಗಾವಿ ಕ್ಷೇತ್ರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್‍ಗೆ, ಚಿಕ್ಕೊಡಿಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಅವರಿಗೆ ಟಿಕೆಟ್ ಖಚಿತವಾಗಲಿದೆ. ಈ ಇಬ್ಬರು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಕೊಪ್ಪಳಕ್ಕೆ ರಾಜಶೇಖರ್ ಹಿಟ್ನಾಳ್ ಬಹುತೇಕ ಖಚಿತವಾಗಿದ್ದು, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಲಾಬಿ ನಡೆಸುತ್ತಿದ್ದಾರೆ. ಉತ್ತರ ಕನ್ನಡ ಕ್ಷೇತ್ರಕ್ಕೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್‍ರನ್ನು ಕಣಕ್ಕಿಳಿಸಲು ಮುಖ್ಯಮಂತ್ರಿ ಆಸಕ್ತಿ ತೋರಿಸಿದ್ದಾರೆ. ಕಾಂಗ್ರೆಸ್‍ನ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಅವರ ಪುತ್ರ ಪ್ರಶಾಂತ್ ದೇಶಪಾಂಡೆ ಲಾಬಿ ನಡೆಸುತ್ತಿದ್ದಾರೆ. ಬಿಜೆಪಿ ಶಾಸಕರಾಗಿರುವ ಶಿವರಾಮ್ ಹೆಬ್ಬಾರ್ ಹೆಸರು ಕೇಳಿ ಬರುತ್ತಿದೆ. ಆದರೆ ಸದ್ಯಕ್ಕೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‍ಗೆ ಬರುವ ಲಕ್ಷಣಗಳು ಇಲ್ಲದಿರುವುದರಿಂದ ಸದ್ಯಕ್ಕೆ ನಿಷ್ಠಾವಂತ ಕಾಂಗ್ರೆಸಿಗರಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೆ ಈ ಬಾರಿ ಅವಕಾಶ ತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ. ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಪುತ್ರ ಹಾಗು ಯುವ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅಭ್ಯರ್ಥಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ರಾಜ್ಯಸಭೆಯ ಮಾಜಿ ಉಪಾಧ್ಯಕ್ಷ ರೆಹಮಾನ್‍ಖಾನ್ ಅವರ ಪುತ್ರ ಮನ್ಸೂರ್ ಆಲಿಖಾನ್ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.

ಈ ಕ್ಷೇತ್ರಕ್ಕೆ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಅಥವಾ ಅವರ ಪುತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ನಾಯಕರು ಎಐಸಿಸಿ ಕಾರ್ಯದರ್ಶಿಯಾಗಿರುವ ಮನ್ಸೂರ್ ಆಲಿ ಖಾನ್‍ಗೆ ಮಣೆ ಹಾಕಲಿದ್ದಾರೆ. ಇನ್ನೂ ಮಹಾನಗರಿ ಮೂರು ಕ್ಷೇತ್ರಗಳ ಪೈಕಿ ಪ್ರಮುಖವಾಗಿರುವ ಬೆಂಗಳೂರು ದಕ್ಷಿಣಕ್ಕೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅಭ್ಯರ್ಥಿಯಾದರೆ, ಬೆಂಗಳೂರು ಉತ್ತರಕ್ಕೆ ಗೋವಿಂದರಾಜ ನಗರ ಕ್ಷೇತ್ರದ ಶಾಸಕ ಪ್ರಿಯಾಕೃಷ್ಣರ ಹೆಸರು ಪ್ರಬಲವಾಗಿ ಕೇಳಿ ಬಂದಿದೆ.

ವಿಜಯನಗರ ಕ್ಷೇತ್ರದ ಶಾಸಕರಾಗಿರುವ ಕಾಂಗ್ರೆಸ್‍ನ ಹಿರಿಯ ನಾಯಕ ಕೃಷ್ಣಪ್ಪ ಅವರ ಪುತ್ರರಾದ ಪ್ರಿಯಾಕೃಷ್ಣ ಎರಡನೇ ಬಾರಿ ಶಾಸಕರಾಗಿದ್ದು, ಸಚಿವ ಸ್ಥಾನ ಅಥವಾ ಬಿಡಿಎ ಅಧ್ಯಕ್ಷರಾಗುವ ನಿರೀಕ್ಷೆ ಹೊಂದಿದ್ದರು. ಆದರೆ ರಾಜ್ಯದಲ್ಲಿನ ಕೆಲ ನಾಯಕರ ಒತ್ತಡದಿಂದಾಗಿ ಅವಕಾಶ ವಂಚಿತರಾಗಿದ್ದರು ಎನ್ನಲಾಗಿದೆ. ಅವರ ಬೆಂಬಲಕ್ಕೆ ನಿಂತಿರುವ ಸಿದ್ದರಾಮಯ್ಯ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸಿ ರಾಷ್ಟ್ರ ರಾಜಕಾರಣಕ್ಕೆ ಪ್ರಿಯಾಕೃಷ್ಣರನ್ನು ಕಳುಹಿಸುವ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಜೊತೆಯಲ್ಲಿ ಬೆಂಗಳೂರು ಉತ್ತರಕ್ಕೆ ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‍ಗೌಡ ಕೂಡ ಲಾಬಿ ನಡೆಸುತ್ತಿದ್ದಾರೆ.ಚಾಮರಾಜನಗರ ಮೀಸಲು ಕ್ಷೇತ್ರಕ್ಕೆ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್‍ರ ಹೆಸರು ಚಾಲ್ತಿಯಲ್ಲಿದೆ. ಮಾಜಿ ಸಂಸದ ದೃವನಾರಾಯಣ್‍ರ ಪುತ್ರ ಹಾಗೂ ಶಾಸಕ ದರ್ಶನ್‍ರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಚಿಂತನೆಯನ್ನು ಸಿದ್ದರಾಮಯ ನಡೆಸಿದ್ದಾರೆ. ಮಾಜಿ ಶಾಸಕ ನಂಜುಂಡಸ್ವಾಮಿ ಅಭ್ಯರ್ಥಿಯಾಗಲು ಲಾಬಿ ನಡೆಸುತ್ತಿದ್ದಾರೆ.

ಕಲ್ಬುರ್ಗಿ ಕ್ಷೇತ್ರದ ಅಭ್ಯರ್ಥಿ ವಿಷಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕಿದೆ. ಒಂದರ್ಥದಲ್ಲಿ ಅವರು ಸ್ಪರ್ಧೆ ಮಾಡುವುದಿಲ್ಲ, ಬದಲಾಗಿ ಅವರ ಅಳಿಯ ರಾಧಕೃಷ್ಣರನ್ನು ಕಣಕ್ಕೆ ಇಳಿಸಲಾಗುತ್ತದೆ ಎಂಬ ಚರ್ಚೆಗಳಿವೆ. ಆದರೆ ಕೊನೆ ಕ್ಷಣದಲ್ಲಿ ಖರ್ಗೆ ಅವರೆ ಅಭ್ಯರ್ಥಿಯಾಗಲಿದ್ದಾರೆ ಎಂಬ ಚರ್ಚೆಗಳೂ ನಡೆಯುತ್ತಿವೆ.

ಗಣಿನಾಡು ಬಳ್ಳಾರಿ ಕ್ಷೇತ್ರಕ್ಕೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಬಲ ಆಕಾಂಕ್ಷಿಯಾಗಿದ್ದು, ಸಚಿವ ಬಿ.ನಾಗೇಂದ್ರದ ಪತ್ನಿ ಮಂಜುಳರಿಗೆ ಟಿಕೆಟ್ ನೀಡುವಂತೆ ಲಾಬಿ ನಡೆಯುತ್ತಿದೆ. ಮತ್ತೊಂದೆಡೆ ಶಾಸಕ ಇ.ತುಕಾರಾಂ ಅವರ ಪುತ್ರಿ ಚೈತನ್ಯ ಸೌಪರ್ಣಿಕ ಹೆಸರು ಕೇಳಿ ಬರುತ್ತಿದೆ.ಹುಬ್ಬಳ್ಳಿ-ಧಾರವಾಡದಿಂದ ಕಳೆದ ಬಾರಿ ನವಲಗುಂದ ವಿಧಾನಸಭಾ ಕ್ಷೇತ್ರದ ಟಿಕೆಟ್ ವಂಚಿತ ವಿನೋದ್ ಅಸೋಟಿ ಹೆಸರು ಕೇಳಿ ಬಂದಿದೆ. ಈ ನಡುವೆ ಪ್ರಭಾವಿ ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾರ ಹೆಸರು ಚಾಲ್ತಿಯಲ್ಲಿದೆ ಬಹುತೇಕ ಇಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಖೈರುಗೊಳ್ಳುವ ಸಾಧ್ಯತೆಗಳಿವೆ.

ಉಳಿದಂತೆ ಮೈಸೂರಿನ ಅಭ್ಯರ್ಥಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಪ್ರಾಯವನ್ನು ಹೈಕಮಾಂಡ್ ನಿರೀಕ್ಷಿಸುತ್ತಿದೆ. ಮೈಸೂರು ರಾಜವಂಶಸ್ಥ ಯಧುವೀರ್ ಒಡೆಯರ್ ಬಿಜೆಪಿಯಿಂದ ಕಣದಲ್ಲಿ ಇರುವುದರಿಂದ ಕಾಂಗ್ರೆಸ್ ಎಂ.ಲಕ್ಷಣ್ ಬದಲಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಯತೀಂದ್ರರನ್ನೇ ಅಭ್ಯರ್ಥಿ ಮಾಡುವ ಚಿಂತನೆಯಲ್ಲಿದೆ. ಹೈಕಮಾಂಡ್ ಬಳಿ ಇಂದು ನಡೆಯುವ ಚರ್ಚೆಯಲ್ಲಿ ಈ ಕ್ಷೇತ್ರಕ್ಕೂ ಅಭ್ಯರ್ಥಿ ಆಯ್ಕೆಯಾಗಲಿದೆ ಎನ್ನಲಾಗಿದೆ.

ಅತ್ಯಂತ ಸಂಕೀರ್ಣ ಕ್ಷೇತ್ರವಾಗಿ ಕೋಲಾರ ಮಾರ್ಪಟ್ಟಿದೆ. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಇಲ್ಲಿ ಮರು ಸ್ಪರ್ಧೆ ಮಾಡಲು ಆಸಕ್ತಿ ವಹಿಸಿದ್ದಾರೆ. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಆಪ್ತ ಬಿ.ಸಿ.ಮುದ್ದು ಗಂಗಾಧರ್ ಅವರಿಗೆ ಟಿಕೆಟ್ ನೀಡಲು ಆಸಕ್ತಿ ತೋರಿಸಿದೆ. ಜೊತೆಗೆ ಇತರ ಪಕ್ಷಗಳಿಂದ ನಾಯಕರನ್ನು ಕರೆ ತಂದು ಕಣಕ್ಕಿಳಿಸುವ ತಯಾರಿಯೂ ನಡೆದಿದೆ.

ರಾಜ್ಯದಲ್ಲಿರುವ ಐದು ಮೀಸಲು ಕ್ಷೇತ್ರಗಳಲ್ಲಿ ಈಗಾಗಲೇ ವಿಜಯಪುರಕ್ಕೆ ಬಲಗೈ ಸಮುದಾಯದ ರಾಜು ಅಲಗೂರ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಬಾಕಿ ಇರುವ ಕಲ್ಬುರ್ಗಿ, ಚಾಮರಾಜನಗರ ಕ್ಷೇತ್ರಗಳು ಬಲಗೈ ಸಮುದಾಯದ ಪಾಲಾಗುವ ಸಾಧ್ಯತೆಗಳಿವೆ. ಉಳಿದ ಚಿತ್ರದುರ್ಗ ಮತ್ತು ಕೋಲಾರದಲ್ಲಿ ಎರಡು ಕಡೆ ಎಡಗೈ ಮತ್ತು ಉಳಿದ ಮೀಸಲು ಸಮುದಾಯಗಳಿಗೆ ಅವಕಾಶ ನೀಡಬೇಕಿದೆ. ಚಿತ್ರದುರ್ಗಕ್ಕೆ ಎಂ.ಚಂದ್ರಪ್ಪ ಅವರ ಹೆಸರು ಅಖೈರುಗೊಂಡಿದ್ದರು. ಸಾಮಾಜಿಕ ನ್ಯಾಯ ಪಾಲನೆ ಕಾರಣಕ್ಕೆ ಮೊದಲ ಪಟ್ಟಿಯಲ್ಲಿ ಹೆಸರು ತಡೆ ಹಿಡಿಯಲಾಗಿತ್ತು. ಇನ್ನೂ ಬೋವಿ ಮತ್ತು ಲಂಬಾಣಿ ಸಮುದಾಯಕ್ಕೂ ಅವಕಾಶ ನೀಡಬೇಕಿರುವುದರಿಂದ ಕೋಲಾರದಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಮೊದಲ ಪಟ್ಟಿಯಲ್ಲಿ ಜಯಪ್ರಕಾಶ ಹೆಗ್ಡೆ ಅವರ ಹೆಸರಿತ್ತು. ಆದರೆ ಅವರಿನ್ನೂ ಆಗ ಕಾಂಗ್ರೆಸ್ ಸೇರಿರಲಿಲ್ಲ. ಹೀಗಾಗಿ ಷರತ್ತಿಗೆ ಒಳಪಟ್ಟು ಎಂಬ ಟಿಪ್ಪಣಿಯೊಂದಿಗೆ ತಡೆ ಹಿಡಿಯಲಾಗಿತ್ತು. ಜಯಪ್ರಕಾಶ್ ಹೆಗ್ಡೆ ಈಗ ಕಾಂಗ್ರೆಸ್ ಸೇರಿದ್ದಾರೆ. ಆದರೆ ಗಮನಾರ್ಹ ಬೆಳವಣಿಗೆಯಲ್ಲಿ ಬಿಜೆಪಿ ಈ ಕ್ಷೇತ್ರಕ್ಕೆ ಅಜಾತ ಶತ್ರು ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದೆ. ಅವರ ಎದುರು ಸ್ರ್ಪಸಲು ಜಯಪ್ರಕಾಶ್ ಹೆಗ್ಡೆ ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಕಾಂಗ್ರೆಸ್ ವಕ್ತಾರರಾದ ಸುದೀರ್ ಮುರೋಳಿ ಅವರನ್ನು ಕಣಕ್ಕಿಳಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಕಾಂಗ್ರೆಸ್ ನಾಯಕರು ಪರಿಶೀಲನೆ ನಡೆಸುತ್ತಿದ್ದಾರೆ.

ಬಾಗಲಕೋಟೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ನಡುವೆÀ ಸಚಿವ ಶಿವಾನಂದ ಪಾಟೀಲ್ ತಮ್ಮ ಪುತ್ರಿ ಸಂಯುಕ್ತಾ ಪಾಟೀಲ್‍ರನ್ನು ಕಣಕ್ಕಿಳಿಸಲು ಲಾಬಿ ನಡೆಸುತ್ತಿದ್ದಾರೆ.ದಕ್ಷಿಣ ಕನ್ನಡಕ್ಕೆ ವಿನಯ್ ಕುಮಾರ ಸೊರಕೆ ಅಭ್ಯರ್ಥಿಯಾಗುವುದು ಖಚಿತವಾಗಿದೆ. ರಾಯಚೂರಿಗೆ ಕುಮಾರ್ ನಾಯಕ್ ಅಥವಾ ರವಿ ಪಾಟೀಲ್‍ರನ್ನು ಅಭ್ಯರ್ಥಿ ಮಾಡಲು ಚರ್ಚೆಗಳು ನಡೆಯುತ್ತಿವೆ.

ಕ್ಷೇತ್ರ – ಅಭ್ಯರ್ಥಿಗಳು
ಚಿಕ್ಕಬಳ್ಳಾಪುರ ರಕ್ಷಾ ರಾಮಯ್ಯ/ವೀರಪ್ಪ ಮೊಯ್ಲಿ
ದಾವಣಗೆರೆ -ಪ್ರಭಾ ಮಲ್ಲಿಕಾರ್ಜುನ್
ಬೀದರ್ -ರಾಜಶೇಖರ್ ಪಾಟೀಲ್
ಕೊಪ್ಪಳ -ರಾಜಶೇಖರ್ ಹಿಟ್ನಾಳ್
ಬೆಳಗಾವಿ -ಮೃಣಾಲ್
ಚಿಕ್ಕೊಡಿ -ಪ್ರಿಯಾಂಕ
ಉತ್ತರ ಕನ್ನಡ- ಅಂಜಲಿ ನಿಂಬಾಳ್ಕರ್
ಚಿಕ್ಕಬಳ್ಳಾಪುರ -ರಕ್ಷಾ ರಾಮಯ್ಯ
ಬೆಂಗಳೂರು ಕೇಂದ್ರ- ಮನ್ಸೂರ್ ಆಲಿಖಾನ್
ಬೆಂಗಳೂರು ದಕ್ಷಿಣ -ಸೌಮ್ಯರೆಡ್ಡಿ
ಬೆಂಗಳೂರು ಉತ್ತರ -ಪ್ರಿಯಾಕೃಷ್ಣ/ರಾಜೀವ್‍ಗೌಡ
ಬೆಂಗಳೂರು ಕೇಂದ್ರ -ಮನ್ಸೂರ್ ಖಾನ್
ಚಾಮರಾಜನಗರ -ಸುನೀಲ್ ಬೋಸ್/ದರ್ಶನ್
ಕಲ್ಬುರ್ಗಿ -ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ
ಬಳ್ಳಾರಿ -ವಿ.ಎಸ್.ಉಗ್ರಪ್ಪ/ಮಂಜುಳ ನಾಗೇಂದ್ರ
ಹುಬ್ಬಳ್ಳಿ-ಧಾರವಾಡ ಶಿವಲೀಲಾ ಕುಲಕರ್ಣಿ/ ವಿನೋದ್ ಅಸೋಟಿ

RELATED ARTICLES

Latest News