ಬಾಗಲಕೋಟೆ,ಮಾ.20- ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಪೈಪೋಟಿ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರಬಲ ಆಕಾಂಕ್ಷಿ ವೀಣಾ ಕಾಶಪ್ಪನವರ ಬೆಂಬಲಿಗರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನವರೆಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಸ್ಪರ್ಧಿಗಳಲ್ಲಿ ಆನಂದ್ ನ್ಯಾಮೇಗೌಡ, ವೀಣಾ ಕಾಶಪ್ಪನವರ್ ಪ್ರಬಲ ಆಕಾಂಕ್ಷಿಯಾಗಿದ್ದರು. ಕಳೆದ ವಾರದಿಂದೀಚೆಗೆ ಸಚಿವ ಶಿವಾನಂದ ಪಾಟೀಲ್‍ರವರ ಪುತ್ರಿ ಸಂಯುಕ್ತ ಪಾಟೀಲ್‍ರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಸಮೀಕ್ಷೆಗಳ ಪ್ರಕಾರ, ಸಂಯುಕ್ತ ಪಾಟೀಲ್ ಗೆಲುವು ಸುಲಭ ಎಂದು ವಿಶ್ಲೇಷಿಸಲಾಗಿದೆ. ಹೀಗಾಗಿ ರಾಜ್ಯ ನಾಯಕರು ಸಚಿವರ ಪುತ್ರಿಗೆ ಮಣೆ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದರಿಂದ ಸಿಟ್ಟಾದ ವೀಣಾ ಕಾಶಪ್ಪನವರ ಬೆಂಬಲಿಗರು ಬೀದಿಗಿಳಿದಿದ್ದಾರೆ.
ಮೂರು ದಿನಗಳ ಹಿಂದೆ ವೀಣಾ ಕಾಶಪ್ಪನವರ ಮಹಿಳಾ ಬೆಂಬಲಿಗರು ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದರು. ಇಂದು ಬಾಗಲಕೋಟೆಯ ನವನಗರದಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಬೆಂಬಲಿಗರು ಮುಂದಾಗಿದ್ದಾರೆ.
ಈ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ಕಾರ್ಯಕರ್ತರನ್ನು ತಡೆದಿದ್ದಾರೆ. ಇದರಿಂದ ಕೆಲಕಾಲ ಮಾತಿನ ಚಕಮಕಿ ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬೆಂಬಲಿಗರು ಟೈರ್‍ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಸಂಯುಕ್ತ ಪಾಟೀಲ್ ಹೊರಜಿಲ್ಲೆಯವರಾಗಿದ್ದು, ಅವರಿಗೆ ಅವಕಾಶ ನೀಡಬಾರದು. ವೀಣಾ ಕಾಶಪ್ಪನವರಿಗೆ ಟಿಕೆಟ್ ನೀಡಬೇಕೆಂಬುದು ಬೆಂಬಲಿಗರ ಆಗ್ರಹವಾಗಿತ್ತು.