Saturday, May 4, 2024
Homeರಾಜ್ಯಬೆಂಗಳೂರಿನಲ್ಲಿ 8300 ಜನರ ಬಳಿ ಲೈಸೆನ್ಸ್ಡ್ ಗನ್..!

ಬೆಂಗಳೂರಿನಲ್ಲಿ 8300 ಜನರ ಬಳಿ ಲೈಸೆನ್ಸ್ಡ್ ಗನ್..!

ಬೆಂಗಳೂರು, ಮಾ.20- ನಗರದಲ್ಲಿ 8300 ಮಂದಿ ಶಸ್ತ್ರಾಸ್ತ್ರಗಳ ಪರವಾನಗಿ (ಗನ್ ಲೈಸೆನ್ಸ್) ಪಡೆದಿದ್ದಾರೆ.ಗಣ್ಯವ್ಯಕ್ತಿಗಳು, ಜಮೀನ್ದಾರರು, ಸೆಕ್ಯುರಿಟಿ ಗಾರ್ಡ್ಗಳು, ಉದ್ಯಮಿಗಳು ಹಾಗೂ ಇತರರು ಬಂದೂಕು, ಡಬಲ್ ಬ್ಯಾರೆಲ್ ಗನ್, ಸಿಂಗಲ್ ಬ್ಯಾರೆಲ್ ಗನ್, ಶಾರ್ಟ್ ಗನ್, ಪಿಸ್ತೂಲು, ರಿವಾಲ್ವರ್ಗಳಿಗೆ ಪರವಾನಗಿ ಪಡೆದಿದ್ದಾರೆ.

ಆಸ್ತಿ ಮತ್ತು ಸಂಪತ್ತು ರಕ್ಷಣೆಗಾಗಿ, ಜೀವ ಭಯದಿಂದ ಶಸ್ತ್ರಾಸ್ತ್ರಗಳಿಗೆ ಪರವಾನಗಿ ಪಡೆದು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೂಡಲೇ ಜಾರಿಗೆ ಬರುವಂತೆ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಶಸ್ತ್ರಾಸ್ತ್ರ ಹೊಂದಿರುವವರು ತಮ್ಮ ಶಸ್ತ್ರಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಠೇವಣಿ ಮಾಡಲು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಆದೇಶಿಸಿದ್ದಾರೆ.

ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾರ್ವಜನಿಕರ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆಯನ್ನು ಕಾಪಾಡುವ ಸಲುವಾಗಿ ಶಸ್ತ್ರ ಪರವಾನಗಿಯನ್ನು ಮಂಜೂರು ಮಾಡುವುದು ಹಾಗೂ ಪರವಾನಗಿ ಹೊಂದಿರುವ ಸಾರ್ವಜನಿಕರು ತಾವು ಹೊಂದಿರುವ ಆಯುಧಗಳನ್ನು ಒಯ್ಯುವುದಾಗಲಿ, ಇಟ್ಟುಕೊಳ್ಳುವುದು, ಬಳಕೆಯನ್ನು ನಿಬರ್ಂಸಲಾಗಿದೆ.

ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಶಸ್ತ್ರಗಳನ್ನು ಠೇವಣಿ ಮಾಡಿದ ಪರವಾನಗಿದಾರರು ಜೂನ್ 11ರ ನಂತರ ಠಾಣೆಯ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ತಮ್ಮ ಶಸ್ತ್ರಗಳನ್ನು ಹಿಂದಕ್ಕೆ ಪಡೆದುಕೊಳ್ಳಬಹುದಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ವಿನಾಯಿತಿ: ಶಸ್ತ್ರ ಪರವಾನಗಿ ಹೊಂದಿರುವ ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಸ್ತ್ರ, ಪರವಾನಿಗೆ ಹೊಂದಿರುವ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಸದಸ್ಯರುಗಳಿಗೆ ಮತ್ತು ಕೊಡವ ಸಮಾಜದ ಶಸ್ತ್ರ ಪರವಾನಿಗೆದಾರರಿಗೆ ಶಸ್ತ್ರಗಳನ್ನು ಠಾಣೆಯಿಂದ ಠೇವಣಿ ಮಾಡುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ. ಶಸ್ತ್ರ ಪರವಾನಗಿ ವಿನಾಯಿತಿ ಕೋರಿ ತಮ್ಮ ವಿಭಾಗದ ಉಪಪೊಲೀಸ್ ಆಯುಕ್ತರವರ ಕಚೇರಿಯಲ್ಲಿ ಮಾರ್ಚ್ 25ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಂತಹ ಅರ್ಜಿಗಳನ್ನು ಸಂಬಂಧಪಟ್ಟ ಉಪಪೊಲೀಸ್ ಆಯುಕ್ತರು ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯ ವರದಿಯೊಂದಿಗೆ ಮುಂದಿನ ಕ್ರಮಕ್ಕಾಗಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಪರಿಶೀಲನಾ ಸಮಿತಿಗೆ ಕಳುಹಿಸಲಾಗುತ್ತದೆ.

ಪರಿಶೀಲನಾ ಸಮಿತಿ:
ಈ ಪರಿಶೀಲನಾ ಸಮಿತಿಯಲ್ಲಿ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಆಡಳಿತ ವಿಭಾಗದ ಡಿಸಿಪಿ ಇರುತ್ತಾರೆ. ಇವರು ಶಸ್ತ್ರ ಪರವಾನಗಿ ವಿನಾಯಿತಿ ಕೋರಿ ಬರುವ ಅರ್ಜಿಗಳನ್ನು ಪರಿಶೀಲಿಸಿ ಯಾರಿಗೆ ವಿನಾಯಿತಿ ನೀಡಬೇಕೆಂದು ನಿರ್ಧರಿಸುತ್ತಾರೆ.

RELATED ARTICLES

Latest News