Thursday, May 2, 2024
Homeರಾಜ್ಯರಾಜ್ಯದಲ್ಲಿ ಕುರುಡು ಕಾಂಚಾಣ ಕುಣಿತ : 1.42 ಕೋಟಿ ನಗದು, 4.7 ಕೋಟಿ ರೂ. ಮೌಲ್ಯದ...

ರಾಜ್ಯದಲ್ಲಿ ಕುರುಡು ಕಾಂಚಾಣ ಕುಣಿತ : 1.42 ಕೋಟಿ ನಗದು, 4.7 ಕೋಟಿ ರೂ. ಮೌಲ್ಯದ ವಸ್ತುಗಳು ವಶ

ಬೆಂಗಳೂರು,ಮಾ.20- ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿ ನಾಲ್ಕು ದಿನ ಕಳೆಯುವಷ್ಟರಲ್ಲೇ ಕುರುಡು ಕಾಂಚಾಣ ಬಾರಿ ಸದ್ದು ಮಾಡುತ್ತಿದ್ದು , 1.42 ಕೋಟಿ ನಗದು ಸೇರಿದಂತೆ ಒಟ್ಟು 4.7 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದೆ. ತಡರಾತ್ರಿ ಮಿಂಚಿನ ಕಾರ್ಯಾಚರಣೆ ನಡೆಸಿರುವ ಚುನಾವಣಾ ಆಯೋಗದ ಅಧಿಕಾರಿಗಳು ರಾಮನಗರ ಜಿಲ್ಲೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 14 ಲಕ್ಷ ರೂ. ಬೆಲೆ ಸೀರೆಗಳನ್ನು ಜಪ್ತಿ ಮಾಡಿದ್ದಾರೆ.

ಶನಿವಾರ, ಭಾನುವಾರ, ಸೋಮವಾರ, ಮಂಗಳವಾರ ಸೇರಿದಂತೆ ನಾಲ್ಕು ದಿನಗಳಲ್ಲಿ ರಾಜ್ಯದ ವಿವಿಧೆಡೆ ಈವರೆಗೂ 1.42 ಕೋಟಿ ನಗದು, 5.45 ಲಕ್ಷ ಮೌಲ್ಯದ ಉಚಿತ ಉಡುಗೊರೆ, ಡ್ರಗ್ಸ್, ಮದ್ಯ ಸೇರಿದಂತೆ ಸರಿಸುಮಾರು 5 ಕೋಟಿ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ಈವರೆಗೂ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ 135 ಎಫ್‍ಐಆರ್‍ಗಳನ್ನು ದಾಖಲಿಸಿ ನಗದು, ಬೆಲೆ ಬಾಳುವ ಉಡುಗೊರೆಗಳು, ಸಂಗ್ರಹಿಸಿಟ್ಟಿದ್ದ ಸೀರೆ, ಡ್ರಗ್ಸ್ ಸೇರಿದಂತೆ ವಶಪಡಿಸಿಕೊಂಡಿರುವ ವಸ್ತುಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಮಂಡ್ಯದ ಕೆ.ಆರ್‍ಪೇಟೆಯಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 99,20,000 ಹಣವನ್ನು ಜಪ್ತಿ ಮಾಡಿದರೆ, ಮೈಸೂರಿನ ಹುಣಸೂರು ತಾಲ್ಲೂಕಿನಲ್ಲಿ 15 ಲಕ್ಷ ಜಪ್ತಿ ಮಾಡಲಾಗಿದೆ.ಇನ್ನು ಪೊಲೀಸ್, ಕ್ಷಿಪ್ರಪಡೆ, ಸ್ಥಿರ ಕಣ್ಗಾವಲು ತಂಡ 994.31 ಲೀಟರ್ ಮದ್ಯವನ್ನು ವಶಕ್ಕೆ ಪಡೆದುಕೊಂಡಿದೆ. ಇದರ ಮೌಲ್ಯ 2,37 ಲಕ್ಷ ರೂ.ಗಳು. ಜೊತೆಗೆ ಅಬಕಾರಿ ಇಲಾಖೆ 98,644 ಲೀಟರ್ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದು, ಇದರ ಮೌಲ್ಯ 3.17 ಕೋಟಿ ರೂ.ಇದರ ಜೊತೆಗೆ ಡ್ರಗ್ಸ್ ಮೂಲಕವೂ ಮತರಾರರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ.

ಈವರೆಗೆ 3.565 ಕೆಜಿ ಮೌಲ್ಯ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಮೌಲ್ಯ 5,06, 950 ಲಕ್ಷವಾಗಿದೆ. ಈ ಎಲ್ಲಾ ಅಕ್ರಮಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ 135 ಎಫ್‍ಐಆರ್ ದಾಖಲು ಮಾಡಿಕೊಳ್ಳಲಾಗಿದೆ.ಚುನಾವಣೆ ಯಾವುದೇ ಭಯಭೀತಿ ಇಲ್ಲದೆ ನಡೆಯುವ ಉದ್ದೇಶದಿಂದ 825 ಸಶಸ್ತ್ರಾಗಳನ್ನು ವಶಕ್ಕೆ ವಶಕ್ಕೆ ಪಡೆದುಕೊಳ್ಳಲಾಗಿದೆ. 7 ಸಶಸ್ತ್ರಗಳ ಪರವಾನಗಿ ರದ್ದು ಮಾಡಲಾಗಿದೆ. ಇನ್ನು ಅಬಕಾರಿ ಇಲಾಖೆಯಡಿ 142 ಪ್ರಕರಣ, ಪರವಾನಗಿ ಉಲ್ಲಂಘನೆ ಅಡಿಯಲ್ಲಿ 126 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.

ಕೇವಲ ನಾಲ್ಕು ದಿನದಲ್ಲೇ ಇಷ್ಟು ಪ್ರಮಾಣದಲ್ಲಿ ಆಯೋಗ ಹತ್ತಿರತ್ತಿರ 5 ಕೋಟಿ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಮತದಾನ ನಡೆಯಲು ಇನ್ನು ಒಂದು ತಿಂಗಳಿಗೂ ಹೆಚ್ಚು ಕಾಲಾವಕಾಶ ಇರುವುದರಿಂದ ಕುರುಡು ಕಾಂಚಾಣ ಚುನಾವಣಾ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗ ಈ ಬಾರಿಯೂ ರಾಜ್ಯದೆಲ್ಲೆಡೆ ಹದ್ದಿನ ಕಣ್ಣಿಟ್ಟಿದೆ. ಮುಖ್ಯವಾಗಿ ಜಿಲ್ಲೆಗಳು, ತಾಲ್ಲೂಕುಗಳು ಸಂಪರ್ಕಿಸುವ ಚೆಕ್ ಪೋಸ್ಟ್ ಗಳು, ಗಡಿಭಾಗ ಸೇರಿದಂತೆ ಮತ್ತಿತರ ಕಡೆ ಭದ್ರತಾ ಪಡೆಯನ್ನು ಹೆಚ್ಚಿಸಲಾಗಿದೆ. ವಿಶೇಷವಾಗಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಮೊದಲ ಬಾರಿಗೆ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ.

ಆಯೋಗ ಚಾಪೆ ಕೆಳಗೆ ನುಸುಳಿದರೆ ರಾಜಕೀಯ ಪಕ್ಷಗಳು ರಂಗೋಲಿ ಕೆಳಗೆ ನುಸುಳುವ ತಂತ್ರವನ್ನು ಕರಗತ ಮಾಡಿಕೊಂಡಿದ್ದಾರೆ ಎಂಬುದಕ್ಕೆ ವಶಪಡಿಸಿಕೊಂಡಿರುವ ವಸ್ತುಗಳೇ ಸಾಕ್ಷಿಯಾಗಿವೆ.

RELATED ARTICLES

Latest News