Sunday, April 28, 2024
Homeರಾಜ್ಯಕೃಷ್ಣಗಿರಿಯಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿರುವ ಮಾಹಿತಿಯಿದ್ದರೂ ಕೇಂದ್ರ ಸುಮ್ಮನಿರೋದೇಕೆ..? : ಡಿ.ಕೆ.ಸುರೇಶ್ ಪ್ರಶ್ನೆ

ಕೃಷ್ಣಗಿರಿಯಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿರುವ ಮಾಹಿತಿಯಿದ್ದರೂ ಕೇಂದ್ರ ಸುಮ್ಮನಿರೋದೇಕೆ..? : ಡಿ.ಕೆ.ಸುರೇಶ್ ಪ್ರಶ್ನೆ

ಬೆಂಗಳೂರು,ಮಾ.20- ಭಯೋತ್ಪಾದಕರಿಗೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ತರಬೇತಿ ನೀಡಲಾಗುತ್ತಿದೆ, ಅವರು ಬೆಂಗಳೂರು ಸೇರಿದಂತೆ ವಿವಿಧ ಕಡೆ ಬಾಂಬ್ ಸ್ಪೋಟಿಸುತ್ತಿದ್ದಾರೆ ಎಂಬ ಮಾಹಿತಿ ಗೊತ್ತಿದ್ದರೂ ಕ್ರಮ ತೆಗೆದುಕೊಳ್ಳದೆ ಕೇಂದ್ರ ಸರ್ಕಾರ ಮುಚ್ಚಿಟ್ಟಿರುವುದು ಯಾವ ಕಾರಣಕ್ಕೆ ಎಂದು ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದಲೂ ಕೇಂದ್ರದ ತನಿಖಾ ಸಂಸ್ಥೆಗಳು ಬಿಜೆಪಿಯವರ ಅಧೀನದಲ್ಲಿವೆ. ಬೇಹುಗಾರಿಕೆಯನ್ನು ಕಾಂಗ್ರೆಸ್‍ನವರ ವಿರುದ್ಧ ಛೂ ಬಿಡುವ ಬದಲಾಗಿ ಭಯೋತ್ಪಾದಕರ ವಿರುದ್ಧ ಬಳಸಿದ್ದರೆ ಬಾಂಬ್ ಸ್ಪೋಟದಂತಹ ಅನಾಹುತಗಳು ನಡೆಯುತ್ತಿರಲಿಲ್ಲ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡಲಾಗುತ್ತಿದೆ. ಅವರು ದೇಶದ ವಿವಿಧೆಡೆ ಹೋಗಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅಂದ ಮೇಲೆ ಭಯೋತ್ಪಾದನಾ ತರಬೇತಿ ಬಗ್ಗೆ ಅವರಿಗೆ ಮಾಹಿತಿ ಇದೆ ಎಂದರ್ಥ ಎಂದರು.

ಎಲ್ಲವೂ ಗೊತ್ತಿದ್ದರೂ ಏಕೆ ಕ್ರಮ ಕೈಗೊಳ್ಳಲಿಲ್ಲ, ಮುಚ್ಚಿಟ್ಟಿರುವುದು ಏಕೆ, ಯಾವ ಉದ್ದೇಶಕ್ಕೆ ಇದನ್ನು ಬಳಸಿಕೊಳ್ಳಲು ಬಯಸುತ್ತಿದ್ದಾರೆ . ಮುಚ್ಚಿಟ್ಟಿರುವುದರ ವಿರುದ್ಧ ತನಿಖೆ ಮತ್ತು ಕ್ರಮ ಎರಡೂ ಆಗಬೇಕಿದೆ ಎಂದು ಡಿ.ಕೆ.ಸುರೇಶ್ ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಟೀಕೆಗಳಿಗೆ ಉತ್ತರಿಸುವ ಸ್ಥಿತಿಯಲ್ಲಿ ನಾನಿಲ್ಲ. ಅವರು ಆರೋಗ್ಯ ಸರಿಯಿಲ್ಲ ಎಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊದಲು ಅವರು ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅನಂತರ ಅವರ ಟೀಕೆಗಳಿಗೆ ಪ್ರತಿಕ್ರಿಯಿಸುತ್ತೇನೆ ಎಂದರು.

ರಾಜಕಾರಣದಲ್ಲಿ ಎದುರಾಳಿ ಬಲಿಷ್ಠವಾಗಿರಬೇಕು. ಆಗಲೇ ಪ್ರಜಾಪ್ರಭುತ್ವಕ್ಕೆ ಅರ್ಥ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಆರೋಗ್ಯ ಚೇತರಿಸಿಕೊಳ್ಳಲಿ. ಆದಷ್ಟು ಬೇಗ ಚುನಾವಣೆಗೆ ಮರಳಲಿ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಯಾರ ಕುತ್ತಿಗೆಯನ್ನೂ ಕೊಯ್ದಿಲ್ಲ, ಎಚ್.ಡಿ.ದೇವೇಗೌಡವರನ್ನು ದೇಶದ ಪ್ರಧಾನಿ ಮಾಡಿತ್ತು. ಹೀಗಾಗಿ ಅವರು ದೇಶಾದ್ಯಂತ ಗುರುತಿಸಿಕೊಂಡರು. ಇಲ್ಲವಾದರೆ 30 ಮಂದಿ ಮಾಜಿ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿರುತ್ತಿದ್ದರು. ಕಾಂಗ್ರೆಸ್ ಪಕ್ಷ ಯಾರಿಗೂ ಅನ್ಯಾಯ ಮಾಡಿಲ್ಲ ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜಾತ್ಯತೀತ ನಿಲುವಿನ ಬಗ್ಗೆ ಈ ಹಿಂದೆ ನೀಡಿದ್ದ ಹೇಳಿಕೆಗಳು ಸ್ಮರಣಾರ್ಹ. ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ. ಈ ರಾಜ್ಯಕ್ಕೆ ರಾಷ್ಟ್ರೀಯ ಪಕ್ಷಗಳು ಬೇಕಿಲ್ಲ. ಪ್ರಾದೇಶಿಕ ಪಕ್ಷಗಳು ಸಾಕು ಎಂದು ಅವರು ಹೇಳಿದ್ದನ್ನು ನೆನಪಿಸಿಕೊಳ್ಳಬೇಕು ಎಂದರು. ಬಿಜೆಪಿಯವರು ಸಣ್ಣದನ್ನು ದೊಡ್ಡದಾಗಿ ಮಾಡುವ ಕಲೆಯಲ್ಲಿ ಸಿದ್ಧ ಹಸ್ತರು. ನಗರ್ತಪೇಟೆಯಲ್ಲಿನ ಪ್ರಕರಣವನ್ನು ವ್ಯಾಪಕವಾಗಿ ಬೆಂಬಲಿಸಿದ್ದಾರೆ. ಮಾಧ್ಯಮಗಳು ಅವರಿಗೆ ವ್ಯಾಪಕ ಪ್ರಚಾರ ನೀಡುತ್ತವೆ ಎಂಬ ಕಾರಣಕ್ಕಾಗಿಯೇ ಗಲಾಟೆ ಮಾಡುತ್ತಾರೆ ಎಂದು ಹೇಳಿದರು.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಅಭ್ಯರ್ಥಿ ಬಲಿಷ್ಠವಾಗಿದ್ದಾರೆ. ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ, ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬೆಂಗಳೂರು ಗ್ರಾಮಾಂತರದಲ್ಲಿ ನಾನು ಕೆಲಸ ಮಾಡಿದ್ದೇನೆ, ಅದಕ್ಕೆ ಕೂಲಿ ಕೇಳುತ್ತಿದ್ದೇನೆ. ಇಡೀ ದೇಶವೇ ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿದ್ದಾಗ ನಾನು ಬೀದಿಯಲ್ಲಿನ ಜನರ ನಡುವೆ ಕೆಲಸ ಮಾಡುತ್ತಿದ್ದೆ. ನಾನು ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಚರ್ಚೆಯಾಗುವುದಿಲ್ಲ. ಅನಗತ್ಯವಾಗಿ ವಿವಾದಕ್ಕೆ ಸಿಲುಕಿಸಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರದಲ್ಲಿ ಚುನಾವಣಾ ಅಕ್ರಮಗಳು ನಡೆಯುತ್ತವೆ ಎಂದು ಕುಮಾರಸ್ವಾಮಿಯವರು ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಉಡುಗೊರೆಗಳನ್ನು ಕೊಟ್ಟು, ಜನರ ಮನವೊಲಿಸುವ ಅವಶ್ಯಕತೆ ನಮಗಿಲ್ಲ. ಕುಮಾರಸ್ವಾಮಿ ಪ್ರಚಾರಕ್ಕಾಗಿ ಟೀಕೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

RELATED ARTICLES

Latest News