Friday, May 3, 2024
Homeರಾಷ್ಟ್ರೀಯವಿಶ್ವದ ಅತಿದೊಡ್ಡ ಚುನಾವಣಾ ಹಬ್ಬ ಆರಂಭ, ಮೊದಲ ಹಂತದ ಲೋಕಸಭಾ ಚುನಾವಣೆಗೆ ಅಧಿಸೂಚನೆ ಜಾರಿ

ವಿಶ್ವದ ಅತಿದೊಡ್ಡ ಚುನಾವಣಾ ಹಬ್ಬ ಆರಂಭ, ಮೊದಲ ಹಂತದ ಲೋಕಸಭಾ ಚುನಾವಣೆಗೆ ಅಧಿಸೂಚನೆ ಜಾರಿ

ನವದೆಹಲಿ,ಮಾ.20- ಜಾಗತಿಕವಾಗಿ ಕುತೂಹಲ ಕೆರಳಿಸಿರುವ ದೇಶದ ಲೋಕಸಭೆ ಚುನಾವಣೆಗೆ ಇಂದಿನಿಂದ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಮೊದಲ ಹಂತದ ಚುನಾವಣೆಗೆ ಅಧಿಸೂಚನೆ ಜಾರಿಯಾಗಿದೆ.21 ರಾಜ್ಯಗಳ 102 ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ಚುನಾವಣೆ ನಡೆಯಲಿದೆ. ಅದಕ್ಕಾಗಿ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ಮಾ.27 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮಾ.28 ರಂದು ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಮಾ.30 ಕೊನೆಯ ದಿನವಾಗಿದೆ.

ಮೊದಲ ಹಂತದಲ್ಲಿ ಅರುಣಾಚಲ ಪ್ರದೇಶದ 2, ಅಸ್ಸಾಂನ 5, ಬಿಹಾರದ 4, ಛತ್ತೀಸ್ಘಡದ 1, ಮಧ್ಯಪ್ರದೇಶದ 6, ಮಹಾರಾಷ್ಟ್ರದ 5, ಮಣಿಪುರದ ಒಂದು ಕ್ಷೇತ್ರದ ಪೂರ್ತಿ ಚುನಾವಣೆ, ಮತ್ತೊಂದು ಕ್ಷೇತ್ರದ ಅರ್ಧ ಚುನಾವಣೆ, ಮೇಘಾಲಯದ 2, ಮಿಜೋರಾಂ, ನಾಗಾಲ್ಯಾಂಡ್, ಸಿಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್, ಜಮ್ಮು-ಕಾಶ್ಮೀರ್, ಲಕ್ಷದ್ವೀಪ್, ಪಾಂಡಿಚೆರಿ ಕ್ಷೇತ್ರಗಳ ತಲಾ 1 ಕ್ಷೇತ್ರಗಳಿಗೆ, ರಾಜಸ್ಥಾನದ 12, ತಮಿಳುನಾಡಿನ 39, ಉತ್ತರ ಪ್ರದೇಶದ 8, ಉತ್ತರಾಖಾಂಡ್ನ 5, ಪಶ್ಚಿಮ ಬಂಗಾಳದ 3 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಪ್ರಮುಖ ರಾಜ್ಯಗಳ ಪೈಕಿ ತಮಿಳುನಾಡಿಗೆ ಮೊದಲ ಹಂತದಲ್ಲೇ ಎಲ್ಲಾ 39 ಕ್ಷೇತ್ರಗಳಿಗೆ ಚುನಾವಣೆ ಪೂರ್ಣಗೊಳ್ಳಲಿದೆ.

ಉತ್ತರಾಖಾಂಡ್ನ 5 ಕ್ಕೆ 5 ಕ್ಷೇತ್ರಗಳಿಗೂ ಚುನಾವಣೆ ಚಾಲ್ತಿಯಲ್ಲಿದೆ. ಉಳಿದಂತೆ ಒಂದೆರೆಡು ಕ್ಷೇತ್ರಗಳಿರುವ ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಅಂಡಮಾನ್-ನಿಕೋಬಾರ್, ಲಕ್ಷದ್ವೀಪ್, ಪಾಂಡಿಚೇರಿ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಲೋಕಸಭೆ ಚುಣಾವಣೆ ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಕ್ಷೇತ್ರಗಳಿಗೆ ಮೊದಲ ಹಂತದಲ್ಲೇ ಮತದಾನ ನಡೆಯುತ್ತಿರುವುದು ಗಮನಾರ್ಹ. ನಂತರದ ಹಂತದಲ್ಲಿ 89, 94, 96, 49 ಮತ್ತು ತಲಾ 57 ಕ್ಷೇತ್ರಗಳಿಗೆ ಉಳಿದ 6 ಹಂತಗಳಲ್ಲಿ ಕ್ರಮವಾಗಿ ಚುನಾವಣೆ ನಡೆಯುತ್ತಿದೆ.

2ನೇ ಮತ್ತು 3ನೇ ಹಂತದಲ್ಲಿ ಕರ್ನಾಟಕದ 28 ಕ್ಷೇತ್ರಗಳಿಗೆ ಚುನಾವಣೆ ಪ್ರಕ್ರಿಯೆಗಳು ಚಾಲನೆಗೊಳ್ಳಲಿವೆ. ಬಿಹಾರ ಲೋಕಸಭೆ ಕ್ಷೇತ್ರಗಳಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಬಿಹಾರದ 40 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಿಗೆ ಮಾತ್ರ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಇಂದಿನಿಂದಲೇ ಆರಂಭವಾಗಿದೆ. ಆದರೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಿ ಮಾ.28 ರವರೆಗೆ ಗಡುವು ನೀಡಲಾಗಿದೆ.

ನಾಮಪತ್ರಗಳ ಪರಿಶೀಲನೆಗೆ ಮಾ.30, ನಾಮಪತ್ರ ಹಿಂಪಡೆಯಲು ಏ.2 ರವರೆಗೆ ಕಾಲಾವಕಾಶ ನೀಡಲಾಗಿದೆ.ಉಳಿದಂತೆ ಮತದಾನ ಏ.19 ರಂದೇ ನಡೆಯಲಿದ್ದು, ಜೂ.4 ರಂದು ಮತ ಎಣಿಕೆ ಹಾಗೂ ಜೂ. 6 ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.

ರಾಷ್ಟ್ರಪತಿಗಳ ಪರವಾಗಿ ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆ ಪ್ರಕಾರ ಮಾರ್ಚ್ 27 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರಲಿದೆ.ಆದಾಗ್ಯೂ, ಹಬ್ಬದ ಕಾರಣ, ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಬಿಹಾರದ ಲೋಕಸಭಾ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಮಾರ್ಚ್ 28 ಕೊನೆಯ ದಿನಾಂಕವಾಗಿರಲಿದೆ. ಬಿಹಾರದ 40 ಸ್ಥಾನಗಳ ಪೈಕಿ ನಾಲ್ಕರಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

18ನೇ ಲೋಕಸಭೆಯ ಚುನಾವಣೆಯು ಏಪ್ರಿಲ್ 19 ರಂದು ಪ್ರಾರಂಭವಾಗುತ್ತದೆ ಮತ್ತು ನಂತರದ ಹಂತಗಳು ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ನಡೆಯಲಿದೆ. ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

RELATED ARTICLES

Latest News