Tuesday, May 28, 2024
Homeರಾಜ್ಯ22ರಂದು ಬಾಕಿ ಉಳಿದಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಯಡಿಯೂರಪ್ಪ

22ರಂದು ಬಾಕಿ ಉಳಿದಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಯಡಿಯೂರಪ್ಪ

ನವದೆಹಲಿ,ಮಾ.20- ರಾಜ್ಯದ ಬಾಕಿರುವ ಐದು ಲೋಕಸಭಾ ಕ್ಷೇತ್ರಗಳಿಗೆ ಇದೇ 22ರಂದು ಕೇಂದ್ರ ವರಿಷ್ಠರು ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲಿದ್ದಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆ ಚರ್ಚಿಸಲಾಗಿದೆ. 22ರಂದು ಪ್ರಧಾನಿ ನರೇಂದ್ರಮೋದಿ ಅವರ ಜೊತೆ ಚರ್ಚಿಸಿದ ಬಳಿಕ ಅಂತಿಮ ಪಟ್ಟಿ ಘೋಷಣೆಯಾಗಲಿದೆ ಎಂದು ತಿಳಿಸಿದರು.

ಬೆಳಗಾವಿ, ಉತ್ತರಕನ್ನಡ, ಕೋಲಾರ, ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಲಾಗಿದೆ. ಕೆಲವು ಕಾರಣಗಳಿಂದ ಚಿತ್ರದುರ್ಗ ಮತ್ತು ರಾಯಚೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಬಹುತೇಕ ಮೂರು ಕ್ಷೇತ್ರಗಳಿಗೆ 22ರಂದು ಅಭ್ಯರ್ಥಿ ಹೆಸರು ಘೋಷಣೆಯಾಗಬಹುದು. ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಪಕ್ಷವೇ ತೀರ್ಮಾನಿಸುತ್ತದೆ. ವರಿಷ್ಠರ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು, ಪ್ರಧಾನಿ ನರೇಂದ್ರಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಾದರೆ ನಾವು ಎಲ್ಲದಕ್ಕೂ ಸಿದ್ಧರಾಗಬೇಕೆಂದು ಮನವಿ ಮಾಡಿದರು.

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಕೋಲಾರ ಕ್ಷೇತ್ರವನ್ನು ನಾವು ಜೆಡಿಎಸ್‍ಗೆ ಬಿಟ್ಟುಕೊಡಬೇಕು. ನಮ್ಮ ಸಂಸದರಾಗಿರುವ ಮುನಿಸ್ವಾಮಿಗೆ ಈಗಾಗಲೇ ಮಾಹಿತಿಯನ್ನು ನೀಡಲಾಗಿದೆ. ಇದಕ್ಕೆ ಅವರು ಸಮ್ಮತಿಸಿದ್ದಾರೆ. ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದು ಬಿಎಸ್‍ವೈ ಸ್ಪಷ್ಟಪಡಿಸಿದರು.

ಟಿಕೆಟ್ ಆಕಾಂಕ್ಷಿಗಳಾಗಿದ್ದ ಜೆ.ಸಿ.ಮಾಧುಸ್ವಾಮಿ, ಕರಡಿ ಸಂಗಣ್ಣ ಸೇರಿದಂತೆ ಅಸಮಾಧಾನಿತರ ಜೊತೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಅವರಿಗೆ ಯಾವುದೇ ರೀತಿಯ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸೂಚಿಸಲಾಗಿದೆ. ಎಲ್ಲವೂ ಸುಖಾಂತ್ಯ ಕಾಣಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇನ್ನು ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧ ಕಿಡಿಕಾರಿದ ಯಡಿಯೂರಪ್ಪ, ಮಗನಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಪುತ್ರನಿಗೆ ನಾನೇಕೆ ಟಿಕಟ್ ತಪ್ಪಿಸಲಿ, 25 ಕ್ಷೇತ್ರಗಳಿಗೆ ನಾನೊಬ್ಬನೆ ತೀರ್ಮಾನಿಸುವುದಿಲ್ಲ. ವರಿಷ್ಠರು ಅಳೆದುತೂಗಿ ಟಿಕೆಟ್ ಹಂಚಿಕೆ ಮಾಡುತ್ತಾರೆ ಎಂದು ಸಮರ್ಥಿಸಿಕೊಂಡರು. ಈಶ್ವರಪ್ಪನವರಿಗೆ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಮನವಿ ಮಾಡಲಾಗಿದೆ. ನಾನೇ ಅವರ ಜೊತೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ. ಆದರೆ ಅವರು ಆಧಾರ ರಹಿತ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಸಿಡಿಮಿಡಿಗೊಂಡರು.

ಕಳೆದ ಜೂನ್‍ನಲ್ಲೇ ಪುತ್ರನಿಗೆ ವಿಧಾನಪರಿಷತ್ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದೆವು. ಅದಕ್ಕೆ ಅವರು ಒಪ್ಪಲಿಲ್ಲ. ಹಾವೇರಿಗೆ ಬೇರೆ ಬೇರೆ ಕಾರಣಗಳಿಗಾಗಿ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲಾಗಿದೆ. ಇದನ್ನು ಅವರು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ? ಎಂದು ಬಿಎಸ್‍ವೈ ಪ್ರಶ್ನಿಸಿದರು.

ಕರಡಿಸಂಗಣ್ಣ , ಡಿ.ವಿ.ಸದಾನಂದಗೌಡ ಸೇರಿದಂತೆ ಯಾರೊಬ್ಬರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ನಂಬಿಕೆ ಇದೆ. ಎಲ್ಲರೂ ಮೋದಿಗಾಗಿ ಶ್ರಮಿಸಬೇಕು. ರಾಜ್ಯದಲ್ಲಿ ಉತ್ತಮ ಫಲಿತಾಂಶ ಬರಬೇಕೆಂದರೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

28 ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಾತಾವರಣವಿದೆ. ಜೆಡಿಎಸ್ ಮತ್ತು ನಾವು ಒಗ್ಗಟ್ಟಾಗಿ ಪ್ರಚಾರ ನಡೆಸಿದರೆ ಇದೇನೂ ಕಷ್ಟಕರವಲ್ಲ. ಕಾಂಗ್ರೆಸ್ ಸರ್ಕಾರದಿಂದ ಜನರು ಬೇಸತ್ತು ಬಿಜೆಪಿಯತ್ತ ನೋಡುತ್ತಿದ್ದಾರೆ. ಇದನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ನಾನೇ ಪ್ರಚಾರ ಮಾಡುತ್ತೇನೆ. ಮೋದಿಯವರನ್ನು ಮೂರನೇ ಬಾರಿಗೆ ಅಕಾರಕ್ಕೆ ತರಬೇಕೆಂದರೆ ನಾವೆಲ್ಲರೂ ಶ್ರಮಿಸಬೇಕು. ಇದಕ್ಕಾಗಿ ಎಲ್ಲರೂ ಒಂದಾಗಬೇಕೆಂದು ಹೇಳಿದರು.

ಕಾಂಗ್ರೆಸ್‍ನವರು 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ಅವರಿಗೆ ಸೂಕ್ತವಾದ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಬಿಜೆಪಿಯಲ್ಲಿ ಟಿಕೆಟ್ ಸಿಗದವರನ್ನು ಸಂಪರ್ಕ ಮಾಡಿ ನಮ್ಮ ಪಕ್ಷಕ್ಕೆ ಬನ್ನಿ ಎಂದು ಗೋಗರೆಯುತ್ತಿದ್ದಾರೆ. ಪ್ರಧಾನಿ ಮೋದಿ ಮುಂದೆ ಅವರಿಗೆ ಹೇಳಿಕೊಳ್ಳುವ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನನಗೆ ರಾಜ್ಯಪಾಲರನ್ನಾಗಿ ಮಾಡುವ ಆಶ್ವಾಸನೆ ನೀಡಲಾಗಿತ್ತು. ಸ್ಥಾನಮಾನಕ್ಕಿಂತ ಪಕ್ಷದ ಹಿತ ಮುಖ್ಯ ಎಂಬ ಕಾರಣಕ್ಕಾಗಿ ಅಧಿಕಾರವನ್ನು ತ್ಯಾಗ ಮಾಡಿದ್ದೇನೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ದುಡುಕಿನಲ್ಲಿ ಆತುರದ ನಿರ್ಧಾರ ಕೈಗೊಳ್ಳಬೇಡಿ ಎಂದು ಬಿಎಸ್‍ವೈ ಸಲಹೆ ಮಾಡಿದರು.

RELATED ARTICLES

Latest News