ಹುಬ್ಬಳ್ಳಿ, ಮಾ.21: ಪರ -ವಿರೋಧ, ಟೀಕೆ ಟಿಪ್ಪಣೆಗಳನ್ನೆಲ್ಲ ಪಕ್ಕಕ್ಕಿಟ್ಟು, ದೇಶದ, ಹಿಂದೂಗಳ ಸುರಕ್ಷತೆ ಹಿನ್ನೆಲೆಯಲ್ಲಿ ಮೋದಿ ನಾಯಕತ್ವ ಅಗತ್ಯ ಇದೆ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು. ಶ್ರೀರಾಮ ಸೇನೆ ವತಿಯಿಂದ ಹಳೇ ಹುಬ್ಬಳ್ಳಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮೋದಿ ಗೆಲ್ಲಿಸಿ, ಭಾರತ ಉಳಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದೇಶಕ್ಕೆ ಏನಾದರೂ ಮಾಡಬಹುದು ಎನ್ನುವ ಇಚ್ಛಾಶಕ್ತಿ ಇದ್ದರೆ, ಅದಕ್ಕೆ ಮೋದಿ ನಿದರ್ಶನ.
2014 ರ ಮೊದಲಿನ ಭಾರತ, ನಂತರದ ಭಾರದವನ್ನು ವಿಂಗಡಿಸಿ ವಿಶ್ಲೇಷಣೆ ಮಾಡಿದರೆ ಎಲ್ಲವೂ ಅರಿವಿಗೆ ಬರುತ್ತದೆ. ಆವಾಗ ನಾವು ನಿರ್ಣಯ ತೆಗೆದುಕೊಳ್ಳಬೇಕು. ಕುಕ್ಕರ್, ಸೀರೆ ನೀಡಿದರು ಎಂದು ಮತ ಚಲಾಯಿಸಬಾರದು. ಎಲ್ಲರಿಗೂ ವಿಚಾರ ಮಾಡುವ ವಿವೇಚನೆಯಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಬ್ರಿಟಿಷರು ಹುಟ್ಟು ಹಾಕಿರುವ ಸಂಸ್ಥೆಯಾಗಿದೆ. ಸ್ವಾತಂತ್ರ್ಯಕ್ಕಾಗಿ ಹುಟ್ಟುಹಾಕಿದ್ದ ಕಾಂಗ್ರೆಸ್ ಅನ್ನ ವಿಸರ್ಜಿಸಿ ಎಂದು ಗಾಂಧೀಜಿ ಸ್ಪಷ್ಟವಾಗಿ ಹೇಳಿದ್ದರು. ಅವರ ಕೈಲಿ ಕಾಂಗ್ರೆಸ್ ಇದ್ದರೆ ದೇಶ ಭ್ರಷ್ಟವಾಗುತ್ತದೆ ಎಂದು ಹೇಳಿದ್ದರು. ಆದರೆ, ಅವರಿಗೆ ಕಾಂಗ್ರೆಸ್ ಬಿಟ್ಟರೆ ಬೇರೆ ಗತಿಯಿಲ್ಲವಾಗಿತ್ತು. ದೇಶವನ್ನು ಹಾಳುಗೆಡವಿದರು, ಬರ್ಬಾದ ಮಾಡಿದರು ಎಂದು ಕಿಡಿ ಕಾರಿದರು.
ದೇಶ ವಿಂಗಡಣೆ ಮಾಡಲು ನಾನು ಒಪ್ಪುತ್ತಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಪಾಕಿಸ್ತಾನ ಮಾಡುವುದೇ ಆದರೆ, ಪಾಕಿಸ್ತಾನಕ್ಕೆ ಮುಸ್ಲಿಮರನ್ನು, ಭಾರತದಲ್ಲಿ ಹಿಂದುಗಳು ಇರಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಇದನ್ನು ಇತಿಹಾಸದ ದಾಖಲೆಗಳೇ ಹೇಳುತ್ತವೆ. ಅದು ಆಗದ ಕಾರಣ ನಾವು ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದರು.
ನಿಮ್ಮ ರಾಮಮಂದಿರದ ಮೇಲೆ ಮಸೀದಿ ಕಟ್ಟಿದ್ದೇವೆ ಎಂದು ಚುಚ್ಚುತ್ತಿದ್ದರು. ಈಗ ಅದೇ ಜಾಗದಲ್ಲಿ ರಾಮಮಂದಿರ ನಿರ್ಮಿಸಲಾಗಿದೆ. ಕಾಂಗ್ರೆಸ್ ಬಾಬರನ ಪರವಾಗಿ ನಿಂತು, ರಾಮ ಕಾಲ್ಪನಿಕ, ದೇವರಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಬರೆದುಕೊಟ್ಟಿತ್ತು. 500 ವರ್ಷಗಳ ನಂತರ ರಾಮಮಂದಿರ ಉದ್ಘಾಟನೆಯಾಗಿದೆ ಎಂದು ಮುತಾಲಿಕ್ ಹೇಳಿದರು.
ಶ್ರೀಸತ್ಯಪ್ರಭುದೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀಕಾಂತ ಜಿ., ಚಂದ್ರಶೇಖರ ಗೋಕಾಕ, ಮಹಾದೇವ ದಂಡಿನ, ಮಂಜುನಾಥ ಕಾಟ್ಕರ, ಗಣೇಶ ಪೂಜಾರ, ವಿಜಯ ಸಾಲಿಮಠ, ಲೋಕೇಶ ಗುಂಜಾಳ, ಅಣ್ಣಪ್ಪ ದೀವಟಗಿ ಸೇರಿದಂತೆ ಅನೇಕರಿದ್ದರು.