ತುರುವೇಕೆರೆ, ಸೆ.7- ತಾಲ್ಲೂಕಿನ ದಂಡಿನಶಿವರ ಹೋಬಳಿ ವ್ಯಾಪ್ತಿಯ ಮಾಚೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕೃಷಿ ಜಮೀನುಗಳಲ್ಲಿ ನವಿಲುಗಳು ನಿಗೂಢವಾಗಿ ಸರಣಿ ಸಾವನ್ನಪ್ಪುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನವಿಲುಗಳ ಸಾವಿಗೆ ಹಕ್ಕಿಜ್ವರ ಕಾರಣವಾಗಿರಬಹುದೇ ಎಂಬ ಅನುಮಾನ ಗ್ರಾಮಸ್ಥರಲ್ಲಿ ಮನೆಮಾಡಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಗ್ರಾಮದ ಅಡಿಕೆ ತೋಟಗಳು, ರಾಗಿ ಹೊಲಗಳು ಹಾಗೂ ಪೊದೆಗಳ ಬಳಿ ನವಿಲುಗಳು ನಿತ್ರಾಣಗೊಂಡು ಕುಸಿದುಬಿದ್ದು ಸಾವನ್ನಪ್ಪುತ್ತಿವೆ. ನಿನ್ನೆ ಒಂದೇ ದಿನ ನಾಲ್ಕಕ್ಕೂ ಹೆಚ್ಚು ನವಿಲುಗಳ ಕಳೇಬರಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಬೆಳೆಗಳಿಗೆ ಸಿಂಪಡಿಸಿದ ಕೀಟನಾಶಕ ಬೆರೆತ ಆಹಾರ ಅಥವಾ ನೀರನ್ನು ಸೇವಿಸಿ ನವಿಲುಗಳು ಸಾವನ್ನಪ್ಪಿರಬಹುದೆಂಬ ಶಂಕೆ ಒಂದೆಡೆಯಾದರೆ, ಹಕ್ಕಿಜ್ವರದ ಸೋಂಕಿನಿಂದಲೂ ಸಾವು ಸಂಭವಿಸಿರಬಹುದೆಂಬ ಅನುಮಾನ ಮತ್ತೊಂದೆಡೆ ವ್ಯಕ್ತವಾಗಿದೆ.
ಸ್ಥಳೀಯರು ಮಾಹಿತಿ ನೀಡಿದ ಬೆನ್ನಲ್ಲೇ ಅರಣ್ಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವಿಲುಗಳ ಕಳೇಬರಗಳನ್ನು ಪರಿಶೀಲಿಸಿ, ಸಾವಿಗೆ ನಿಖರ ಕಾರಣ ಪತ್ತೆಹಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ನವಿಲುಗಳ ಸರಣಿ ಸಾವು ವರದಿಯಾಗುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಕೋಳಿ ಸಾಕಾಣಿಕೆದಾರರು ಹಾಗೂ ಕುಕ್ಕುಟೋದ್ಯಮ ನಡೆಸುತ್ತಿರುವವರು ಆತಂಕಕ್ಕೊಳಗಾಗಿದ್ದಾರೆ. ಒಂದು ವೇಳೆ ಹಕ್ಕಿಜ್ವರದ ಸೋಂಕು ದೃಢಪಟ್ಟರೆ ಸಾಕು ಕೋಳಿಗಳಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಸದ್ಯದ ಮೇಲ್ನೋಟದ ಪರಿಶೀಲನೆಯಲ್ಲಿ ಕೀಟನಾಶಕ ಸೇವನೆಯಿಂದ ನವಿಲುಗಳು ಸಾವನ್ನಪ್ಪಿರುವ ಸಾಧ್ಯತೆ ಕಂಡುಬರುತ್ತಿದೆ ಎನ್ನಲಾಗುತ್ತಿದ್ದರೂ, ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಅರಣ್ಯ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ತನಿಖೆಯ ಬಳಿಕವೇ ಹಕ್ಕಿಜ್ವರದ ಸೋಂಕು ಇದೆಯೇ ಅಥವಾ ಕೀಟನಾಶಕ ಸೇವನೆಯೇ ಕಾರಣವೇ ಎಂಬುದು ಸ್ಪಷ್ಟವಾಗಲಿದೆ.
