ಬೆಂಗಳೂರು, ಸೆ.7- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಲವು ನಾಯಕರು ಇದೀಗ ಒಂದೊಂದಾಗಿ ಅಂತರ ಕಾಯ್ದುಕೊಳ್ಳುತ್ತಿರುವ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಚಿವ ಸ್ಥಾನ ಸಿಕ್ಕವರು ಹಾಗೂ ಸಿಗದವರು ತಮ್ಮದೇ ಕಾರಣಗಳಿಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ನಡುವೆಯೇ, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಹದೇವಪ್ಪ ಅವರು ಸಿದ್ದರಾಮಯ್ಯ ಅವರನ್ನು ಹೊಗಳುತ್ತಲೇ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಹಿಂದ ಸಮಾವೇಶಕ್ಕೆ ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಸತೀಶ್ ಜಾರಕಿಹೊಳಿ ಹಾಗೂ ಮಹದೇವಪ್ಪ ಅವರನ್ನು ಆಹ್ವಾನಿಸದಿರುವುದು ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹದೇವಪ್ಪ, ಅಹಿಂದ ನಾಯಕತ್ವ ಸ್ವಯಂ ಘೋಷಣೆಯಿಂದ ಬರುವುದಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ಸಮಾವೇಶವನ್ನು ತಾನೊಬ್ಬನೇ ನಿಂತು ರೂಪಿಸಿದ್ದೆ. ಅಹಿಂದ ನಾಯಕತ್ವ ಎಂದರೆ ಕೇವಲ ಭಾಷಣ ಮಾಡಿ ಹೋಗುವುದಲ್ಲ. ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದ ವರ್ಗಗಳ ಪರ ಬದ್ಧತೆಯಿಂದ ಕೆಲಸ ಮಾಡಬೇಕು. ಸಂಘಟನೆ ನಡೆಸಲು ಪ್ರಜಾಪ್ರಭುತ್ವದ ರೀತಿಯಲ್ಲಿ ನಿರ್ಣಯಗಳು ನಡೆಯಬೇಕು ಎಂದು ಹೇಳಿದರು.
“ಅಹಿಂದ ನಾಯಕ ಯಾರು ಎಂಬುದು ಭಾಷಣದಿಂದ ನಿರ್ಧಾರವಾಗುವುದಿಲ್ಲ. ಸಭೆ ಸೇರಿ ನಿರ್ಣಯ ಮಾಡಿದ ಮಾತ್ರಕ್ಕೆ ನಾಯಕತ್ವ ಸಿಗುವುದಿಲ್ಲ. ಇದು ಪ್ರಜಾಪ್ರಭುತ್ವ; ಹಾಗೆಲ್ಲ ನಡೆಯುವುದಿಲ್ಲ” ಎಂದು ಮಹದೇವಪ್ಪ ಹೇಳಿದರು.
ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿದೆ. ನಾವೆಲ್ಲರೂ ಸರಿಯಾದ ಹಾದಿಯಲ್ಲಿದ್ದೇವೆ ಎಂದು ಹೇಳಿದ ಅವರು, ಅಹಿಂದ ಚಳವಳಿ ಒಬ್ಬರಿಂದ ಮಾತ್ರ ನಿರ್ಮಾಣವಾಗಿಲ್ಲ. ಹುಬ್ಬಳ್ಳಿಯಲ್ಲಿ ನಡೆದ ಮೊದಲ ಅಹಿಂದ ಸಮಾವೇಶದ ಸಂದರ್ಭದಲ್ಲಿ ತಾನೊಬ್ಬನೇ ಕುಳಿತು ಅದರ ರೂಪುರೇಷೆ ಸಿದ್ಧಪಡಿಸಿದ್ದೆ ಎಂದು ತಿಳಿಸಿದರು.
ಇತ್ತೀಚೆಗೆ ನಡೆದ ಅಹಿಂದ ಸಮಾವೇಶವನ್ನು ಕೇವಲ ಒಬಿಸಿ ಸಮಾವೇಶ ಎಂದು ಕರೆಯಬಾರದು. ಕೆಲವು ವರ್ಗಗಳನ್ನು ಹೊರಗಿಟ್ಟು ಸಮಾವೇಶ ನಡೆಸಲಾಗಿದೆ ಎಂಬ ಅಭಿಪ್ರಾಯ ಸರಿಯಲ್ಲ. ಅದು ಹಿಂದುಳಿದ ವರ್ಗಗಳ ಸಮಾವೇಶವಾಗಬೇಕು. ಕಾಂಗ್ರೆಸ್‌ನಿಂದ ‘ಜೈ ಬಾಪು, ಜೈ ಭೀಮ್’ ಕಾರ್ಯಕ್ರಮಗಳನ್ನೂ ನಡೆಸಿದ್ದೇವೆ ಎಂದು ಹೇಳಿದರು. ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಲ್ಲ. ಅವರು ಇನ್ನು ಸಕ್ರಿಯ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಏಕೆ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.
“ಸಿದ್ದರಾಮಯ್ಯ ನನ್ನ ದೊಡ್ಡ ಅಣ್ಣನಂತೆ. ಇಷ್ಟು ವರ್ಷ ಅವರನ್ನು ಹಾಡಿ ಹೊಗಳಿ, ಈಗ ಬೇರೆ ಮಾತನಾಡಿದರೆ ಹೇಗೆ? ನಾನು ಅಂತಹ ಗುಂಪಿಗೆ ಸೇರಿದವನಲ್ಲ” ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಸೇರುವ ವದಂತಿಗೆ ತೆರೆ
ಮಹದೇವಪ್ಪ ಅವರು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಕುರಿತು ತೀವ್ರವಾಗಿ ಪ್ರತಿಕ್ರಿಯಿಸಿದ ಅವರು, ತಾವು ಕಾಂಗ್ರೆಸ್ ಸಂಘಟನೆಯಲ್ಲೇ ಸಕ್ರಿಯವಾಗಿರುವುದಾಗಿ ಹೇಳಿದರು.
“ನಾನು ಕಾಂಗ್ರೆಸ್ ಸಂಘಟನೆ ಮಾಡುತ್ತಿದ್ದೇನೆ. ಜೆಡಿಎಸ್‌ಗೆ ಸೇರುತ್ತೇನೆ ಎಂದು ನಾನೇನಾದರೂ ಹೇಳಿದ್ದೇನೆಯೇ? ಅನಗತ್ಯವಾಗಿ ದಾರಿ ತಪ್ಪಿಸುವ ಪ್ರಯತ್ನ ಮಾಡಬಾರದು” ಎಂದು ಹೇಳಿದರು.
ಈ ಮೂಲಕ ಕಾಂಗ್ರೆಸ್‌ನಲ್ಲೇ ತಮ್ಮ ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಮಹದೇವಪ್ಪ ಸ್ಪಷ್ಟ ಸಂದೇಶ ನೀಡಿದ್ದಾರೆ.
