ಬೆಂಗಳೂರು, ಸೆ.7- ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (ಬಿಎಂಐಸಿ) ಯೋಜನೆಯ ಅನುಷ್ಠಾನದಲ್ಲಿ ದೊಡ್ಡ ಹಗರಣ ನಡೆದಿದ್ದು, ಈ ವಿಚಾರದಲ್ಲಿ ಅಂತಿಮ ಘಟ್ಟ ತಲುಪುವವರೆಗೆ ಹೋರಾಟ ನಡೆಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಗುಡುಗಿದರು.
ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಐಸಿ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ನೀಡುವ ಕುರಿತು ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದಿರುವ ಬಹಿರಂಗ ಪತ್ರವನ್ನು ಬಿಡುಗಡೆ ಮಾಡಿದರು.
ರೈತರಿಗೆ ನ್ಯಾಯ ಒದಗಿಸಲು ಜೆಡಿಎಸ್ ಶಕ್ತಿ ಮೀರಿ ಹೋರಾಟ ನಡೆಸಲಿದೆ. ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನೈಸ್ ಸಂಸ್ಥೆಯನ್ನು ಸರ್ಕಾರದ ವಶಕ್ಕೆ ಪಡೆಯಲು ಹಲವರು ಪ್ರಯತ್ನಿಸಿದ್ದಾರೆ. ಆದರೆ, ಮೂಲ ಒಪ್ಪಂದದಂತೆ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೈಸ್ ಸಂಸ್ಥೆಯನ್ನು ಟೇಕ್‌ಓವರ್ ಮಾಡುತ್ತಿದ್ದಾರೆ ಎಂದು ತಮ್ಮ ಬಳಿಯಿರುವ ದಾಖಲೆಗಳ ಆಧಾರದ ಮೇಲೆ ಹೇಳಿರಬಹುದು. ನನ್ನ ಬಳಿಯೂ ಸಾಕಷ್ಟು ಪುರಾವೆಗಳಿವೆ. ನ್ಯಾಯಾಲಯದ ತೀರ್ಪುಗಳನ್ನು ಆಧರಿಸಿ ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದಿದ್ದೇನೆ. ಮೂರು-ನಾಲ್ಕು ದಿನ ಕಾದು ಸರ್ಕಾರದ ಪ್ರತಿಕ್ರಿಯೆ ನೋಡುತ್ತೇನೆ. ಬಳಿಕ ಪಕ್ಷದ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು.
ನಿವೇಶನ ಹಂಚಿಕೆ ಕುರಿತು ಪ್ರಶ್ನೆಗಳ ಸರಮಾಲೆ
ಬಿಎಂಐಸಿ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ 1,453 ನಿವೇಶನಗಳನ್ನು ಹಂಚಿಕೆ ಮಾಡಲು ನೈಸ್ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ ಹಾಗೂ ಇದಕ್ಕೆ ಸುಪ್ರೀಂಕೋರ್ಟ್ ತೀರ್ಪಿನ ಅನುಮೋದನೆ ಇದೆ ಎಂದು ಸರ್ಕಾರ ನಂಬಿರುವುದು ವ್ಯಾಪಕವಾಗಿ ವರದಿಯಾಗಿದೆ. ಆದರೆ, ಸಚಿವ ಸಂಪುಟದ ನಿರ್ಧಾರವು ಕಾನೂನು ಮತ್ತು ಈ ಹಿಂದಿನ ಸರ್ಕಾರದ ನಿಲುವಿಗೆ ವಿರುದ್ಧವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ದೇವೇಗೌಡರು ಹೇಳಿದರು.
2016ರಲ್ಲಿ ಜೆಡಿಎಸ್ ಅಧಿಕಾರದಲ್ಲಿದ್ದಾಗ ಸರ್ಕಾರವೇ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆಯ ವೇಳೆ ಎರಡು ಪ್ರಮಾಣಪತ್ರಗಳನ್ನು ಸಲ್ಲಿಸಿತ್ತು. ಇಂಟರ್‌ಚೇಂಜ್‌ಗಳಲ್ಲಿ ನಿವೇಶನಗಳ ರಚನೆಗೆ ಅನುಮೋದನೆ ನೀಡುವುದು ಮೂಲ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಆಗ ಸರ್ಕಾರ ತಿಳಿಸಿತ್ತು. ಹಾಗಿದ್ದರೆ ಇದೀಗ ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದರ ಅರ್ಥವೇನು ಎಂದು ಪ್ರಶ್ನಿಸಿದರು.
ಮಾದಾವರ, ಕೊಡಿಗೇಹಳ್ಳಿ, ಕೆಂಗೇರಿ, ಕೊಮ್ಮಘಟ್ಟ, ವರಾಹಸಂದ್ರ, ಸೋಂಪುರ, ಪಿಳ್ಳಗಾನಹಳ್ಳಿ, ಕೆಮತನಹಳ್ಳಿ, ಯು.ಎಂ. ಕಾವಲ್, ಚಿಕ್ಕತೋಗೂರು, ಪಂಥರಪಾಳ್ಯ, ಕೆ.ಜಿ. ಶ್ರೀಕಂಠಪುರ ಹಾಗೂ ಗಂಗೊಂಡನಹಳ್ಳಿ ಗ್ರಾಮಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ವರದಿಯಾಗಿದೆ. ಈ ಗ್ರಾಮಗಳಲ್ಲಿನ ಭೂಮಿ ಬಿಎಂಐಸಿ ರಸ್ತೆ ಹಾಗೂ ಮೂಲಸೌಕರ್ಯ ಘಟಕದ ವ್ಯಾಪ್ತಿಗೆ ಬರುತ್ತದೆ ಎಂಬುದು ಸಾರ್ವಜನಿಕ ದಾಖಲೆಗಳಲ್ಲಿ ಇದೆ ಎಂದು ಹೇಳಿದರು.
ಹಂಚಿಕೆ ಮಾಡಬೇಕಿರುವ ನಿವೇಶನಗಳನ್ನು ಯಾವಾಗ ರಚಿಸಲಾಯಿತು? ಅವುಗಳ ರಚನೆಗೆ ಅನುಮೋದನೆ ನೀಡಿದವರು ಯಾರು? ಎಂಬುದಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಜುಲೈ 2026ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ಕಂಪನಿಯ ಬ್ಯಾಲೆನ್ಸ್‌ಶೀಟ್‌ಗಳಲ್ಲಿ ಭೂಮಿ ಮಾರಾಟದ ಮುಂಗಡ ಹಾಗೂ ₹36 ಕೋಟಿಯಿಂದ ₹48 ಕೋಟಿವರೆಗಿನ ಜಂಟಿ ಅಭಿವೃದ್ಧಿ ಒಪ್ಪಂದಗಳ ವಿವರಗಳು ನಿರಂತರವಾಗಿ ಬಹಿರಂಗಗೊಂಡಿರುವುದನ್ನು ಗಮನಿಸಿದೆ ಎಂದು ದೇವೇಗೌಡರು ಹೇಳಿದರು.
ಹೂಡಿಕೆದಾರರ ಹಿತಾಸಕ್ತಿಯೇ?
ಸಚಿವ ಸಂಪುಟದ ನಿರ್ಧಾರವು ಸುಪ್ರೀಂಕೋರ್ಟ್ ತೀರ್ಪು ಹಾಗೂ ಕಳೆದ ಒಂದು ದಶಕದಿಂದ ಸರ್ಕಾರ ಹೊಂದಿದ್ದ ನಿಲುವಿಗೆ ವಿರುದ್ಧವಾಗಿದೆಯೇ? ನಿವೇಶನಗಳ ನಿಜವಾದ ಫಲಾನುಭವಿಗಳು ಭೂಮಿ ಕಳೆದುಕೊಂಡ ರೈತರೇ ಅಥವಾ ನೈಸ್ ಸಂಸ್ಥೆ ಹಾಗೂ ಅದರ ಹೂಡಿಕೆದಾರರೇ? ಸಚಿವ ಸಂಪುಟದಲ್ಲಿ ನೈಸ್ ಹೂಡಿಕೆದಾರರ ಹಿತಾಸಕ್ತಿ ಹೊಂದಿರುವವರು ಯಾರಾದರೂ ಇದ್ದಾರೆಯೇ? ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ದೇವೇಗೌಡರು ಒತ್ತಾಯಿಸಿದರು.
ನಿವೇಶನ ಹಂಚಿಕೆಯ ಹೆಸರಿನಲ್ಲಿ ಬೆಲೆಬಾಳುವ ಭೂಮಿಯನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಬಿಎಂಐಸಿ ಯೋಜನೆ ಹಾಗೂ ಕಾವೇರಿ ನದಿ ನೀರು ಹಂಚಿಕೆ ವಿಚಾರಗಳನ್ನು ತಾಳೆ ಹಾಕಬಾರದು. ಎರಡೂ ಸಂಪೂರ್ಣ ಭಿನ್ನವಾದ ವಿಚಾರಗಳಾಗಿವೆ ಎಂದು ಸ್ಪಷ್ಟಪಡಿಸಿದರು.
