ಬೆಂಗಳೂರು, ಸೆ.7- ನಕಲಿ ಔಷಧಿಗಳ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಆರೋಗ್ಯ ಇಲಾಖೆ ಇದೀಗ ನಕಲಿ ವೈದ್ಯರು ಹಾಗೂ ಅನಧಿಕೃತವಾಗಿ ವೈದ್ಯಕೀಯ ಸೇವೆ ನೀಡುತ್ತಿರುವವರ ವಿರುದ್ಧವೂ ಕಠಿಣ ಕ್ರಮಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ಎಂಬಿಬಿಎಸ್ ಸೇರಿದಂತೆ ಅಗತ್ಯ ವೈದ್ಯಕೀಯ ಪದವಿ ಹಾಗೂ ಅಧಿಕೃತ ನೋಂದಣಿ ಇಲ್ಲದೆ ಚಿಕಿತ್ಸೆ ನೀಡುತ್ತಿದ್ದ 583ಕ್ಕೂ ಹೆಚ್ಚು ನಕಲಿ ವೈದ್ಯರು ಹಾಗೂ ಅನರ್ಹ ವೈದ್ಯಕೀಯ ವೃತ್ತಿಪರರನ್ನು ಪತ್ತೆಹಚ್ಚಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
2024ರಿಂದ ರಾಜ್ಯಾದ್ಯಂತ ನಕಲಿ ವೈದ್ಯರು ಹಾಗೂ ಅನಧಿಕೃತವಾಗಿ ವೈದ್ಯಕೀಯ ಸೇವೆ ನೀಡುತ್ತಿರುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಲೋಪಥಿ, ಆಯುರ್ವೇದ, ಹೋಮಿಯೋಪಥಿ, ನ್ಯಾಚುರೋಪಥಿ ಸೇರಿದಂತೆ ವಿವಿಧ ವೈದ್ಯಕೀಯ ಪದ್ಧತಿಗಳ ಹೆಸರಿನಲ್ಲಿ ಅರ್ಹತೆ ಇಲ್ಲದೆ ಚಿಕಿತ್ಸೆ ನೀಡುತ್ತಿರುವವರ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸಿದೆ.
ಕ್ಲಿನಿಕ್ ಸಹಾಯಕರು, ಕಂಪೌಂಡರ್ಗಳೇ ವೈದ್ಯರು!
ಪತ್ತೆಯಾದವರಲ್ಲಿ ಹಲವರು ಈ ಹಿಂದೆ ಕ್ಲಿನಿಕ್ ಸಹಾಯಕರು, ಲ್ಯಾಬ್ ಅಸಿಸ್ಟೆಂಟ್ಗಳು, ಕಂಪೌಂಡರ್ಗಳು ಹಾಗೂ ನರ್ಸ್ಗಳಾಗಿ ಕೆಲಸ ಮಾಡಿದ್ದವರು ಎನ್ನಲಾಗಿದೆ. ಅರ್ಹ ವೈದ್ಯರು ಚಿಕಿತ್ಸೆ ನೀಡುವುದನ್ನು ಗಮನಿಸಿ ಅನುಭವ ಪಡೆದ ಬಳಿಕ, ಸ್ವಂತವಾಗಿ ಅನಧಿಕೃತ ಕ್ಲಿನಿಕ್ಗಳನ್ನು ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಗ್ರಾಮೀಣ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವುದು ಕಂಡುಬಂದಿದೆ. ಕಲಬುರಗಿ, ರಾಯಚೂರು, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅನಧಿಕೃತ ಕ್ಲಿನಿಕ್ಗಳ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿವೆ.
ಗಡಿ ಜಿಲ್ಲೆಗಳು ಹಾಗೂ ಬೆಂಗಳೂರಿನಲ್ಲೂ ಕೆಲವರು ಮೊಬೈಲ್ ಕ್ಲಿನಿಕ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸ್ಥಳ ಹಾಗೂ ಮೊಬೈಲ್ ಸಂಖ್ಯೆಗಳನ್ನು ಪದೇಪದೆ ಬದಲಾಯಿಸಿಕೊಂಡು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿರುವ ಪ್ರಕರಣಗಳೂ ಅಧಿಕಾರಿಗಳ ಗಮನಕ್ಕೆ ಬಂದಿವೆ ಎನ್ನಲಾಗಿದೆ.
ನಿಯಮ ಉಲ್ಲಂಘಿಸಿದರೆ ದಂಡ, ಜೈಲು
ನೋಂದಣಿ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸುವವರ ವಿರುದ್ಧ ಸಂಬಂಧಿತ ವೈದ್ಯಕೀಯ ವೃತ್ತಿ ಕಾನೂನುಗಳು ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.
ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ ₹25 ಸಾವಿರದವರೆಗೆ ದಂಡ, ಎರಡನೇ ಬಾರಿ ತಪ್ಪು ಮಾಡಿದರೆ ₹2.5 ಲಕ್ಷದವರೆಗೆ ದಂಡ ಹಾಗೂ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ನಂತರವೂ ನಿಯಮ ಉಲ್ಲಂಘನೆ ಮುಂದುವರಿದರೆ ₹5 ಲಕ್ಷದವರೆಗೆ ದಂಡ ಹಾಗೂ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಇಲಾಖೆ ತಿಳಿಸಿದೆ.
ಜಿಲ್ಲಾಮಟ್ಟದಲ್ಲಿ ವಿಶೇಷ ಕಾರ್ಯಪಡೆ
ನಕಲಿ ವೈದ್ಯರು ಹಾಗೂ ಅನಧಿಕೃತ ಕ್ಲಿನಿಕ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಜಿಲ್ಲಾಮಟ್ಟದಲ್ಲಿ ವಿಶೇಷ ಕಾರ್ಯಪಡೆಗಳನ್ನು ರಚಿಸಿದೆ. ಆರೋಗ್ಯ, ಪೊಲೀಸ್ ಹಾಗೂ ಔಷಧ ಆಡಳಿತ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡಗಳು ಕ್ಲಿನಿಕ್ಗಳ ಪರಿಶೀಲನೆ ನಡೆಸುತ್ತಿದ್ದು, ನಿಯಮ ಉಲ್ಲಂಘಿಸಿರುವ ಸಂಸ್ಥೆಗಳನ್ನು ಮುಚ್ಚಿಸುವ ಕಾರ್ಯಾಚರಣೆಯನ್ನೂ ನಡೆಸುತ್ತಿವೆ.
ಅನಧಿಕೃತ ವೈದ್ಯಕೀಯ ಜಾಲ ಹಾಗೂ ನಕಲಿ ಔಷಧಿಗಳ ದಂಧೆಯ ನಡುವಿನ ಸಂಬಂಧದ ಕುರಿತು ತನಿಖೆ ನಡೆಸಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.
ವೈದ್ಯರ ನೋಂದಣಿ ಪರಿಶೀಲಿಸಿ
ಚಿಕಿತ್ಸೆ ಪಡೆಯುವ ಮುನ್ನ ವೈದ್ಯರ ನೋಂದಣಿ ಸಂಖ್ಯೆ ಹಾಗೂ ಶೈಕ್ಷಣಿಕ ಅರ್ಹತೆಯನ್ನು ಪರಿಶೀಲಿಸುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ. ಕರ್ನಾಟಕ ವೈದ್ಯಕೀಯ ಮಂಡಳಿಯ ನೋಂದಾಯಿತ ವೈದ್ಯರ ಪಟ್ಟಿಯಲ್ಲಿ ವೈದ್ಯರ ವಿವರಗಳನ್ನು ಪರಿಶೀಲಿಸಬಹುದಾಗಿದೆ.
ಅನಧಿಕೃತ ಕ್ಲಿನಿಕ್ ಅಥವಾ ಅರ್ಹತೆ ಇಲ್ಲದ ವ್ಯಕ್ತಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಅನುಮಾನವಿದ್ದರೆ, ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದ ನೋಂದಣಿ ಹಾಗೂ ಕುಂದುಕೊರತೆ ಪರಿಹಾರ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು.
ಅರ್ಹ ವೈದ್ಯಕೀಯ ಪದವಿ ಹಾಗೂ ಅಧಿಕೃತ ನೋಂದಣಿ ಇಲ್ಲದೆ ಚಿಕಿತ್ಸೆ ನೀಡುತ್ತಿರುವವರ ಕುರಿತು ಮಾಹಿತಿ ನೀಡುವ ಮೂಲಕ ನಕಲಿ ವೈದ್ಯರ ವಿರುದ್ಧದ ಕಾರ್ಯಾಚರಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
