ಬೆಂಗಳೂರು, ಸೆ.7- ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಚುರುಕುಗೊಂಡಿದ್ದು, ನೋಟಿಸ್ ಜಾರಿ ಮಾಡಲಾಗಿರುವ ಮತದಾರರ ವಿಚಾರಣೆ ಅಧಿಕೃತವಾಗಿ ಆರಂಭವಾಗಿದೆ.
ರಾಜ್ಯಾದ್ಯಂತ 43.81 ಲಕ್ಷಕ್ಕೂ ಹೆಚ್ಚು ಮತದಾರರಿಗೆ ಎಸ್‌ಐಆರ್ ನೋಟಿಸ್ ನೀಡಲಾಗಿದ್ದು, ಬೆಂಗಳೂರಿನಲ್ಲೇ 24 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇವೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ಲಕ್ಷಾಂತರ ಮತದಾರರಿಗೆ ನೋಟಿಸ್ ತಲುಪಿಸಲಾಗಿದ್ದು, ಸೆ.5ರಿಂದ ನಿಗದಿಪಡಿಸಿರುವ ಕೇಂದ್ರಗಳಿಗೆ ತೆರಳಿ ಮತದಾರರು ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ಮತದಾರರ ಪಟ್ಟಿಯಲ್ಲಿ ಪರಿಶೀಲನೆ ಅಗತ್ಯವಿರುವ ಅಥವಾ ವಿವರಗಳಲ್ಲಿ ಗೊಂದಲ ಕಂಡುಬಂದಿರುವ ಪ್ರಕರಣಗಳಿಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ವಿವಿಧ ಶಾಲೆಗಳು, ಕಲ್ಯಾಣ ಮಂಟಪಗಳು ಹಾಗೂ ಜಿಬಿಎ ಕಚೇರಿಗಳಲ್ಲಿ ನೋಟಿಸ್ ಪಡೆದ ಮತದಾರರ ವಿಚಾರಣೆ ನಡೆಸಲಾಗುತ್ತಿದೆ. ನೋಟಿಸ್ ಪಡೆದವರು ನಿಗದಿತ ವಿಚಾರಣಾ ಕೇಂದ್ರಕ್ಕೆ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಹೆಸರು ಹಾಗೂ ವಿವರಗಳನ್ನು ಮತದಾರರ ಪಟ್ಟಿಯಲ್ಲಿ ದೃಢಪಡಿಸಿಕೊಳ್ಳಬಹುದಾಗಿದೆ.
ಯಾವ ದಾಖಲೆಗಳು ಅಗತ್ಯ?
ಮತದಾರರ ಗುರುತು ಹಾಗೂ ವಾಸಸ್ಥಳವನ್ನು ದೃಢೀಕರಿಸಲು ಕೆಳಗಿನ ಸರ್ಕಾರಿ ದಾಖಲೆಗಳ ಪೈಕಿ ಕನಿಷ್ಠ ಎರಡು ದಾಖಲೆಗಳನ್ನು ವಿಚಾರಣೆ ವೇಳೆ ಹಾಜರುಪಡಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ:
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಪಡಿತರ ಚೀಟಿ
- ಪಾಸ್‌ಪೋರ್ಟ್
- ಜನನ ಪ್ರಮಾಣಪತ್ರ
- ಮತದಾರರ ಗುರುತಿನ ಚೀಟಿ
ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಿ ತಮ್ಮ ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ಸರಿಪಡಿಸಿಕೊಳ್ಳುವಂತೆ ನೋಟಿಸ್ ಪಡೆದವರಿಗೆ ಸೂಚಿಸಲಾಗಿದೆ.
