ನವದೆಹಲಿ, ಸೆ.7- ಭಾರತಕ್ಕೆ ಅಗತ್ಯವಿರುವಷ್ಟು ಕಚ್ಚಾ ತೈಲ ಪೂರೈಸಲು ರಷ್ಯಾ ಸಿದ್ಧವಿದೆ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ಭರವಸೆ ನೀಡಿದ್ದಾರೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಭಾರತದ ನಿರ್ಧಾರದ ಹಿನ್ನೆಲೆಯಲ್ಲಿ ಅಮೆರಿಕದಿಂದ ಸುಂಕದ ಬೆದರಿಕೆ ಎದುರಾಗಿರುವ ಸಂದರ್ಭದಲ್ಲಿ ಮಾತನಾಡಿದ ಅವರು, ಅಮೆರಿಕದ ಒತ್ತಡದ ತಂತ್ರಗಳನ್ನು ಟೀಕಿಸಿದರು. ಭಾರತದೊಂದಿಗೆ ತೈಲ ಮಾರಾಟವನ್ನು ಮುಂದುವರಿಸಲು ಮಾಸ್ಕೋ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
‘ಭಾರತಕ್ಕೆ ಅಗತ್ಯವಿರುವಷ್ಟು ತೈಲ ಪೂರೈಸಲು ನಾವು ಸಿದ್ಧರಿದ್ದೇವೆ. ಆದರೆ ನಿರ್ಬಂಧಗಳು ಮತ್ತು ಸುಂಕಗಳನ್ನು ವಿಧಿಸುವ ಮೂಲಕ ಕೆಲ ರಾಷ್ಟ್ರಗಳು ಪ್ರಾಮಾಣಿಕ ಸಹಕಾರದ ಬದಲಿಗೆ ಒತ್ತಡದ ತಂತ್ರ ಅನುಸರಿಸುತ್ತಿವೆ. ಇದರಿಂದ ಭಾರತಕ್ಕೆ ಉತ್ತಮ ಬೆಲೆಯಲ್ಲಿ ತೈಲ ಪೂರೈಸುವ ಅವಕಾಶಗಳಿಗೆ ಅಡ್ಡಿಯಾಗುತ್ತಿದೆ’ ಎಂದು ಅಲಿಪೋವ್ ಹೇಳಿದರು.
ಉಕ್ರೇನ್ ಸಂಘರ್ಷಕ್ಕೆ ರಷ್ಯಾ ನೀಡುತ್ತಿರುವ ಬೆಂಬಲಕ್ಕೆ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತದಿಂದ ರಷ್ಯಾದ ತೈಲ ಖರೀದಿಯನ್ನು ತಡೆಯಲು ಅಮೆರಿಕ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಭಾರತ ಸೇರಿದಂತೆ ಕೆಲವು ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಕ್ರಮವನ್ನೂ ಕೈಗೊಳ್ಳಲಾಗಿದೆ.
ಇದೇ ವೇಳೆ, ರಷ್ಯಾದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಪ್ರಮುಖ ಖರೀದಿದಾರ ರಾಷ್ಟ್ರಗಳ ಮೇಲೆ ಹೆಚ್ಚಿನ ಪ್ರಮಾಣದ ಸುಂಕ ವಿಧಿಸುವ ಪ್ರಸ್ತಾವವೂ ಅಮೆರಿಕದ ಸೆನೆಟ್ನಲ್ಲಿ ಮಂಡನೆಯಾಗಿದೆ ಎಂದು ವರದಿಯಾಗಿದೆ.
ತೈಲ ಮಾರುಕಟ್ಟೆಗೆ ಹೊಡೆತ
ರಷ್ಯಾದ ತೈಲ ಮಾರಾಟ ಸಂಪೂರ್ಣವಾಗಿ ಸ್ಥಗಿತಗೊಂಡರೆ ಜಾಗತಿಕ ಇಂಧನ ಮಾರುಕಟ್ಟೆ ಮೇಲೆ ದೊಡ್ಡ ಪರಿಣಾಮ ಉಂಟಾಗಲಿದೆ ಎಂದು ಅಲಿಪೋವ್ ಅಭಿಪ್ರಾಯಪಟ್ಟರು. ‘ಜಾಗತಿಕ ಇಂಧನ ಮಾರುಕಟ್ಟೆಗಳು ರಷ್ಯಾದ ತೈಲವನ್ನು ಸಂಪೂರ್ಣವಾಗಿ ಹೊರಗಿಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ರಷ್ಯಾದ ತೈಲವು ಭಾರತ ಸೇರಿದಂತೆ ಹಲವು ದೇಶಗಳ ಮಾರುಕಟ್ಟೆಯಲ್ಲಿ ಮುಂದುವರಿಯಲಿದೆ. ಭಾರತಕ್ಕೆ ತೈಲ ಪೂರೈಸಲು ರಷ್ಯಾ ಆಸಕ್ತಿ ಹೊಂದಿದೆ ಮತ್ತು ಅದನ್ನು ಖರೀದಿಸಲು ಭಾರತವೂ ಆಸಕ್ತಿ ಹೊಂದಿದೆ’ ಎಂದು ಅವರು ಹೇಳಿದರು.
ಹಾರ್ಮುಜ್ ಜಲಸಂಧಿಯಲ್ಲಿನ ಪರಿಸ್ಥಿತಿಯಿಂದ ಜಾಗತಿಕ ಇಂಧನ ಪೂರೈಕೆಗೆ ಎದುರಾಗಬಹುದಾದ ಸವಾಲುಗಳ ನಡುವೆಯೂ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದಂತೆ ಅಮೆರಿಕ ಕೆಲವು ತಾತ್ಕಾಲಿಕ ವಿನಾಯಿತಿಗಳನ್ನು ನೀಡಿರುವುದು ಗಮನಾರ್ಹವಾಗಿದೆ.
ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ
ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ನಡುವೆಯೂ ತನ್ನ ಜನಸಂಖ್ಯೆಯ ಇಂಧನ ಅಗತ್ಯಗಳಿಗೆ ಆದ್ಯತೆ ನೀಡುವುದನ್ನು ಭಾರತ ಮುಂದುವರಿಸಲಿದೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಗಳು ಸ್ಪಷ್ಟಪಡಿಸಿವೆ. ಭಾರತ ತನ್ನ ನಿಲುವಿನಲ್ಲಿ ದೃಢವಾಗಿ ನಿಂತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಈಗಾಗಲೇ ತೋರಿಸಿದೆ ಎಂದು ರಷ್ಯಾ ರಾಯಭಾರಿ ಅಲಿಪೋವ್ ಹೇಳಿದರು.
