Homeರಾಜ್ಯಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ : ಮತ್ತಷ್ಟು ಸ್ಫೋಟಕ ವಿಷಯಗಳು ಬಯಲು

ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ : ಮತ್ತಷ್ಟು ಸ್ಫೋಟಕ ವಿಷಯಗಳು ಬಯಲು

ಬೆಂಗಳೂರು, ಸೆ.7- ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ತನಿಖೆ ತೀವ್ರಗೊಂಡಿದ್ದು, ಸಿಐಡಿ ವಿಚಾರಣೆಯಲ್ಲಿ ಪ್ರಮುಖ ಆರೋಪಿ ಬಸವರಾಜ್‌ ಕನ್ನಾಳೆ ಹಾಗೂ ಅಮಾನತುಗೊಂಡಿರುವ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವರ ನಡುವಿನ ಸಂಪರ್ಕ ಮತ್ತು ಹಣಕಾಸು ವ್ಯವಹಾರಗಳ ಕುರಿತು ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎನ್ನಲಾಗಿದೆ.

ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ನಡೆಸುತ್ತಿದೆ. ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವರಿಂದ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದ ಬಸವರಾಜ್‌ ಕನ್ನಾಳೆ, ಅಭ್ಯರ್ಥಿಗಳನ್ನು ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಹಣದ ಬದಲಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದ ಎನ್ನಲಾಗಿದೆ.

ಅಭ್ಯರ್ಥಿಗಳಿಂದ ನಗದು ರೂಪದಲ್ಲಿ ಸಂಗ್ರಹಿಸಲಾಗುತ್ತಿದ್ದ ಹಣವನ್ನು ಜ್ಞಾನೇಂದ್ರ ಕುಮಾರ್‌ ಅವರಿಗೆ ತಲುಪಿಸಲಾಗುತ್ತಿತ್ತು ಹಾಗೂ ಆನ್‌ಲೈನ್‌ ಮೂಲಕ ವರ್ಗಾವಣೆಯಾಗುತ್ತಿದ್ದ ಹಣವನ್ನು ಭಾಲ್ಕಿಯಲ್ಲಿರುವ ವಿವಿಧ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗುತ್ತಿತ್ತು ಎಂಬ ಆರೋಪಗಳೂ ತನಿಖೆಯಲ್ಲಿ ಕೇಳಿಬಂದಿವೆ.

₹40 ಲಕ್ಷಕ್ಕೆ ಉದ್ಯೋಗದ ಭರವಸೆ?

ಪ್ರಕರಣದಲ್ಲಿ ಪ್ರಮುಖ ಸುಳಿವು ನೀಡಿದ್ದು ನೇಮಕಗೊಂಡ ಅಭ್ಯರ್ಥಿಯೊಬ್ಬರು ಸಿಐಡಿಗೆ ನೀಡಿರುವ ಹೇಳಿಕೆ ಎನ್ನಲಾಗಿದೆ. 2025ರ ಡಿಸೆಂಬರ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ವಾಟ್ಸ್‌ಆ್ಯಪ್‌ ಮೂಲಕ ಸಂಪರ್ಕಿಸಿ ₹40 ಲಕ್ಷ ನೀಡಿದರೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆ ಖಚಿತಪಡಿಸುವುದಾಗಿ ಭರವಸೆ ನೀಡಿದ್ದರು ಎಂದು ಅಭ್ಯರ್ಥಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಈ ಪೈಕಿ ₹20 ಲಕ್ಷವನ್ನು ಮುಂಗಡವಾಗಿ ಪಾವತಿಸಲಾಗಿತ್ತು. ಉಳಿದ ₹20 ಲಕ್ಷವನ್ನು ಆಯ್ಕೆಪಟ್ಟಿ ಪ್ರಕಟವಾದ ಬಳಿಕ ನೀಡಬೇಕಿತ್ತು ಎನ್ನಲಾಗಿದೆ. ಕರೆ ವಿವರಗಳು ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳ ಪರಿಶೀಲನೆ ನಡೆಸಿದ ಬಳಿಕ ಅಭ್ಯರ್ಥಿಯನ್ನು ಸಂಪರ್ಕಿಸಿದ್ದ ವ್ಯಕ್ತಿ ಬಸವರಾಜ್‌ ಕನ್ನಾಳೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.

₹40ರಿಂದ ₹80 ಲಕ್ಷದವರೆಗೆ ಡೀಲ್‌?

ಪಶುವೈದ್ಯಾಧಿಕಾರಿ ಹುದ್ದೆ ಕೊಡಿಸುವುದಾಗಿ ಕೆಲ ಅಭ್ಯರ್ಥಿಗಳಿಂದ ₹40 ಲಕ್ಷದಿಂದ ₹80 ಲಕ್ಷದವರೆಗೆ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಆರೋಪಗಳು ಸಿಐಡಿ ತನಿಖೆಯಲ್ಲಿ ಕೇಳಿಬಂದಿವೆ. ಈಗಾಗಲೇ ವಿಚಾರಣೆ ಎದುರಿಸಿರುವ ಹಲವು ಅಭ್ಯರ್ಥಿಗಳು ಹಣ ಪಾವತಿಸಿರುವ ಕುರಿತು ಮಾಹಿತಿ ನೀಡಿರುವುದಾಗಿ ತನಿಖಾ ಮೂಲಗಳು ತಿಳಿಸಿವೆ. ಇದೇ ವೇಳೆ ಬಸವರಾಜ್‌ ಕನ್ನಾಳೆ ಹಾಗೂ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ನಡುವೆ ನಿರಂತರ ಸಂಪರ್ಕವಿದ್ದುದಕ್ಕೂ ತನಿಖೆಯಲ್ಲಿ ಸುಳಿವು ದೊರೆತಿದೆ ಎನ್ನಲಾಗಿದೆ. ಆದರೆ ಗಂಗ್ವಾರ್‌ ಅವರು ಕನ್ನಾಳೆ ಜತೆಗಿನ ಸಂಪರ್ಕದ ಆರೋಪವನ್ನು ನಿರಾಕರಿಸಿದ್ದಾರೆ.

35ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳ ಪರಿಶೀಲನೆ

ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಜ್ಞಾನೇಂದ್ರ ಕುಮಾರ್‌ ಹಾಗೂ ಬಸವರಾಜ್‌ ಕನ್ನಾಳೆಗೆ ಸಂಬಂಧಿಸಿದ 35ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಭಾಲ್ಕಿಯ ಸಹಕಾರಿ ಬ್ಯಾಂಕ್‌ಗಳು ಸೇರಿದಂತೆ ಬೆಳಗಾವಿ ಮತ್ತು ಕಲಬುರಗಿಯ ವಿವಿಧ ಖಾಸಗಿ ಬ್ಯಾಂಕ್‌ಗಳ ಖಾತೆಗಳು ಇದರಲ್ಲಿ ಸೇರಿವೆ ಎಂದು ತಿಳಿದುಬಂದಿದೆ.ಈ ಖಾತೆಗಳಲ್ಲಿನ ವಹಿವಾಟುಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳಿಗೆ ಇಬ್ಬರ ನಡುವೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವ ಬಗ್ಗೆ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ.

ಪ್ರಮುಖ ಆರೋಪಿಗಳ ಆಪ್ತರು ಹಾಗೂ ಸ್ನೇಹಿತರ ಬ್ಯಾಂಕ್‌ ಖಾತೆಗಳ ಮೂಲಕವೂ ಹಣಕಾಸಿನ ವಹಿವಾಟು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಮತ್ತಷ್ಟು ವಿಚಾರಣೆ ನಡೆಸಲು ಸಿಐಡಿ ಸಿದ್ಧತೆ ನಡೆಸಿದೆ. ನೇಮಕಾತಿ ಅಕ್ರಮದ ಹಣಕಾಸು ಜಾಲದ ಸಂಪರ್ಕಗಳು ಇನ್ನಷ್ಟು ವ್ಯಕ್ತಿಗಳು ಹಾಗೂ ಪ್ರಭಾವಿಗಳವರೆಗೆ ವಿಸ್ತರಿಸಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ತನಿಖೆ ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದೆ.

RELATED ARTICLES
spot_img

Latest News