ಬೆಂಗಳೂರು, ಸೆ.23- ಗೃಹೋಪಯೋಗಿ ವಸ್ತುಗಳ ಅಂಗಡಿ ಮಾಲೀಕರನ್ನು ಮಳಿಗೆಯೊಳಗೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜು ಸಿಂಗ್ ಕೊಲೆಯಾದ ಅಂಗಡಿ ಮಾಲೀಕರು.
ಜೆಪಿ ನಗರದ 7ನೇ ಹಂತದ ಗಂಗಾ ಇಂಡಸ್ಟ್ರೀಸ್ ನ ಒಂದನೇ ಮಹಡಿಯಲ್ಲಿರುವ ಇರುವ ಇವರ ಅಂಗಡಿಯಲ್ಲಿ ಈ ಕೊಲೆ ಆಗಿದೆ.ರಾಜು ಸಿಂಗ್ ಅವರು ಕಳೆದ 30 ವರ್ಷಗಳಿಂದ ಬೆಂಗಳೂರು ನಗರದಲ್ಲಿ ವಾಸಿಸುತ್ತಿದ್ದು, ಜೆಪಿ ನಗರದಲ್ಲಿ ಅಂಗಡಿಯನ್ನು ನಡೆಸುತ್ತಿದ್ದರು.
ರಾತ್ರಿ ಸುಮಾರು 7:30ರ ಸಮಯದಲ್ಲಿ ಅಂಗಡಿಯಲ್ಲಿ ಇವರೊಬ್ಬರಿದ್ದರು. ಆಗ ಅಂಗಡಿಗೆ ನುಗಿದ ದುಷ್ಕರ್ಮಿಯೊಬ್ಬ ಅವರ ತಲೆಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದ ಅವರ ಮಗಳು ಸ್ಥಳಕ್ಕೆ ಧಾವಿಸಿ ಬಂದು ನೋಡಿ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
