ನವದೆಹಲಿ, ಸೆ.24- ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳು ನಾಡಿಗೆ ನೀರು ಹರಿಸುವಂತೆ ರಾಜ್ಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸುವಂತೆ ಆದೇಶ ಹೊರಡಿಸಿರುವುದರ ಜೊತೆ ವಿಚಾರಣೆಯನ್ನು ಅ.12ಕ್ಕೆ ಮುಂದೂಡಿದೆ.
ಹಿಂದೆ ಪೂರೈಕೆಯಾಗದ ನೀರಿನ ಕೊರತೆಯನ್ನು ಭರ್ತಿ ಮಾಡಲು ನೀರು ಬಿಡುಗಡೆ ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿಲ್ಲ. ಬೇಸಿಗೆಯಲ್ಲಿ ನೀರಿನ ಕೊರತೆಯಾಗಲಿದೆ. ಕಳೆದ ವರ್ಷ ಈ ಸಮಯದಲ್ಲಿ 81 ಟಿಎಂಸಿ ನೀರಿತ್ತು. ಈ ವರ್ಷ ನೀರಿನ ಒಳ ಹರಿವಿನಲ್ಲಿ ಭಾರಿ ಕೊರತೆಯಾಗಿದೆ. ನಾವು ಆದೇಶಗಳನ್ನು ವಿರೋಧಿಸುತ್ತೇವೆ ಎಂದು ಕರ್ನಾಟಕ ವಾದಿಸಿತ್ತು.
ತಮಿಳುನಾಡು ನಾವು 4.5 ಲಕ್ಷ ಎಕರೆಯಲ್ಲಿ ಬೆಳೆದ ಬೆಳೆ ಹಾನಿಯಾಗಲಿದೆ. ತಮಿಳುನಾಡಿಗೆ ನೀರಿನ ಅಗತ್ಯವಿದೆ ಎಂದು ಹೇಳಿತು. ನೀರಿನ ಆದೇಶಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಬರ ಪರಿಸ್ಥಿತಿ ಬಂದಾಗ ಪ್ರತಿ ಬಾರಿಯೂ ಹೀಗೆ ಆಗುತ್ತದೆ. ತಜ್ಞರ ಸಮಿತಿ, ಪರಿಸ್ಥಿತಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ. ಹೆಚ್ಚುವರಿ ನೀರಿಗೆ ಬೇಡಿಕೆ ಇಟ್ಟಿರುವ ತಮಿಳುನಾಡು ಅರ್ಜಿ ವಜಾ ಮಾಡಬೇಕು ಎಂದು ಕರ್ನಾಟಕ ಮನವಿ ಮಾಡಿತು.
ತಮಿಳುನಾಡು ನೀರಿನ ಕೊರತೆಯಾಗುತ್ತಿದೆ ಎನ್ನುತ್ತಿದೆ ಎಂದು ಸುಪ್ರಿಂ ಕೋರ್ಟ್ ಪ್ರಶ್ನಿಸಿತು. ಕೇವಲ ತಮಿಳುನಾಡು ಅಲ್ಲ, ಇಡೀ ಬೇಸಿನ್ನಲ್ಲಿ ನೀರಿನ ಕೊರತೆ ಇದೆ ಎಂದು ಕರ್ನಾಟಕ ವಾದಿಸಿತು. ಬರ ಇರುವ ಹಿನ್ನೆಲೆ ಬೇಸಿಗೆಯಲ್ಲಿ ಕುಡಿಯುವ ನೀರು, ಪರಿಸರ ಹಾಗೂ ಕೈಗಾರಿಕೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕರ್ನಾಟಕದಲ್ಲಿ ಮುಂಗಾರು ವಿಫಲವಾಗಿದೆ. ಹಿಂಗಾರು ಮಳೆ ತಮಿಳುನಾಡಿಗೆ ಲಾಭದಾಯಕವಾಗಿದೆ. ಕರ್ನಾಟಕದಲ್ಲಿ ನಾವು ಬರ ಘೋಷಿಸಿದ್ದೇವೆ ಎಂದು ತಿಳಿಸಿತು.
ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ಅಕ್ಟೋಬರ್ 12ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ಅಲ್ಲಿಯವರೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆ ಮುಂದುವರಿಸುವಂತೆ ಕರ್ನಾಟಕಕ್ಕೆ ಕೋರ್ಟ್ ಸೂಚನೆ ನೀಡಿದೆ. ತಮಿಳುನಾಡು ಸಲ್ಲಿಸಿದ ಆಕ್ಷೇಪಕ್ಕೆ ಅಫಿಡೆವಿಟ್ ಸಲ್ಲಿಕೆಗೆ ಸೂಚನೆ ನೀಡಲಾಗಿದೆ. ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡಲು ಸೂಚಿಸಲಾಗಿದೆ. ಆದೇಶ ಪಾಲನೆಯಾಗುತ್ತಿಲ್ಲ ಎಂದು ತಮಿಳುನಾಡು ಆಕ್ಷೇಪ ಸಲ್ಲಿಸಿತ್ತು.
