ಬೆಂಗಳೂರು, ಸೆ.24- ನಗರದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿರುವ ಘನತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ ಗೊಳಿಸಲು ರಾಜ್ಯ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಇದೇ ಮೊದಲ ಬಾರಿಗೆ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿತು.
ನಗರದ ನೆಹರು ತಾರಾಲಯದಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ನಡೆದ ಸಮಾಲೋಚನಾ ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು, ನಿವಾಸಿಗಳು ಹಾಗೂ ಎನ್ಜಿಒ ಕಾರ್ಯಕರ್ತರು ಭಾಗವಹಿಸಿ ಕಸದ ಸಮಸ್ಯೆ ಕುರಿತು ತಮ್ಮ ಅಹವಾಲು ಹಾಗೂ ಸಲಹೆಗಳನ್ನು ಹಂಚಿಕೊಂಡರು.ಎಲ್ಲೆಂದರಲ್ಲಿ ಕಸ ಸುರಿಯುವುದೇ ದೊಡ್ಡ ಸವಾಲು :ನಗರದ ಹಲವು ಪ್ರದೇಶಗಳಲ್ಲಿ ಸಾರ್ವಜನಿಕರು ರಸ್ತೆ ಬದಿ, ಖಾಲಿ ಜಾಗ ಹಾಗೂ ರಸ್ತೆ ಮೂಲೆಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವುದರಿಂದ ಸ್ವಚ್ಛತೆ ಹದಗೆಡುವುದಲ್ಲದೆ, ರಸ್ತೆ ಹಾಗೂ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ ಎಂದು ಸಚಿವರು ಹೇಳಿದರು.
ಎಷ್ಟೇ ದಂಡ ವಿಧಿಸಿದರೂ ಕೆಲವು ಕಡೆ ಜನರು ರಸ್ತೆ ಬದಿಯಲ್ಲೇ ಕಸ ಸುರಿಯುವುದನ್ನು ನಿಲ್ಲಿಸುತ್ತಿಲ್ಲ. ಕಸದ ಸಮಸ್ಯೆ ಪರಿಹಾರಕ್ಕೆ ಜಿಬಿಎ ಮಾತ್ರವಲ್ಲ, ಸಾರ್ವಜನಿಕರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಸ ತೆಗೆಯಲು ಹಣ ಕೇಳುತ್ತಿದ್ದಾರೆಂಬ ದೂರು:ಸಂವಾದದಲ್ಲಿ ಹಲವು ನಿವಾಸಿಗಳು ತಮ್ಮ ಪ್ರದೇಶಗಳಿಗೆ ಪ್ರತಿದಿನ ಕಸ ಸಂಗ್ರಹಿಸುವ ಆಟೋಗಳು ಬರುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು. ಕೆಲವೆಡೆ ಮನೆಗಳಿಂದ ಕಸ ಸಂಗ್ರಹಿಸಲು ಸಿಬ್ಬಂದಿ ಹಣ ಕೇಳುತ್ತಿದ್ದಾರೆ ಎಂಬ ದೂರುಗಳನ್ನೂ ಸಾರ್ವಜನಿಕರು ನೀಡಿದರು.
ಸಾರ್ವಜನಿಕರ ದೂರುಗಳನ್ನು ಸಚಿವರು ಒಪ್ಪಿಕೊಂಡು, ಮನೆ ಮನೆ ಕಸ ಸಂಗ್ರಹಣೆಯಲ್ಲಿ ಇನ್ನೂ ಸಮಸ್ಯೆಗಳಿರುವುದು ನಿಜ. ಇದನ್ನು ಹಂತ ಹಂತವಾಗಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
5,200 ಆಟೋಗಳಿಂದ ಕಸ ಸಂಗ್ರಹ :
ಪ್ರಸ್ತುತ ನಗರದಲ್ಲಿ ಸುಮಾರು 5,200 ಕಸ ಸಂಗ್ರಹಣಾ ಆಟೋಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಸುಮಾರು 5,200 ಟನ್ ಕಸವನ್ನು ಮನೆಗಳಿಂದ ಸಂಗ್ರಹಿಸಲಾಗುತ್ತಿದೆ. ಕಸ ಸಂಗ್ರಹಣಾ ವ್ಯವಸ್ಥೆಯನ್ನು ಬಲಪಡಿಸಲು ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ವರ್ಕ್ ಆರ್ಡರ್ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಹೊಸ ಟೆಂಡರ್ನಲ್ಲಿ ಹೆಚ್ಚಿನ ಸಾಮರ್ಥ್ಯದ ಆಟೋಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ವಾಹನಕ್ಕೆ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಇದರಿಂದ ಯಾವ ಆಟೋ ಯಾವ ಬೀದಿಗೆ ತೆರಳಿದೆ, ನಿಗದಿತ ಮಾರ್ಗದಲ್ಲಿ ಸಂಚರಿಸಿದೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗಲಿದೆ ಎಂದರು.
ಹೊಸ ಟೆಂಡರ್ ಅನ್ನು 21 ಟೆಂಡರ್ಗಳ ಮೂಲಕ 33 ಪ್ಯಾಕೇಜ್ಗಳಲ್ಲಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್ನಲ್ಲಿಯೂ ಕಸ ಸಂಗ್ರಹಣಾ ವ್ಯವಸ್ಥೆಯ ಬಗ್ಗೆ ವಿಶೇಷ ಪರಿಶೀಲನೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಸವನ್ನು ಮನೆಯಲ್ಲೇ ವಿಂಗಡಿಸಿ:
ಕೆಲವು ವಾರ್ಡ್ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸ್ಥಳೀಯ ಮಟ್ಟದಲ್ಲೇ ಕಾಂಪೋಸ್ಟ್ ಮಾಡುವ ವ್ಯವಸ್ಥೆ ರೂಪಿಸಬೇಕು. ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಂಗಡಿಸಿ, ನಿಗದಿತ ರೀತಿಯಲ್ಲಿ ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು ಎಂದು ಸಚಿವರು ಹೇಳಿದರು.ಬೆಳಗ್ಗೆ ಕೆಲಸಕ್ಕೆ ತೆರಳುವ ನಾಗರಿಕರು ಕಸವನ್ನು ಬ್ಯಾಗ್ ಅಥವಾ ಬಕೆಟ್ನಲ್ಲಿ ಸಂಗ್ರಹಿಸಿ ಇಟ್ಟರೆ, ಕಸ ಸಂಗ್ರಹಿಸುವ ವ್ಯವಸ್ಥೆ ಮೂಲಕ ಅದನ್ನು ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹಕರಿಸಿದರೆ ಮಾತ್ರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯ ಎಂದು ಮನವಿ ಮಾಡಿದರು.
ದಿನಕ್ಕೆ ಎರಡು ಬಾರಿ ಕಸ ಸಂಗ್ರಹಣೆಗೆ ಮನವಿ:ಕೆಲ ಪ್ರದೇಶಗಳಲ್ಲಿ ದಿನಕ್ಕೆ ಎರಡು ಬಾರಿ ಕಸ ಸಂಗ್ರಹಿಸಬೇಕು ಎಂಬ ಬೇಡಿಕೆಯೂ ಸಾರ್ವಜನಿಕರಿಂದ ಕೇಳಿಬಂದಿದೆ. ಈ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.ಶೇ.30 ಪೌರಕಾರ್ಮಿಕರು ಗೈರು?ಕೆಲವು ವಾರ್ಡ್ಗಳಲ್ಲಿ ಸುಮಾರು ಶೇ.30ರಷ್ಟು ಪೌರಕಾರ್ಮಿಕರು ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂಬ ಅಂಶವನ್ನೂ ಸಚಿವರು ಪ್ರಸ್ತಾಪಿಸಿದರು.
ಪೌರಕಾರ್ಮಿಕರು ಕೆಲಸಕ್ಕೆ ಹಾಜರಾಗದಿದ್ದರೆ ನಗರವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸಿದ ಅವರು, ಸಿಬ್ಬಂದಿಯ ಹಾಜರಾತಿ ಹಾಗೂ ಕಾರ್ಯನಿರ್ವಹಣೆಯ ಮೇಲೂ ಕಟ್ಟುನಿಟ್ಟಿನ ನಿಗಾ ಅಗತ್ಯವಿದೆ ಎಂದರು.ಸಾರ್ವಜನಿಕರ ಸಲಹೆ ಆಧರಿಸಿ ಕ್ರಮಮನೆ ಮನೆ ಕಸ ಸಂಗ್ರಹಣೆ ಸೇರಿದಂತೆ ಘನತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಸಾರ್ವಜನಿಕರೊಂದಿಗೆ ನೇರವಾಗಿ ಸಮಾಲೋಚನೆ ನಡೆಸಲಾಗಿದೆ.
ಸಂವಾದದಲ್ಲಿ ಬಂದ ಸಲಹೆಗಳನ್ನು ಪರಿಶೀಲಿಸಿ, ಸಾಧ್ಯವಿರುವ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಸುರಿಯದೆ, ಕಸ ವಿಂಗಡಣೆ ಮತ್ತು ಸಂಗ್ರಹಣೆಯಲ್ಲಿ ಜಿಬಿಎಗೆ ಸಹಕಾರ ನೀಡಿದರೆ ಮಾತ್ರ ಬೆಂಗಳೂರನ್ನು ಸ್ವಚ್ಛವಾಗಿಡಲು ಸಾಧ್ಯ ಎಂದು ಸಚಿವರು ಮನವಿ ಮಾಡಿದರು.
