ಹುಬ್ಬಳ್ಳಿ, ಮಾ.22- ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ದುರಹಂಕಾರದಿಂದ ಇಡಿ ಸಮನ್ಸ್ ಗಳಿಗೆ ಉತ್ತರಿಸಿಲ್ಲ. ಈಗಾಗಿ ಅವರ ಬಂಧನ ವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲವೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಎದುರು ಸತತವಾಗಿ ವಿಚಾರಣೆಗೆ ಹಾಜರಾಗದೇ ಇರುವುದರಿಂದ ಅವರ ಬಂಧನವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದವರು ತೆರಿಗೆ ಕಟ್ಟಿಲ್ಲ. ಹೀಗಾಗಿ ಅವರ ಬ್ಯಾಂಕ್ ಖಾತೆಗಳು ಸೀಜ್ ಆಗಿವೆ. ಆದಾಯ ತೆರಿಗೆ ಸಂಬಂಧಿತ ವಿಷಯದಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ. ಕಾಂಗ್ರೆಸ್ ಪಕ್ಷವನ್ನು ನಾವು ಶಕ್ತಿಹೀನ ಗೊಳಿಸುವ ಅಗತ್ಯವಿಲ್ಲ. ಜನರೇ ಶಕ್ತಿಹೀನಗೊಳಿಸಿದ್ದಾರೆಂದು ಹೇಳಿದರು.
ಮೇಕೆದಾಟು ಯೋಜನೆಯನ್ನು ನಿಲ್ಲಿಸುತ್ತೇವೆ ಎಂದು ಡಿಎಂಕೆ ನಾಯಕರು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಇದನ್ನು ಖಂಡಿಸುತ್ತಾರೆಯೇ? ಕಾಂಗ್ರೆಸ್ನವರು ನಮ್ಮ ನೀರು, ನಮ್ಮ ಹಕ್ಕು ಎಂದು ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಮಾಡಿದ್ದರು. ಈಗ ಏನು ಹೇಳುತ್ತಾರೆ? ರಾಹುಲ್ ಗಾಂಧಿ ಇದಕ್ಕೆ ಉತ್ತರ ಕೊಡಬೇಕು ಎಂದರು.
ಡಿಎಂಕೆ ನಿಲುವನ್ನು ಬಿಜೆಪಿ ಖಂಡಿಸುತ್ತದೆ ಎಂದು ಜೋಶಿ ನುಡಿದರು. ಹುಬ್ಬಳ್ಳಿ- ಧಾರವಾಡದಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೂ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದರು.