Sunday, December 1, 2024
Homeರಾಜ್ಯಅಭ್ಯರ್ಥಿಗಳನ್ನು ಗೆಲ್ಲಿಸದಿದ್ದರೆ ಸಚಿವರ ತಲೆದಂಡ

ಅಭ್ಯರ್ಥಿಗಳನ್ನು ಗೆಲ್ಲಿಸದಿದ್ದರೆ ಸಚಿವರ ತಲೆದಂಡ

ಬೆಂಗಳೂರು,ಮಾ.22- ಕಾಡಿ ಬೇಡಿ, ಹಠ ಹಿಡಿದು ಕುಟುಂಬದ ಸದಸ್ಯರಿಗೆ ಟಿಕೆಟ್ ಪಡೆದವರು, ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರದೇ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೈಕಮಾಂಡ್ ಷರತ್ತು ವಿಧಿಸಿರುವುದು ಸಂಪುಟದ ಸದಸ್ಯರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ಪೈಪೊಟಿ ರಾಜಕಾರಣದ ಭಾಗವಾಗಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಪುತ್ರಿ ಪ್ರಿಯಾಂಕ ಅವರಿಗೆ ಚಿಕ್ಕೋಡಿಯಿಂದ ಟಿಕೆಟ್ ಪಡೆದುಕೊಂಡಿದ್ದಾರೆ.ಇದಕ್ಕೆ ಎದಿರೇಟು ಎಂಬಂತೆ ಮಹಿಳಾ ಮತ್ತು ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಗೆ ತಮ್ಮ ಪುತ್ರ ಮೃಣಾಲ್ಗೆ ಟಿಕೆಟ್ ಗಿಟ್ಟಿಸಿದ್ದಾರೆ. ಆರಂಭದಲ್ಲಿ ಈ ಎರಡೂ ಕ್ಷೇತ್ರಗಳಿಗೆ ಸಾಮಾನ್ಯ ಕಾರ್ಯಕರ್ತರ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಇಬ್ಬರೂ ನಾಯಕರು ಪ್ರಭಾವಿಗಳಾಗಿರುವುದರಿಂದ ಸ್ಥಳೀಯ ಮುಖಂಡರ ಬಾಯಿ ಮುಚ್ಚಿಸಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಬೀದರ್ ಕ್ಷೇತ್ರಕ್ಕೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಪ್ರಬಲ ಆಕಾಂಕ್ಷಿಯಾಗಿದ್ದರು.ಒಂದು ಹಂತದಲ್ಲಿ ಕುಟುಂಬ ರಾಜಕಾರಣದ ಕೈ ಮೇಲಾಗುತ್ತಿದೆ. ತಮಗೆ ಅವಕಾಶ ಸಿಗುವುದಿಲ್ಲ ಎಂಬ ಸುಳಿವರಿತ ಅವರು, ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೇಸರಿ ಪಾಳೆಯವನ್ನು ಸೇರಲು ಮುಂದಾಗಿದ್ದರು.

ಅವರನ್ನು ಮನವೊಲಿಸಿದ ಕಾಂಗ್ರೆಸ್ ನಾಯಕರು ಟಿಕೆಟ್ ನೀಡುವ ಖಚಿತ ಭರವಸೆಯೊಂದಿಗೆ ಪಕ್ಷದಲ್ಲೇ ಉಳಿಸಿಕೊಂಡಿದ್ದರು. ಆದರೆ ಈಶ್ವರ್ ಖಂಡ್ರೆ ಲಿಂಗಾಯತ ಸಮುದಾಯದ ಟ್ರಂಪ್ ಕಾರ್ಡ್ ಬಳಸಿ ಶ್ಯಾಮನೂರು ಶಿವಶಂಕರಪ್ಪ ಅವರ ಪ್ರಭಾವದ ಮೂಲಕ ಪುತ್ರ ಸಾಗರ್ ಖಂಡ್ರೆ ಅವರಿಗೆ ಟಿಕೆಟ್ ಪಡೆದುಕೊಂಡಿದ್ದಾರೆ. ಕೊಪ್ಪಳದಲ್ಲಿ ಕೆ.ರಾಜಶೇಖರ್ ಹಿಟ್ನಾಳ್ಗೆ ಟಿಕೆಟ್ ನೀಡಲಾಗಿದೆ. ಈಗಾಗಲೇ ಇವರ ಸಹೋದರ ರಾಘವೇಂದ್ರ ಹಿಟ್ನಾಳ್ ಶಾಸಕರಾಗಿದ್ದಾರೆ.

ಪ್ರಮುಖವಾಗಿ ಬಾಗಲಕೋಟೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ಹಾಗೂ ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ರ್ಪಧಿಸಿದ್ದ ವೀಣಾ ಕಾಶಪ್ಪನವರ್ ಪ್ರಬಲ ಆಕಾಂಕ್ಷಿಯಾಗಿದ್ದರು. ಕೊನೆ ಕ್ಷಣದವರೆಗೂ ಅವರಿಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಗಳಿದ್ದವು. ಆದರೆ ಸಚಿವ ಶಿವಾನಂದ ಪಾಟೀಲ್ ಸ್ಥಳೀಯ ನಾಯಕರ ಮೇಲೆ ಪ್ರಭಾವ ಬೀರಿ ಹೈಕಮಾಂಡ್ ಮೇಲೂ ಒತ್ತಡ ಹೇರಿ ತಮ್ಮ ಪುತ್ರಿ ಸಂಯುಕ್ತ ಪಾಟೀಲ್ಗೆ ಟಿಕೆಟ್ ಪಡೆದುಕೊಂಡಿದ್ದಾರೆ.

ಸ್ಥಳೀಯವಾಗಿ ಕೆಲವು ನಾಯಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವೀಣಾ ಕಾಶಪ್ಪನವರ್ ಅವರನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ತಯಾರಿಯಲ್ಲಿದ್ದಾರೆ.ಒಂದು ವೇಳೆ ಸಂಯುಕ್ತ ಪಾಟೀಲ್ರನ್ನು ಗೆಲ್ಲಿಸಿಕೊಂಡು ಬರದೇ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೈಕಮಾಂಡ್ ಶಿವಾನಂದ ಪಾಟೀಲ್ರಿಗೆ ಸ್ಪಷ್ಟ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

ದಾವಣಗೆರೆಯಲ್ಲಿ ಶ್ಯಾಮನೂರು ಶಿವಶಂಕರಪ್ಪ ಅವರ ಮಾತೇ ಅಂತಿಮವಾಗಿದ್ದು, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ರಿಗೆ ಕಾಂಗ್ರೆಸ್ ನಾಯಕರು ತಾವಾಗಿಯೇ ಕಾಳಜಿ ವಹಿಸಿ ಟಿಕೆಟ್ ನೀಡುವಂತಹ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅದೇ ರೀತಿ ಬೆಂಗಳೂರು ದಕ್ಷಿಣದಲ್ಲಿ ಸಚಿವ ರಾಮಲಿಂಗಾರೆಡ್ಡಿಯವರು ತಮ್ಮ ಪುತ್ರಿ ಸೌಮ್ಯರೆಡ್ಡಿ ಅವರನ್ನು ಕಣಕ್ಕಿಳಿಸುವುದು ಬೇಡ ಎಂದು ಮೇಲ್ನೋಟಕ್ಕೆ ಹೇಳಿದ್ದರು. ಆದರೆ ಆಂತರಿಕವಾಗಿ ರಾಮಲಿಂಗಾರೆಡ್ಡಿ ಅವರನ್ನು ಹೊರತುಪಡಿಸಿದರೆ ದಕ್ಷಿಣ ಕ್ಷೇತ್ರದಲ್ಲಿ ಚುನಾವಣೆ ನೆರವೇರಿಸುವ ನಾಯಕರ ಕೊರತೆ ಇದ್ದಿದ್ದರಿಂದಾಗಿ ಕಾಂಗ್ರೆಸ್ ತಾನಾಗಿಯೇ ಬಾಗಿನದ ತಟ್ಟೆಯಲ್ಲಿ ಸೌಮ್ಯರೆಡ್ಡಿ ಅವರಿಗೆ ಟಿಕೆಟ್ ನೀಡುವಂತಾಗಿದೆ.

ಮೊದಲ ಹಂತದಲ್ಲೇ ಟಿಕೆಟ್ ಘೋಷಣೆಯಾದ ಶಿವಮೊಗ್ಗ ಕ್ಷೇತ್ರದ ಪರಿಸ್ಥಿತಿಯೂ ಹೀಗೇ ಆಗಿತ್ತು. ಸಚಿವ ಮಧು ಬಂಗಾರಪ್ಪ ಸಂಪೂರ್ಣ ಹೊಣೆಗಾರಿಕೆ ವಹಿಸಿಕೊಂಡು ತಮ್ಮ ಸಹೋದರಿ ಗೀತಾ ಶಿವರಾಜ್ಕುಮಾರ್ರನ್ನು ಕಣಕ್ಕಿಳಿಸಿದ್ದಾರೆ.ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ರ್ಪಸದೆ ತಮ್ಮ ಕ್ಷೇತ್ರವನ್ನು ಅಳಿಯ ರಾಧಾಕೃಷ್ಣ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಆದರೂ ಇಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಗಲಿಗೆ ಹೊರಿಸಲಾಗಿದೆ.

ಚಾಮರಾಜನಗರ ಕ್ಷೇತ್ರಕ್ಕೆ ತಮ್ಮ ಪುತ್ರನಿಗೇ ಟಿಕೆಟ್ ನೀಡಬೇಕೆಂದು ಸಚಿವ ಎಚ್.ಸಿ.ಮಹದೇವಪ್ಪ ಕೊನೆ ಕ್ಷಣದವರೆಗೂ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಹೈಕಮಾಂಡ್ ಹಠಕ್ಕೆ ಮಣಿದು ಟಿಕೆಟ್ ನೀಡಿದರೆ ಎಚ್.ಸಿ.ಮಹದೇವಪ್ಪನವರ ಸಚಿವ ಸ್ಥಾನದ ಮೇಲೂ ತೂಗುಗತ್ತಿ ನೇತಾಡಲಿದೆ.

ಶಿವಮೊಗ್ಗ, ಬೆಳಗಾವಿ, ಚಿಕ್ಕೋಡಿ, ಬೀದರ್, ಬಾಗಲಕೋಟೆ, ಚಾಮರಾಜನಗರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲದೇ ಇದ್ದರೆ ಸಚಿವರು ತಲೆದಂಡ ತೆರಬೇಕಾದಂತಹ ಪರಿಸ್ಥಿತಿ ಎದುರಾಗಲಿದೆ.ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳ ಸೋಲು ಗೆಲುವಿಗೆ ಆಯಾ ಸಚಿವರೇ ಹೊಣೆಗಾರಿಕೆ ಎಂದು ಈಗಾಗಲೇ ನಿರ್ದೇಶನ ನೀಡಲಾಗಿದೆ. ಆದರೆ ಕುಟುಂಬದ ಸದಸ್ಯರಿಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದು ಅವಕಾಶ ಪಡೆದುಕೊಂಡವರು ಮತ್ತು ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ತಪ್ಪಿಸಿದವರಿಗೆ ಅಧಿಕಾರದ ತ್ಯಾಗ ಸ್ವಯಂ ದಂಡನೆ ಅನುಭವಿಸುವಂತೆ ರಾಜ್ಯ ವರಿಷ್ಠರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Latest News