ಬೆಂಗಳೂರು, ಸೆ.25- ಖಾಲಿ ಸೈಟ್ನಲ್ಲಿ ಒಡಿಶಾ ಮೂಲದ ಮಹಿಳೆಯ ಶವ ಪತ್ತೆಯಾದ ಪ್ರಕರಣವನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬೇಧಿಸಿ, ಆರೋಪಿಯನ್ನು ಕೊನೆಗೂ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾದ ಮಹಿಳೆಯನ್ನು ಅನುಸೂಯ (28) ಎಂದು ಗುರುತಿಸಲಾಗಿದೆ. ಈಕೆ ಮೂಲತಃ ಒಡಿಶಾದವರು.
ನಗರದಲ್ಲಿರುವ ಖಾಲಿ ಸೈಟ್ಗಳನ್ನು ಮಾಲೀಕರು ಸ್ವಚ್ಛಗೊಳಿಸುವಂತೆ ಜಿಬಿಎ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಂಪಿಗೆಹಳ್ಳಿ ಬಳಿಯ ಎಂಎಸ್ ನಗರ ಅಗ್ರಹಾರ ಲೇಔಟ್ನ ಖಾಲಿ ಸೈಟ್ನಲ್ಲಿ ಗಿಡ-ಗಂಟೆಗಳನ್ನು ಮಾಲೀಕರು ಸ್ವಚ್ಛಗೊಳಿಸುತ್ತಿದ್ದಾಗ, ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಕಂಡು ಕೂಲಿ ಕಾರ್ಮಿಕರು ಬೆಚ್ಚಿಬಿದ್ದಿದ್ದರು.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಶವದ ಮೈಮೇಲಿದ್ದ ಬಟ್ಟೆಯಲ್ಲಿ ಮಾಲ್ವೊಂದರ ಟ್ಯಾಗ್ ಸಿಕ್ಕಿತ್ತು. ಅದರ ಬಿಲ್ ಆಧಾರದ ಮೇಲೆ ಮಾಲ್ ಸಂಪರ್ಕಿಸಿದಾಗ, ಆ ಮಹಿಳೆಯ ಹೆಸರು ಅನುಸೂಯ ಎಂಬುದು ಗೊತ್ತಾಗಿದೆ.
ಆಕೆಯ ವಿಳಾಸ ಪತ್ತೆಹಚ್ಚಿದಾಗ ಎಂಎಸ್ ನಗರ ಅಗ್ರಹಾರ ಲೇಔಟ್ ಎಂಬುದು ತಿಳಿದುಬಂದಿದ್ದು, ಪೊಲೀಸರು ಆ ಸ್ಥಳಕ್ಕೆ ಹೋಗಿ ಕೊನೆಗೂ ಮಹಿಳೆ ವಾಸವಾಗಿದ್ದ ಬಾಡಿಗೆ ಮನೆಯನ್ನು ಪತ್ತೆಹಚ್ಚಿದ್ದಾರೆ.
ಆ ಮನೆ ಬಳಿ ಹೋದಾಗ ಬೀಗ ಹಾಕಿರುವುದು ಕಂಡುಬಂದಿದೆ. ನೆರೆಹೊರೆಯವರನ್ನು ವಿಚಾರಿಸಿದಾಗ, ಈ ಮನೆಯಲ್ಲಿ ಒಡಿಶಾ ಮೂಲದ ಸಾಗರ್ಚಂದ್ರ ರಾವತ್ (35) ದಂಪತಿ ವಾಸವಾಗಿದ್ದರು ಎಂಬುದು ಗೊತ್ತಾಗಿದೆ.
ಈ ಮಾಹಿತಿ ಮೇರೆಗೆ ಪೊಲೀಸರು ತನಿಖೆ ಚುರುಕುಗೊಳಿಸಿ, ಕೊನೆಗೂ ಒಡಿಶಾ ಮೂಲದ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಐದು ವರ್ಷಗಳ ಹಿಂದೆ ಒಡಿಶಾದಿಂದ ನಗರಕ್ಕೆ ಬಂದಿರುವ ಸಾಗರ್ಚಂದ್ರ ರಾವತ್ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದನು. ಒಡಿಶಾ ಯುವತಿಯನ್ನು ಮದುವೆ ಮಾಡಿಕೊಂಡು ಎರಡು ವರ್ಷಗಳ ಹಿಂದೆ ಪತ್ನಿಯನ್ನು ಕರೆದುಕೊಂಡು ಬಂದು, ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ದಂಪತಿ ವಾಸಿಸುತ್ತಿದ್ದರು.
ಕಳೆದ ಆ.11ರಂದು ದಂಪತಿ ನಡುವೆ ಹಣಕಾಸಿನ ವಿಚಾರಕ್ಕೆ ಮನೆಯಲ್ಲಿ ಗಲಾಟೆಯಾಗಿದೆ. ಕೋಪದಲ್ಲಿ ಆತ ಪತ್ನಿಗೆ ಹೊಡೆದಿದ್ದಾನೆ. ಆಕೆ ಕೆಳಗೆ ಬಿದ್ದಾಗ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ನಂತರ ಏನು ಮಾಡುವುದೆಂದು ಗೊತ್ತಾಗದೇ ಮೂರು ದಿನ ಪತ್ನಿಯ ಶವದೊಂದಿಗೆ ಮನೆಯಲ್ಲಿ ಕಾಲ ಕಳೆದಿದ್ದಾನೆ. ತಾನು ಸಿಕ್ಕಿಬೀಳುವ ಭಯದಲ್ಲಿ ಮಾರನೇ ದಿನ ಮಧ್ಯರಾತ್ರಿ ಹಾಸಿಗೆಯಲ್ಲಿ ಪತ್ನಿಯ ಶವವನ್ನು ಸುತ್ತಿಕೊಂಡು ಹೊರಗೆ ಹೋಗಿ ಖಾಲಿ ಸೈಟ್ನಲ್ಲಿ ಬಿಸಾಡಿದ್ದಾನೆ ಎನ್ನಲಾಗಿದೆ.
ವಾಪಸ್ ಬಂದು ತನಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದನು. ಕೊಲೆ ನಡೆದು 20 ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
