Homeರಾಜ್ಯಅ.30ರಿಂದ ಹಾಸನಾಂಬ ದರ್ಶನ

ಅ.30ರಿಂದ ಹಾಸನಾಂಬ ದರ್ಶನ

ಹಾಸನ,ಸೆ.25- ವರ್ಷಕ್ಕೊಮೆ ಮಾತ್ರ ದರ್ಶನ ನೀಡುವ ನಾಡಿನ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವವನ್ನು ಈ ಬಾರಿ ಶ್ರದ್ಧಾಭಕ್ತಿ ಹಾಗೂ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್‌‍. ಲತಾಕುಮಾರಿ ತಿಳಿಸಿದ್ದಾರೆ.
ಹಾಸನಾಂಬ ಜಾತ್ರಾ ಮಹೋತ್ಸವದ ಸಿದ್ಧತೆ, ಸಾರ್ವಜನಿಕ ದರ್ಶನದ ದಿನಾಂಕಗಳು ಹಾಗೂ
ವಿವಿಧ ಕಾರ್ಯಕ್ರಮಗಳ ಕುರಿತು ಸುದ್ದಿಗಾರರಿಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಹಾಸನಾಂಬ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಅ. 29ರಂದು ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ತೆರೆಯಲಾಗುವುದು. ಅಂದು ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ.

ಅ. 30ರಿಂದ ನ.10ರವರೆಗೆ ಸತತ 12 ದಿನಗಳ ಕಾಲ ಭಕ್ತರಿಗೆ ಹಾಸನಾಂಬ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ಅವಧಿಯಲ್ಲಿ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ.ನ. 11ರಂದು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚಲಾಗುವುದು.

ನಾಳೆ ಪೋಸ್ಟರ್‌-ವೆಬ್‌ಸೈಟ್‌ ಬಿಡುಗಡೆ:
ಜಾತ್ರಾ ಮಹೋತ್ಸವದ ಪ್ರಚಾರ ಹಾಗೂ ಭಕ್ತರಿಗೆ ಅಗತ್ಯ ಮಾಹಿತಿ ಒದಗಿಸುವ ಉದ್ದೇಶದಿಂದ ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಹಾಸನಾಂಬ ಜಾತ್ರೆಯ ಅಧಿಕತ ಪೋಸ್ಟರ್‌ ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಭಕ್ತರ ಅನುಕೂಲಕ್ಕಾಗಿ ವಿಶೇಷ ವೆಬ್‌ಸೈಟ್‌ಗೂ ಚಾಲನೆ ನೀಡಲಾಗುವುದು.

ವೆಬ್‌ಸೈಟ್‌ನಲ್ಲಿ ದರ್ಶನದ ದಿನಾಂಕಗಳು, ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ಒದಗಿಸಲು ಜಿಲ್ಲಾಡಳಿತ ಉದ್ದೇಶಿಸಿದೆ.ಸರಳ ಆಚರಣೆ: ಈ ಬಾರಿ ಜಿಲ್ಲೆಯ ಏಳೂ ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವವನ್ನು ಅತಿಯಾದ ಅದ್ದೂರಿತನವಿಲ್ಲದೆ, ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಗಳಿಗೆ ಆದ್ಯತೆ ನೀಡಿ ಸರಳವಾಗಿ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಆಹಾರ ಮೇಳ:
ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರಿಗೆ ಮನರಂಜನೆ ಮತ್ತು ಸ್ಥಳೀಯ ಕಲಾಸಾಹಿತ್ಯ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ರೂಪಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

RELATED ARTICLES
spot_img

Latest News