ಮೈಸೂರು,ಸೆ.25- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಅಂಬಾವಿಲಾಸ ಅರಮನೆ ಆವರಣದಲ್ಲಿಂದು ಫಿರಂಗಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಪೂರ್ವ ತಾಲೀಮೆಗೆ ಚಾಲನೆ ನೀಡಲಾಯಿತು.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಟ್ಕರ್ ಅವರ ನೇತೃತ್ವದಲ್ಲಿ 11 ಫಿರಂಗಿಗಳಿಗೆ ಪೂಜೆ ಸಲ್ಲಿಸಲಾಗಿದ್ದು, ಕುಶಾಲು ತೋಪುಗಳ ಸಿಡಿಮದ್ದು ವೇಳೆ ಯಾವುದೇ ಅವಘಡ ಸಂಭವಿಸದಂತೆ ಹಾಗೂ ಸುರಕ್ಷಿತವಾಗಿ ಕುಶಾಲು ತೋಪು ಸಿಡಿಸುವ ಹಿನ್ನೆಲೆಯಲ್ಲಿ ಫಿರಂಗಿ ಗಾಡಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಪೂಜೆ ಸಲ್ಲಿಸುವುದು ಸಂಪ್ರದಾಯ.
ಜಂಬೂ ಸವಾರಿ ದಿನದಂದು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಸಂದರ್ಭದಲ್ಲಿ 21 ಕುಶಾಲು ತೋಪು ಸಿಡಿಸುವುದು ವಾಡಿಕೆ. ಇದಕ್ಕಾಗಿ ಆನೆ ಮತ್ತು ಕುದುರೆಗಳು ಶಬ್ದಕ್ಕೆ ಬೆಚ್ಚಿ ಬೀಳದಂತೆ ನೋಡಿಕೊಳ್ಳಲು ಕುಶಾಲುತೋಪುಗಳನ್ನು ಸಿಡಿಸಿ ತರಬೇತಿ ನೀಡಲಾಗುತ್ತದೆ. ಈ ತಾಲೀಮಿನಲ್ಲಿ 35ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗವಹಿಸಲಿದ್ದು, ಪೂಜೆಯೊಂದಿಗೆ ದಸರಾ ಮಹೋತ್ಸವದ ಸಿದ್ಧತೆಗೆ ಚಾಲನೆ ದೊರೆತಂತಾಗಿದೆ.
