ಬೆಂಗಳೂರು, ಮಾ.22- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್ಗಳ ವ್ಯಾಪ್ತಿಯ ಚರಂಡಿಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಇಂಗು ಗುಂಡಿ ಗಳನ್ನು ನಿರ್ಮಿಸುವ ಮೂಲಕ ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹಾಗೂ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ಮುಖ್ಯ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.
ಮಳೆಗಾಲ ಆರಂಭಕ್ಕೆ ದಿನಗಣನೆ ಆರಂಭವಾಗಿ ರುವ ಸಂದರ್ಭದಲ್ಲೇ ಚರಂಡಿ ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ. ನಗರದಲ್ಲಿ ನೀರಿನ ಅಂತರ್ಜಲದ ಮಟ್ಟ ಸರಾಸರಿ 1,200 ರಿಂದ 1,400 ಅಡಿಗಳಷ್ಟಿರುತ್ತದೆ ಹಾಗೂ ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಬೆಂಗಳೂರು ನಾಗರಿಕರಿಗೆ ಕುಡಿಯುವ ನೀರು ಮತ್ತು ಇತರೆ ಕಾರ್ಯಗಳಿಗೆ ಬಳಸಲು ನೀರಿನ ಕೊರತೆ ಎದುರಾಗಿದೆ.
ಹೀಗಾಗಿ ಯಡಿಯೂರು ವಾರ್ಡ್ನ ರಸ್ತೆಗಳ ಚರಂಡಿಗಳಲ್ಲಿ 400 ಲೀಟರ್ ಸಾಮಥ್ರ್ಯದ ಮಳೆ ನೀರು ಇಂಗು ಗುಂಡಿ ಹಾಗೂ ಉದ್ಯಾನವನಗಳಲ್ಲಿ 12 ಸಾವಿರ ಲೀಟರ್ ಸಾಮಥ್ರ್ಯದ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಮಾತ್ರವಲ್ಲ ಎಲ್ಲಾ 51 ಕೊಳವೆಬಾವಿ ನೀರನ್ನು ಆಯಾ ಕುಡಿಯುವ ನೀರಿಗೆ ಸಂಪರ್ಕ ಮಾಡಲಾಗಿದೆ. ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ನೀರಿನ ಅಂತರ್ಜಲದ ಮಟ್ಟ ಕೇವಲ 213 ಅಡಿಗಳು ಇರುವುದರಿಂದ ಎಲ್ಲಾ 51 ಕೊಳವೆ ಬಾವಿಗಳೂ ಸಹ ಸದಾ ಕಾಲ ಯಥೇಚ್ಛವಾಗಿ ನೀರು ಪೂರೈಸಲು ಯಾವುದೇ ಸಮಸ್ಯೆ ಇದುವರೆಗೆ ತಲೆ ದೋರಿರುವುದಿಲ್ಲ. ಹಾಗಾಗಿಯೇ ಯಡಿಯೂರು ವಾರ್ಡ್ ನ 18 ಬಡಾವಣೆಗಳಲ್ಲಿರುವ 11,535 ಮನೆಗಳ ಪೈಕಿ ಯಾವ ಒಂದು ಮನೆಯಲ್ಲಿಯೂ ಸಹ ಕುಡಿಯುವ ನೀರಿನ ಕೊರತೆ ಕಳೆದ ಒಂದೂವರೆ ದಶಕದಿಂದ ಇದುವರೆವಿಗೆ ಕಂಡು ಬಂದಿರುವುದಿಲ್ಲ.
ಆದುದರಿಂದ, ಇದೇ ರೀತಿ ಇನ್ನುಳಿದ 197 ವಾರ್ಡ್ ಗಳ ವ್ಯಾಪ್ತಿಯ ಚರಂಡಿಗಳ ಹೂಳೆತ್ತುವ ಸಂದರ್ಭದಲ್ಲಿ ಮತ್ತು ಚರಂಡಿಗಳ ಪುನರ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಪ್ರತೀ 30 ರಿಂದ 40 ಅಡಿಗಳಿಗೆ ಒಂದರಂತೆ ಕನಿಷ್ಠ 400 ಲೀಟರ್ ಸಾಮಥ್ರ್ಯದ ಮಳೆ ನೀರು ಇಂಗು ಗುಂಡಿಗಳನ್ನು ಹಾಗೂ ಆಯಾ ವಾರ್ಡ್ ವ್ಯಾಪ್ತಿಯ ಉದ್ಯಾನವನಗಳಲ್ಲಿ 4,000 ಲೀಟರ್ ಗಳಿಂದ 12,000 ಲೀಟರ್ ವರೆಗಿನ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಲು ಕಠಿಣ ರೀತಿಯಲ್ಲಿ ಕ್ರಮ ತೆಗೆದುಕೊಂಡಿದ್ದೇ ಆದಲ್ಲಿ ಮುಂದಿನ ನಾಲ್ಕೈದು ದಶಕಗಳ ಕಾಲ ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎಂದಿಗೂ ಬರುವುದಿಲ್ಲ ಎಂದು ಅವರು ಆಡಳಿತಾಕಾರಿ ರಾಕೇಶ್ಸಿಂಗ್ ಹಾಗೂ ಮುಖ್ಯ ಆಯುಕ್ತ ತುಷಾರ್ಗಿರಿನಾತ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕಾರ್ಯಪಾಲಕ ಅಭಿಯಂತರರಿಗೆ, ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಅಧಿಕಾರಿಗಳಿಗೆ ಮತ್ತು ತೋಟಗಾರಿಕೆ ಇಲಾಖೆಯ ಅೀಕ್ಷಕರುಗಳಿಗೆ ಮಳೆ ನೀರು ಇಂಗು ಗುಂಡಿಗಳ ನಿರ್ಮಾಣ ಕಡ್ಡಾಯವೆಂಬ ಸುತ್ತೋಲೆಯನ್ನು ಹೊರಡಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮತ್ತು ಆ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.